ಪ್ರಧಾನಿ ನರೇಂದ್ರ ಮೋದಿ ಇದೀಗ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ. ರೈತರ ಸಾಲ ಮನ್ನಾ ಮಾಡಲು ದೋಸ್ತಿ ಸರ್ಕಾರ ಒದ್ದಾಡುತ್ತಿದೆ ಎಂದು ಹೇಳಿದ್ದಾರೆ.
ಮಂಡಸೌರ್: ಕರ್ನಾಟಕದ ಜೆಡಿಎಸ್-ಕಾಂಗ್ರೆಸ್ ಸರ್ಕಾರದ ರೈತರ ಸಾಲ ಮನ್ನಾ ಯೋಜನೆ ವಿಫಲವಾಗಿದೆ’ ಎಂಬ ತಮ್ಮ ಆರೋಪ ಪುನರುಚ್ಚರಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ‘ದೋಸ್ತಿ ಸರ್ಕಾರವು ಇದನ್ನು ಜಾರಿ ಮಾಡಲು ಆಗದೇ ಒದ್ದಾಡುತ್ತಿದೆ’ ಎಂದು ಟೀಕಿಸಿದ್ದಾರೆ.
ರೈತರ ಮೇಲೆ ಗೋಲಿಬಾರ್ ನಡೆದಿದ್ದ ಸ್ಥಳವಾದ ಮಧ್ಯಪ್ರದೇಶದ ಮಂಡಸೌರ್‌ನಲ್ಲಿ ಶನಿವಾರ ಬಿಜೆಪಿ ವಿಧಾನಸಭೆ ಚುನಾವಣಾ ರಾರಯಲಿಯಲ್ಲಿ ಮಾತನಾಡಿದ ಮೋದಿ, ‘ಜೆಡಿಎಸ್‌ಗೆ ತಾನು ಅಧಿಕಾರಕ್ಕೆ ಬರಲ್ಲ ಎಂದು ಚುನಾವಣೆಗೆ ಮುಂಚೆ ಮನವರಿಕೆಯಾಗಿತ್ತು. ಅದಕ್ಕೇ ಅದು ತನ್ನ ಗಂಟೇನು ಹೋಗುತ್ತೆ ಎಂದು ಭಾವಿಸಿ ಸುಖಾಸುಮ್ಮನೇ ರೈತರ ಸಾಲ ಮನ್ನಾ ಭರವಸೆ ನೀಡಿತ್ತು’ ಎಂದು ಲೇವಡಿ ಮಾಡಿದರು.
‘ಆದರೆ ಚುನಾವಣೆ ಬಳಿಕ ಬದಲಾದ ಪರಿಸ್ಥಿತಿಯಲ್ಲಿ ದೇವೇಗೌಡರ ಪಕ್ಷದೊಂದಿಗೆ ಕಾಂಗ್ರೆಸ್ ಪಕ್ಷ ಹಿಂಬಾಗಿಲಿನಿಂದ ಪ್ರವೇಶಿಸಿ ಅಧಿಕಾರ ಹಿಡಿಯಿತು. ಈಗ ಕೊಟ್ಟಭರವಸೆಯಂತೆ ಸಾಲ ಮನ್ನಾ ಮಾಡಲು ಆಗದೇ ದೋಸ್ತಿ ಸರ್ಕಾರ ಒದ್ದಾಡುತ್ತಿದೆ. ಇದರ ವಿರುದ್ಧ ಕರ್ನಾಟಕದ ರೈತರು ಬೀದಿಗೆ ಬಂದು ಪ್ರತಿಭಟಿಸುತ್ತಿದ್ದಾರೆ. ಆದರೆ ರೈತರ ವಿರುದ್ಧ ವಾರಂಟ್ ಹೊರಡಿಸಲಾಗುತ್ತಿದೆ. ಅವರನ್ನು ಜೈಲಿಗೆ ಅಟ್ಟಲಾಗುತ್ತಿದೆ. ಇಂತಹ ಸುಳ್ಳು ಸಾಲ ಮನ್ನಾ ಭರವಸೆ ನೀಡಿದ ಪಕ್ಷವನ್ನು (ಕಾಂಗ್ರೆಸ್ಸನ್ನು) ಮಧ್ಯಪ್ರದೇಶದಲ್ಲಿ ಅಧಿಕಾರಕ್ಕೆ ತರಬೇಕಾ?’ ಎಂದು ತಪರಾಕಿ ಹಾಕಿದರು.
