ರಾಷ್ಟ್ರಪತಿ, ಪ್ರಧಾನಿ, ಸಚಿವರು ಸೇರಿದಂತೆ ಎಲ್ಲಾ ಗಣ್ಯರು ಹಿಂದಿಯಲ್ಲೇ ಮಾತನಾಡಬೇಕುಏರ್-ಇಂಡಿಯಾ ಟಿಕೆಟ್ ಹಾಗೂ ಪತ್ರಿಕೆಗಳು ಹಿಂದಿಯಲ್ಲಿರಬೇಕುCBSE ಹಾಗೂ ಕೇಂದ್ರಿಯ ವಿದ್ಯಾಲಯಗಳಲ್ಲಿ 10ನೇ ತರಗತಿವೆರೆಗೆ ಹಿಂದಿ ಕಡ್ಡಾಯಸರ್ಕಾರಿ, ಅರೆ-ಸರ್ಕಾರಿ ಸಂಸ್ಥೆಗಳ ಸೇವೆಗಳ ಮಾಹಿತಿ ಹಿಂದಿಯಲ್ಲಿರಬೇಕು

ನವದೆಹಲಿ (ಏ.17): ಇನ್ಮುಂದೆ ರಾಷ್ಟ್ರಪತಿ, ಪ್ರಧಾನಿ, ಕೇಂದ್ರ ಸಚಿವರು ಸೇರಿದಂತೆ ಎಲ್ಲಾ ಗಣ್ಯ ವ್ಯಕ್ತಿಗಳು ಹಿಂದಿಯಲ್ಲೇ ಭಾಷಣ ಮಾಡಬೇಕೆಂಬ ಶಿಫಾರಸ್ಸನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸಮ್ಮತಿಸಿದ್ದಾರೆ.

ಸಂಸತ್ತಿನ ಅಧಿಕೃತ ಭಾಷಾ ಮಂಡಳಿಯು ನೀಡಿರುವ ಈ ಶಿಫಾರಸ್ಸು ಹಿಂದಿ ಓದಲು ಹಾಗೂ ಮಾತನಾಡಲು ಬಲ್ಲವರಿಗೆ ಅನ್ವಯವಾಗುತ್ತದೆ, ಎಂದು ಇಕನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ.

ಮುಂಬರುವ ಜುಲೈಯಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರ ಅಧಿಕಾರಾವಧಿ ಮುಗಿಯಲಿದೆ. ಮುಂದಿನ ರಾಷ್ಟ್ರಪತಿ ಭಾಷಣಗಳನ್ನು ಹಿಂದಿಯಲ್ಲೇ ಮಾಡಬೇಕಾಗಬಹುದು. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಹುತೇಕ ಸಚಿವರುಗಳು ಹಿಂದಿಯಲ್ಲೇ ಮಾತನಾಡುತ್ತಾರೆ.

ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್-ಇಂಡಿಯಾದ ಟಿಕೆಟ್’ನಲ್ಲಿ ಹಿಂದಿ ಬಳಸುವುದು ಕಡ್ಡಾಯಗೊಳಿಸಿರುವ ಶಿಫಾರಸ್ಸಿಗೂ ರಾಷ್ಟ್ರಪತಿ ಹಸಿರು ನಿಶಾನೆ ತೋರಿದ್ದಾರೆ. ಜತೆಗೆ, ವಿಮಾನ ಪ್ರಯಾಣಿಕರಿಗಾಗಿ ಇಡಲಾಗುವ ಪತ್ರಿಕೆ/ನಿಯತಕಾಲಿಕೆಗಳಲ್ಲಿ ಕಡ್ಡಾಯವಾಗಿ ಹಿಂದಿ ಭಾಷಾ ಪತ್ರಿಕೆಗಳು ಇರಬೇಕೆಂಬ ನಿಯಮವನ್ನು ಅಂಗೀಕರಿಸಲಾಗಿದೆ. ಖಾಸಗಿ ವಿಮಾನಯಾನ ಸಂಸ್ಥೆಗಳಲ್ಲೂ ಅದನ್ನು ಕಡ್ಡಾಯಮಾಡಬೇಕೆಂಬ ಶಿಫಾರಸ್ಸನ್ನು ತಿರಸ್ಕರಿಸಲಾಗಿದೆ.

ದೇಶಾದ್ಯಂತ 8ನೇ ತರಗತಿವರೆಗೆ ಹಿಂದಿ ಕಡ್ಡಾಯ ಮಾಡಲು ಬಿಜೆಪಿ ನಾಯಕನಿಂದ ಸುಪ್ರೀಂನಲ್ಲಿ ಅರ್ಜಿ

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡೆಯುವ ವ್ಯವಹಾರದಲ್ಲಿ ಹಿಂದಿಯನ್ನು ಜನಪ್ರಿಯಗೊಳಸುವ ನಿಟ್ಟಿನಲ್ಲಿ ಸಮಿತಿಯು ನೀಡಿದ್ದ 117 ಶಿಫಾರಸ್ಸುಗಳಲ್ಲಿ ಕೆಲವು ಶಿಫಾರಸ್ಸುಗಳನ್ನು ರಾಷ್ಟ್ರಪತಿ ತಿರಸ್ಕರಿಸಿದ್ದಾರೆ.

ಸಾರ್ವಜನಿಕ ಹಣಕಾಸು ಸಂಸ್ಥೆಗಳ ಪತ್ರ ವ್ಯವಹಾರವನ್ನು ಹಿಂದಿಯಲ್ಲೇ ನಡೆಸುವ ಹಾಗೂ, ಎಲ್ಲಾ ಖಾಸಗಿ ಕಂಪನಿಗಳು ತಮ್ಮ ಉತ್ಪನ್ನಗಳ ಹೆಸರು ಹಾಗೂ ಮಾಹಿತಿಯನ್ನು ಹಿಂದಿಯಲ್ಲೂ ಕಡ್ಡಾಯವಾಗಿ ಮುದ್ರಿಸುವ ಶಿಫಾರಸ್ಸನ್ನು ಕೈಬಿಡಲಾಗಿದೆ. ಆದರೆ ಸರ್ಕಾರ, ಅರೆ-ಸರ್ಕಾರಿ ಸಂಸ್ಥೆಗಳು ತಮ್ಮ ಸೇವೆ/ ಉತ್ಪನ್ನಗಳನ್ನು ಹಿಂದಿಯಲ್ಲಿ ಪ್ರಕಟಿಸುವುದು ಕಡ್ಡಾಯಗೊಳಿಸಲಾಗಿದೆ.

ಸರ್ಕಾರಿ ಕೆಲಸ ದೊರೆಯಬೇಕಾದರೆ ಕನಿಷ್ಠ ಮಟ್ಟದ ಹಿಂದಿ ಜ್ಞಾನವನ್ನು ಕಡ್ಡಾಯಗೊಳಿಸುವ ಶಿಫಾರಸ್ಸನ್ನು ತಿರಸ್ಕರಿಸಲಾಗಿದೆ.

ಸಿಬಿಎಸ್’ಸಿ ಹಾಗೂ ಕೇಂದ್ರೀಯ ವಿದ್ಯಾಲಯಗಳಲ್ಲಿ 8ನೇ ತರಗತಿಯಿಂದ 10ನೇ ತರಗತಿವೆರೆಗೆ ಹಿಂದಿಯನ್ನು ಕಡ್ಡಾಯಗೊಳಿಸುವ ಶಿಫಾರಸ್ಸನ್ನು ರಾಷ್ಟ್ರಪತಿ ತಾತ್ವಿಕವಾಗಿ ಒಪ್ಪಿಕೊಂಡಿದ್ದಾರೆ. ಆದರೆ, ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಹಿಂದಿಯೇತರ ರಾಜ್ಯಗಳ ವಿವಿಗಳಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಹಾಗೂ ಸಂದರ್ಶನಗಳಲ್ಲಿ ಹಿಂದಿ ಆಯ್ಕೆಯನ್ನು ಆರಂಭಿಸುವಂತೆ ಸರ್ಕಾರವು ಸೂಚಿಸಬಹುದಾಗಿದೆ. ಸರ್ಕಾರಿ ಪತ್ರ ವ್ಯವಹಾರವನ್ನು ಸುಲಭಗೊಳಿಸಲು ಇಂಗ್ಲಿಷ್-ಹಿಂದಿ ನಿಘಂಟನ್ನು ಕೂಡಾ ಸರ್ಕಾರವು ಸಿದ್ಧಪಡಿಸುವುದು ಎಂದು ವರದಿಯಾಗಿದೆ.