ಪ್ರೆಸ್ಟೀಜ್‌ ಸಂಸ್ಥೆ ಒಟ್ಟಾರೆ 17 ಮುಕ್ಕಾಲು ಗುಂಟೆ ವಿಸ್ತೀರ್ಣದ ರಾಜ ಕಾಲುವೆ ಸರ್ಕಾರಿ ಪ್ರದೇಶವನ್ನು ಒತ್ತುವರಿ ಮಾಡಿದೆ. ಈ ಬಗ್ಗೆ ಇಲಾಖೆ ವತಿಯಿಂದ ಸೂಕ್ತ ಪರಿಶೀಲನಾ ಕ್ರಮ ಜರುಗಿಸಲು ಸೂಚಿಸಬೇಕು ಎಂದು ಭೂ ದಾಖಲೆಗಳ ಜಂಟಿ ನಿರ್ದೇಶಕರು ಕೋರಿದ್ದಾರೆ.

ವರದಿ: ಜಿ. ಮಹಾಂತೇಶ್‌

ಬೆಂಗಳೂರು: ಬೆಂಗಳೂರು ಪೂರ್ವ ತಾಲೂಕಿನ ವರ್ತೂರು ಹೋಬಳಿಯ ಬೆಳ್ಳಂದೂರು ಅಮಾನಿಕೆರೆ ಗ್ರಾಮದ ವಿವಿಧ ಸರ್ವೇ ನಂಬರ್‌'ಗಳಲ್ಲಿನ ರಾಜ ಕಾಲುವೆಯನ್ನು ಪ್ರೆಸ್ಟೀಜ್‌ ಸಂಸ್ಥೆ ಒತ್ತುವರಿ ಮಾಡಿರುವುದು ದೃಢಪಟ್ಟಿದೆ.
ಬೆಳ್ಳಂದೂರು ಅಮಾನಿಕೆರೆ ಹಾಗೂ ಕಾಡುಬೀಸನ​ಹಳ್ಳಿ ಗ್ರಾಮದ ಸರ್ವೇ ನಂಬರ್‌ಗಳಲ್ಲಿ ಅಳತೆ ಮಾಡಿರುವ ಭೂ ಮಾಪಕರು, ಒತ್ತುವರಿಯಾಗಿರುವ ರಾಜ ಕಾಲುವೆ ಮತ್ತು ಪ್ರೆಸ್ಟೀಜ್‌ ಸಂಸ್ಥೆಯ ಸ್ವಾಧೀನದಲ್ಲಿರುವ ಪ್ರದೇಶಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸಿದ್ದಾರೆ.
ಈ ವರದಿ ಆಧರಿಸಿ ಭೂ ದಾಖಲೆಗಳ ಇಲಾಖೆಯ ಜಂಟಿ ನಿರ್ದೇಶಕ ಜಯಪ್ರಕಾಶ್‌ ಅವರು, ಅ.6ರಂದು ಬಿಬಿಎಂಪಿ ಆಯುಕ್ತರಿಗೆ ನಕ್ಷೆ ಸಮೇತ ವರದಿ ಸಲ್ಲಿಸಿದ್ದಾರೆ. ಈ ವರದಿ ಆಧರಿಸಿ ಬಿಬಿಎಂಪಿ ಆಯುಕ್ತರು ಈವರೆಗೆ ಯಾವುದೇ ಕ್ರಮ ಜರುಗಿಸಿಲ್ಲ ಎಂದು ತಿಳಿದು ಬಂದಿದೆ. ಬಿಬಿಎಂಪಿ ಆಯುಕ್ತರಿಗೆ ಸಲ್ಲಿಕೆಯಾಗಿರುವ ವರದಿ ಮತ್ತು ನಕ್ಷೆ ‘ಸುವರ್ಣ ನ್ಯೂಸ್‌' ಮತ್ತು ‘ಕನ್ನಡಪ್ರಭ'ಕ್ಕೆ ಲಭ್ಯವಾಗಿದೆ.
‘ಪ್ರೆಸ್ಟೀಜ್‌ ಸಂಸ್ಥೆ ಒಟ್ಟು 17 ಮುಕ್ಕಾಲು ಗುಂಟೆ ವಿಸ್ತೀರ್ಣದ ರಾಜ ಕಾಲುವೆ ಸರ್ಕಾರಿ ಪ್ರದೇಶವನ್ನು ಒತ್ತುವರಿ ಮಾಡಿದೆ' ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಬೆಳ್ಳಂದೂರು ಅಮಾನಿಕೆರೆ ಗ್ರಾಮದ ಸರ್ವೇ ನಂಬರ್‌ 111, 112, 113 ಮತ್ತು 143 ಹಾಗೂ ಕಾಡುಬೀಸನಹಳ್ಳಿ ಗ್ರಾಮದ ಸರ್ವೇ ನಂಬರ್‌ 29, 30, 31ರ ಮಧ್ಯೆ 30 ಗುಂಟೆ ಪ್ರದೇಶದಲ್ಲಿ ರಾಜ ಕಾಲುವೆ ಹಾದು ಹೋಗಿದೆ. ಈ ಪೈಕಿ 14.7 ಗುಂಟೆ ಪ್ರದೇಶದಲ್ಲಿ ಪ್ರೆಸ್ಟೀಜ್‌ ಸಂಸ್ಥೆ 1.50 ಮೀಟರ್‌ ಬಾಕ್ಸ್‌ ಡ್ರೈನ್‌ ನಿರ್ಮಿಸಿ, ಅದರ ಮೇಲೆ ಸ್ಲ್ಯಾಬ್‌ ಹಾಕಿ, ರಸ್ತೆ ಮತ್ತು ಲ್ಯಾಂಡ್‌ ಸ್ಕೇಪಿಂಗ್‌ ಮಾಡಿರುವುದು ಖಚಿತಪಟ್ಟಿದೆ.
‘ಪ್ರೆಸ್ಟೀಜ್‌ ಸಂಸ್ಥೆ ಆವರಣದಲ್ಲಿ ಕನಿಷ್ಠ 1.9 ಮೀಟರ್‌ನಿಂದ 12.14 ಮೀಟರ್‌ ಅಗಲದ ಹಳ್ಳವಿದೆ. ಈ ಹಳ್ಳವನ್ನು 1.50 ಮೀಟರ್‌ ಅಗಲಕ್ಕೆ ಸಂಕುಚಿತ​ಗೊಳಿಸಿ ಬಾಕ್ಸ್‌ ಡ್ರೈನ್‌ ನಿರ್ಮಿಸಿ ಸ್ಲಾ್ಯಬ್‌ ಹಾಕಿ ರಸ್ತೆ, ಲ್ಯಾಂಡ್‌ ಸ್ಕೇಪಿಂಗ್‌ ಮೂಲಕ 14.7 ಗುಂಟೆ ಜಾಗವನ್ನು ಪ್ರೆಸ್ಟೀಜ್‌ ಸಂಸ್ಥೆ ಒತ್ತುವರಿ ಮಾಡಿರುವುದು ಸ್ಪಷ್ಟವಾಗಿದೆ' ಎಂದು ಭೂ ದಾಖಲೆಗಳ ಜಂಟಿ ನಿರ್ದೇಶಕರು ವರದಿಯಲ್ಲಿ ತಿಳಿಸಿದ್ದಾರೆ.
ಅದೇ ರೀತಿ ಬೆಳ್ಳಂದೂರು ಅಮಾನಿಕೆರೆ ಗ್ರಾಮದ ಸರ್ವೇ ನಂಬರ್‌ 143/1ರಲ್ಲಿ ಮತ್ತು ಕಾಡುಬೀಸನಹಳ್ಳಿ ಗ್ರಾಮದ ಸರ್ವೇ ನಂಬರ್‌ 31ರ ಮಧ್ಯೆ 3 ಗುಂಟೆ ವಿಸ್ತೀರ್ಣದಲ್ಲಿ ರಾಜ ಕಾಲುವೆ ಇದೆ. ಈ ರಾಜ ಕಾಲುವೆಯನ್ನು ಸ್ಯಾನ್‌ ಡಿಸ್ಕ್‌ ಸಂಸ್ಥೆ ಒತ್ತುವರಿ ಮಾಡಿಕೊಂಡು ಪಾರ್ಕಿಂಗ್‌ ರ್ಯಾಂಪ್ ನಿರ್ಮಿಸಿ​ರುವುದು ವರದಿಯಿಂದ ಗೊತ್ತಾಗಿದೆ. ಹೀಗಾಗಿ ಪ್ರೆಸ್ಟೀಜ್‌ ಸಂಸ್ಥೆ ಒಟ್ಟಾರೆ 17 ಮುಕ್ಕಾಲು ಗುಂಟೆ ವಿಸ್ತೀರ್ಣದ ರಾಜ ಕಾಲುವೆ ಸರ್ಕಾರಿ ಪ್ರದೇಶವನ್ನು ಒತ್ತುವರಿ ಮಾಡಿದೆ. ಈ ಬಗ್ಗೆ ಇಲಾಖೆ ವತಿಯಿಂದ ಸೂಕ್ತ ಪರಿಶೀಲನಾ ಕ್ರಮ ಜರುಗಿಸಲು ಸೂಚಿಸಬೇಕು ಎಂದು ಭೂ ದಾಖಲೆಗಳ ಜಂಟಿ ನಿರ್ದೇಶಕರು ಕೋರಿದ್ದಾರೆ.
ಬೆಳ್ಳಂದೂರು ಬಳಿಯ ರಾಜ ಕಾಲುವೆ ಒತ್ತುವರಿ ಮಾಡಿ ನಿರ್ಮಿಸಿರುವ ಕಟ್ಟಡವನ್ನು ತೆರವುಗೊಳಿಸಲು ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು ಬಿಬಿಎಂಪಿ ಆಯುಕ್ತರಿಗೆ ಸೂಚಿಸಿದ್ದರು. 150 ಅಡಿಗಳಷ್ಟುಅಗಲವಾಗಿದ್ದ ಕಾಲುವೆಯು ಪ್ರೆಸ್ಟೀಜ್‌ ಸಂಸ್ಥೆ ನಿರ್ಮಿಸಿರುವ ಕಟ್ಟಡದ ಬಳಿ ಇದ್ದಕ್ಕಿದ್ದಂತೆ 10 ಅಡಿಗಳಿಗೆ ಕುಗ್ಗಿತ್ತು. ಇದರಲ್ಲಿ ಪ್ರೆಸ್ಟೀಜ್‌ ಸಂಸ್ಥೆಯ ಕಟ್ಟಡವೂ ಸೇರಿತ್ತು. 45 ಕಿ.ಮೀ. ಉದ್ದದ ರಾಜ ಕಾಲುವೆಯಲ್ಲಿ ಎಲ್ಲೆಲ್ಲಿ ಒತ್ತುವರಿಯಾಗಿದೆಯೋ ಎಲ್ಲವನ್ನೂ ತೆರವುಗೊಳಿಸಲು ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು ಬಿಬಿಎಂಪಿ ಆಯುಕ್ತರಿಗೆ ಸೂಚಿಸಿದ್ದರು.
ಪ್ರೆಸ್ಟೀಜ್‌ ಕಂಪನಿ ದೇವನಹಳ್ಳಿ, ಕುಂದಾಣಿ ಹೋಬಳಿ, ಕೊಟ್ಟಿಗೆ ತಿಮ್ಮನಹಳ್ಳಿ, ಸೊಣ್ಣೇನಹಳ್ಲಿ, ಕಾರಳ್ಳಿ, ಅಮಾನಿಕೆರೆ, ತೈಲಗೆರೆ ಗ್ರಾಮಗಳಲ್ಲಿ ಬಿ ಖರಾಬು 5.1 ಎಕರೆ ಸರ್ಕಾರಿ ಭೂಮಿ ಒತ್ತುವರಿ ಮಾಡಿರುವ ಆರೋಪಕ್ಕೂ ಗುರಿಯಾಗಿತ್ತು. 5.1 ಎಕರೆ ವಿಸ್ತೀರ್ಣದ ಸರ್ಕಾರಿ ಭೂಮಿಯಲ್ಲಿ ಐಷಾರಾಮಿ ವಿಲ್ಲಾಗಳನ್ನು ನಿರ್ಮಿಸಿದೆ ಎಂದು ದೇವನಹಳ್ಳಿ ಶಾಸಕ ಪಿಳ್ಳ ಮುನಿಶಾಮಪ್ಪ ಅವರು ಅಧಿವೇಶನದಲ್ಲಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರ ಗಮನ ಸೆಳೆದಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.