ನಾಗರಾಜ ಎಸ್.ಬಡದಾಳ್, ಕನ್ನಡಪ್ರಭ

ನವದೆಹಲಿ[ಮೇ.19]: ಪ್ರಧಾನಿ ನರೇಂದ್ರ ಮೋದಿ ಶನಿವಾರ ಶ್ರೀ ಕೇದಾರನಾಥನ ಸನ್ನಿಧಿಯಲ್ಲಿ ಜ್ಯೋತಿರ್ಲಿಂಗಕ್ಕೆ ರುದ್ರಾಭಿಷೇಕ, ಬಿಲ್ವಾರ್ಚಕ ಪೂಜೆ ನೆರವೇರಿಸಿದರು. ಪವಿತ್ರ ಕೇದಾರದ ಕ್ಷೇತ್ರಕ್ಕೆ ಬೆಳಿಗ್ಗೆ 9.20ಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ 9.30ಕ್ಕೆ ಶ್ರೀ ಕೇದಾರೇಶ್ವರ ದೇವಸ್ಥಾನದೊಳಗೆ ಪ್ರವೇಶಿಸಿದರು. ನಂತರ ಶ್ರೀ ಕ್ಷೇತ್ರದ ಪ್ರಧಾನ ಅರ್ಚಕರಾದ ಅರ್ಚಕರಾಗಿ ದಾವಣಗೆರೆ ಜಿಲ್ಲೆ ಜಗಳೂರು ತಾ. ಕಣ್ವಕುಪ್ಪೆ ಗವಿ ಮಠದ ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ಷೋಡಪೋಪಚಾರ ಹಾಗೂ ರುದ್ರಾಭಿಷೇಕ ನೆರವೇರಿಸಿದರು.

ಕೇದಾರನಾಥದ ಜ್ಯೋತಿರ್ಲಿಂಗದ ಭಸ್ಮ, ತಿಲಕಧಾರಣೆ ಮಾಡಿಕೊಂಡ ಮೋದಿ ತಮ್ಮ ಮನಸ್ಸಿನಲ್ಲಿ ಲೋಕ ಕಲ್ಯಾಣ, ವಿಶ್ವ ಶಾಂತಿ ಸೇರಿದಂತೆ ಸಾಕಷ್ಟು ಸಂಕಲ್ಪ ಮಾಡಿಕೊಂಡು, ಷೋಡಸೋಪಚಾರ, ರುದ್ರಾಭಿಷೇಕ ನಂತರ ಮಹಾ ಮಂಗಳಾರತಿ ನೆರವೇರಿಸಿದರು. ನಂತರ ಕೇದಾರ ಜ್ಯೋತಿ ರ್ಲಿಂಗದ ಪರಿಕ್ರಮ ನೆರವೇರಿತು. ಜ್ಯೋತಿರ್ಲಿಂಗಕ್ಕೆ ಬಿಲ್ವಾರ್ಚಕ ಪೂಜೆಯನ್ನೂ ಮೋದಿ ಮಾಡಿದರು. ಧಾರ್ಮಿಕ ಕಾರ್ಯಗಳ ನಂತರ ಮೋದಿ ಸುಮಾರು ಹೊತ್ತು ಕೇದಾರನಾಥನ ಸನ್ನಿಧಿಯಲ್ಲಿ ಧ್ಯಾನ ಮಗ್ನರಾ ದರು. ನಂತರ ಕೆಲ ಹೊತ್ತು ಪ್ರಧಾನಿ ಮೋದಿ ಹಾಗೂ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಜೊತೆಗೆ ಕೆಲ ಕ್ಷಣ ಚರ್ಚಿಸಿದರು.

ಇದೇ ವೇಳೆ ಕಣ್ವಕುಪ್ಪೆ ಗವಿ ಮಠದ ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ದೇಶದ ಪ್ರಧಾನಿಯೊಬ್ಬರು ಇಷ್ಟೊಂದು ಶ್ರದ್ಧೆ, ಭಕ್ತಿಯಿಂದ ಶ್ರೀ ಕೇದಾರನಾಥನ ಸನ್ನಿಧಿಯಲ್ಲಿ ಪೂಜೆ, ಪ್ರಾರ್ಥನೆ, ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಂಡ ಬಗ್ಗೆ ಮೆಚ್ಚಿ, ನಿಮ್ಮ ಶ್ರದ್ಧೆ, ಭಕ್ತಿ ನೋಡಿ ಸಂತೋಷವಾಯಿತು ಎಂಬುದಾಗಿ ಹೇಳಿದ್ದಾರೆ. ಅದಕ್ಕೆ ನೆಲದಲ್ಲೇ ಧ್ಯಾನದಲ್ಲಿ ಕುಳಿತಿದ್ದ ನರೇಂದ್ರ ಮೋದಿ ತಮ್ಮ ಆರಾಧ್ಯ ದೈವ ಶ್ರೀ ಕೇದಾರ ಜ್ಯೋತಿರ್ಲಿಂಗದತ್ತ ಕೈ ಮುಗಿದು ತೋರಿಸುತ್ತಾ, ‘ಏ ಸಬ್ ಪ್ರಭು ಕಾ ಆಶೀರ್ವಾದ್ ಹೈ’(ಇದೆಲ್ಲಾ ಆ ಪ್ರಭುವಿನ ಆಶೀರ್ವಾದ) ಎಂಬುದಾಗಿ ಕೈ ಮುಗಿದಿದ್ದಾರೆ. ಮೋದಿ ಭೇಟಿ ವೇಳೆ ದೇಗುಲದಲ್ಲಿ ದಾವಣಗೆರೆ ಜಿಲ್ಲೆ ಭಾನುವಳ್ಳಿ ಗ್ರಾಮದ ವಾಗೀಶ ಸ್ವಾಮಿ, ಬೆಳಗಾವಿ ಜಿಲ್ಲೆ ಮೂಲದ ಶ್ರೀ ಮೃತ್ಯುಂಜಯ ಸ್ವಾಮಿ ಕೂಡಾ ಇದ್ದರು.

ಇಂದು ಮತ್ತೆ ದರ್ಶನ: ಶನಿವಾರ ರಾತ್ರಿ ಗುಹೆಯಲ್ಲಿ ಧ್ಯಾನ ಮಾಡಿದ ಬಳಿಕ ಮೇ.19ರಂದು ಬೆಳಿಗ್ಗೆ 6.30ಕ್ಕೆ ಪ್ರಧಾನಿ ಮೋದಿ ಮತ್ತೆ ಶ್ರೀ ಕೇದಾರನಾಥನ ಸನ್ನಿಧಿಗೆ ಬಂದು, ಪಂಚಾಮೃತ ಅಭಿಷೇಕನೆರವೇರಿಸುವರು. ಕೇದಾರ ಜ್ಯೋತಿರ್ಲಿಂಗ ದರ್ಶನ ಪಡೆದ ನಂತರ ಮೋದಿ ಬದರೀನಾಥಕ್ಕೆ ತೆರಳಲಿದ್ದಾರೆ.

ಗುಹೆಯಲ್ಲಿ ರಾತ್ರಿಯಿಡೀ ಪ್ರಧಾನಿ ಮೋದಿ ಧ್ಯಾನ

ಕೇದಾರನಾಥ ದೇಗುಲದಲ್ಲಿ ಶಿವನ ದರ್ಶನ ಪಡೆದು, ದೇವಸ್ಥಾನದ ಸುತ್ತ ಓಡಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಬಳಿಕ 2 ಕಿ.ಮೀ. ಬೆಟ್ಟ ಹತ್ತಿದರು. ಅಲ್ಲಿ ಪವಿತ್ರ ಗುಹೆಯೊಂದರಲ್ಲಿ ಕುಳಿತು ಧ್ಯಾನ ಆರಂಭಿಸಿದರು. ಮೋದಿ ಅವರ ಧ್ಯಾನದ ಫೋಟೋಗಳು ವೈರಲ್ ಆಗಿವೆ. ಮೋದಿ ಅವರು ಧ್ಯಾನ ಮಾಡುತ್ತಿರುವ ಆರಂಭಿಕ ಚಿತ್ರಗಳನ್ನು ಸೆರೆ ಹಿಡಿಯಲು ಮಾಧ್ಯಮಗಳಿಗೆ ಅವಕಾಶ ನೀಡಲಾಯಿತು. ಬಳಿಕ ಎಲ್ಲರನ್ನೂ ಕಳುಹಿಸಲಾಯಿತು. ಹಿಮಾಲಯದ ಗುಹೆಯಲ್ಲಿ ಮೋದಿ ಭಾನುವಾರ ಬೆಳಗ್ಗೆವರೆಗೂ ಧ್ಯಾನ ಮಾಡಲಿದ್ದಾರೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.