ನವದೆಹಲಿ[ಆ.14]: ಅನ್ನದಾತರ ಏಳಿಗೆಗಾಗಿ ನಾವು ಶ್ರಮಿಸಬೇಕಿದೆ.  ನಮ್ಮ ರೈತರು ಕೋಟ್ಯಂಟರ ಜನರಿಗೆ ಆಹಾರವನ್ನು ಉತ್ಪಾದಿಸುತ್ತಾರೆ. ಅವರ ಆದಾಯ ದ್ವಿಗುಣಗೊಳಿಸುವ ಕೆಲಸ ಪ್ರತಿಯೊಬ್ಬರು ಮಾಡಬೇಕಿದೆ ಎಂದು ರಾಷ್ಟ್ರಪತಿ ರಾಮ್'ನಾಥ್ ಕೋವಿಂದ್ ರಾಷ್ಟ್ರದ ಜನತೆಗೆ ಕರೆ ನೀಡಿದರು.

ನಾಳೆ ನಡೆಯಲಿರುವ 72ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಇಂದು ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಪೂರ್ವಿಕರ ತ್ಯಾಗ, ಬಲಿದಾನದಿಂದಾಗಿ ಸ್ವಾತಂತ್ರ್ಯ ದೊರಕಿದೆ. ಅವರು ಹಾಕಿಕೊಟ್ಟ ಮಾರ್ಗದಲ್ಲೇ ನಾವು ಸಾಗಬೇಕಿದೆ. ದೇಶದ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕಿದೆ ಎಂದು ಸ್ವಾತಂತ್ರ ಹೋರಾಟಗಾರರ ಸಾಧನೆಗಳನ್ನು ಕೊಂಡಾಡಿದರು.

ಸ್ವಾತಂತ್ರ್ಯ ದಿನಾಚರಣೆ ಪ್ರತಿಯೊಬ್ಬ ಭಾರತೀಯನಿಗೂ ಶ್ರೇಷ್ಠವಾದ ದಿನ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ತ್ಯಾಗ, ಅಹಿಂಸೆಗಳನ್ನು ಸ್ಮರಿಸಿದರು. ಜೊತೆಗೆ ಇಡೀ ವಿಶ್ವವೇ ಒಂದು ಕುಟುಂಬ ನಾವೆಲ್ಲ ‘ವಸುದೈವ ಕುಟುಂಬಕಂ’ ತತ್ವದಡಿ ನಂಬಿಕೆ ಇಡಬೇಕು. ವಿದ್ಯಾರ್ಥಿಗಳು ಕೂಡ ದೇಶದ ಅಭಿವೃದ್ಧಿಯಲ್ಲಿ ಭಾಗಿಯಾಗಬೇಕು ಎಂಬ ಸಲಹೆ ನೀಡಿದ ಅವರು, ದೇಶದಲ್ಲಿ ಮಹಿಳೆಯರಿಗೆ ಮುಕ್ತ ಸ್ವಾತಂತ್ರ್ಯ ಸಿಗದಿದ್ದರೆ ಸ್ವಾತಂತ್ರ್ಯೋತ್ಸವ ಅಪೂರ್ಣವಾಗಲಿದೆ ಎಂಬುದನ್ನು ಇದೇ ಸಂದರ್ಭದಲ್ಲಿ ವಿವರಿಸಿದರು.