ವಿಧಾನಸಭೆಗಳ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ಬಳಿಕ ಪ್ರಧಾನಿ ಮೋದಿ ಅವರು ವಿನಮ್ರತೆಯ ಅಗತ್ಯದ ಬಗ್ಗೆ ಮಾತನಾಡಿದ್ದಾರೆ. ಇದನ್ನು ಕೇಳಿ ನನಗೆ ಸಂತೋಷವಾಯಿತು ಎಂದು ಟೀವಿ ವಾಹಿನಿಯೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಣಬ್ ಭಾಷಣ ಮಾಡಿದರು.

ಮುಂಬೈ(ಮಾ.17): ಉತ್ತರಪ್ರದೇಶ ಹಾಗೂ ಉತ್ತರಾಖಂಡ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಸಾಧಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಭಾಷಣಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಉತ್ತರಪ್ರದೇಶ ಹಾಗೂ ಇತರೆ ವಿಧಾನಸಭೆಗಳ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ಬಳಿಕ ಪ್ರಧಾನಿ ಮೋದಿ ಅವರು ವಿನಮ್ರತೆಯ ಅಗತ್ಯದ ಬಗ್ಗೆ ಮಾತನಾಡಿದ್ದಾರೆ. ಇದನ್ನು ಕೇಳಿ ನನಗೆ ಸಂತೋಷವಾಯಿತು ಎಂದು ಟೀವಿ ವಾಹಿನಿಯೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಣಬ್ ಭಾಷಣ ಮಾಡಿದರು.

ಚುನಾವಣೆಯಲ್ಲಿನ ಜಯವನ್ನು ಬಹುಮತದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಆದರೆ ರಾಜ್ಯಗಳಲ್ಲಿ ಆಡಳಿತ ನಡೆಸುವುದು ಸರ್ವಮತದ ಮೇಲೆ. ಭಾರತದ ಸಂಪ್ರದಾಯ ಇದುವೇ ಆಗಿದ್ದು, ದೇಶದ ಬಹುಪಾಲು ಜನರು ಕೂಡ ಇದನ್ನೇ ಬಯಸುತ್ತಾರೆ. ಅಧಿಕಾರದಲ್ಲಿರುವವರು ಇಡೀ ದೇಶವನ್ನು ಎಲ್ಲ ಕಾಲದಲ್ಲೂ ತಮ್ಮ ಜತೆಗೆ ಒಯ್ಯಬೇಕು ಎಂದು ಕರೆ ನೀಡಿದರು.