ಕೊಯಂಬತ್ತೂರು[ಮಾ. 03 ]  ಕೊಯಂಬತ್ತೂರು ಇಶಾ ಯೋಗ ಸೆಂಟರ್‌ನಲ್ಲಿ ಮಹಾಶಿವರಾತ್ರಿ ಆಚರಣೆ ನಡೆಯಲಿದೆ. ರ‍್ಯಾಲಿ ಆಫ್ ರಿವರ್ಸ್  ಖ್ಯಾತಿಯ ಸದ್ಗುರು ಜಗ್ಗಿ ವಾಸುದೇವ್ ನೇತೃತ್ವದಲ್ಲಿ ಮಾರ್ಚ್‌ 4 ಸೋಮವಾರ ಸಂಜೆಯಿಂದ ಮಾರ್ಚ್ 5 ಮಂಗಳವಾರ ಬೆಳಗಿನವರೆಗೆ ಮಹಾಶಿವರಾತ್ರಿ ಅದ್ದೂರಿಯಾಗಿ ನಡೆಯಲಿದ್ದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆಗಮಿಸಲಿದ್ದಾರೆ.

ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುವುದು. ಯೋಧರಿಗೆ ಗೌರವ ಸೂಚಕವಾಗಿ ಸಸಿ ನೆಡಲಾಗುವುದು. ಮಾಚ್ 4 ರಂದು ಕೊಯಂಬತ್ತೂರಿನ ಬೃಹತ್ ಆದಿಯೋಗಿ ಮೂರ್ತಿಯ ಮುಂದೆ ಲಕ್ಷಾಂತರ ಭಕ್ತರು ಜಮಾಯಿಸಲಿದ್ದಾರೆ.

2017ರಲ್ಲಿ ಪ್ರಧಾನಿ ನರೇಂದ್ರ ಮೋದಿ ಆದಿಯೋಗಿ ಮೂರ್ತಿಯನ್ನು ಅನಾವರಣ ಮಾಡಿದ್ದರು. 112 ಅಡಿ ಎತ್ತರದ ಶಿವನ ಮೂರ್ತಿಯನ್ನು ನೋಡಲು ಸಾವಿರಾರು ಜನ ಪ್ರತಿದಿನ ಆಗಮಿಸುತ್ತಿದ್ದು  ಸ್ಥಳ ಒಂದು ಪ್ರವಾಸಿ ತಾಣವಾಗಿ ಬದಲಾಗಿದೆ.

ಪ್ರಖ್ಯಾತ ಕಲಾವಿದರಿಂದ ಪ್ರದರ್ಶನ: ಈ ಬಾರಿ ಇಶಾ ಫೌಂಡೇಶನ್ 25 ನೇ ವರ್ಷದ ಶಿವರಾತ್ರಿ ಆಚರಣೆ ಮಾಡುತ್ತಿದೆ. ಕೊಯಂಬತ್ತೂರಿನ ಆದಿಯೋಗಿಯ ಪಾದದಡಿ ಮೂರನೇ ವರ್ಷದ ಶಿವರಾತ್ರಿ. ಪ್ರಖ್ಯಾತ ಕಲಾವಿದರಾದ ಅಮಿತ್ ತ್ರಿವೇದಿ, ಗಾಯಕ ಹರಿಹರನ್, ಕಾರ್ತಿಕ್ ಈ ಬಾರಿಯ ಜಾಗರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮಾರ್ಚ್ 4ರ ಸಂಜೆ 6 ಗಂಟೆಯಿಂದ ಮಾರ್ಚ್ 5ರ ಮುಂಜಾನೆ 6 ಗಂಟೆವರೆಗೆ ನಿರಂತರ ಕಾರ್ಯಕ್ರಮ ನಡೆಯಲಿದೆ. ಈ ಬಾರಿ 100 ಮಿಲಿಯನ್ ಜನ ಸಾಕ್ಷಿಯಾಗುವ ನಿರೀಕ್ಷೆಯಿದೆ.

ಸದ್ಗುರು ಇಶಾ ಫೌಂಡೇಶನ್ ಶಿವರಾತ್ರಿ ಸಂಭ್ರಮ, ಅಹೋರಾತ್ರಿ ಕಾರ್ಯಕ್ರಮ 

ನೇರ ಪ್ರಸಾರಕ್ಕೆ ಅವಕಾಶ: ಹಬ್ಬದ ಆಚರಣೆಯನ್ನು ಟಿವಿ ಮುಖಾಂತರ ನೋಡಬಹುದು. ಇಂಗ್ಲಿಷ್ ಸೇರಿದಂತೆ ತಮಿಳು, ತೆಲುಗು, ಕನ್ನಡ, ,ಮಲಯಾಳಂ, ಬಾಂಗ್ಲಾ, ಗುಜರಾತಿ, ಅಸ್ಸಾಮಿ ಮತ್ತು ಓರಿಯಾ ಭಾಷೆಯಲ್ಲೂ ನೇರ ಪ್ರಸಾರ ವೀಕ್ಷಿಸಲು ಅವಕಾಶ ಮಾಡಿಕೊಡಲಾಗುತ್ತದೆ.