ನಗರದ ‘ನಮ್ಮ ಮೆಟ್ರೊ’ ಮೊದಲ ಹಂತದ ಮೆಟ್ರೋ ರೈಲು ಸೇವೆಯನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿ ತಿಂಗಳಾಂತ್ಯ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.

ಬೆಂಗಳೂರು (ಮೇ.02): ನಗರದ ‘ನಮ್ಮ ಮೆಟ್ರೊ’ ಮೊದಲ ಹಂತದ ಮೆಟ್ರೋ ರೈಲು ಸೇವೆಯನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿ ತಿಂಗಳಾಂತ್ಯ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ರಾಷ್ಟ್ರಪತಿಗಳಿಗೆ ಪತ್ರ ಬರೆದು, ಮೆಟ್ರೋ ಮೊದಲ ಹಂತದ ಸೇವೆ ಉದ್ಘಾಟಿಸುವಂತೆ ಆಹ್ವಾನ ನೀಡಿದ್ದಾರೆ. ಮೂಲಗಳ ಪ್ರಕಾರ, ತಿಂಗಳಾಂತ್ಯಕ್ಕೆ ರಾಷ್ಟ್ರಪತಿಗಳು ಸೇವೆಗೆ ಚಾಲನೆ ನೀಡಲಿದ್ದಾರೆ.

ವಿಧಾನಸೌಧದಲ್ಲಿ ಮಂಗಳವಾರ ಮೆಟ್ರೊ ರೈಲು ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿದ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ನಮ್ಮ ಮೆಟ್ರೋ ಮೊದಲ ಹಂತದ ಕಾಮಗಾರಿ ಸಂಪೂರ್ಣ ಮುಗಿದಿದ್ದು, ರೈಲ್ವೆ ಸುರಕ್ಷತಾ ಆಯುಕ್ತರು ನಾಗಸಂದ್ರ-ಪುಟ್ಟೇನಹಳ್ಳಿ ಮಾರ್ಗದಲ್ಲಿ ಮೇ 12 ರಂದು ಪ್ರಾಯೋಗಿಕ ಸಂಚಾರ ನಡೆಸಲಿದ್ದಾರೆ. ಹೀಗಾಗಿ ಮೇ ತಿಂಗಳಾಂತ್ಯದೊಳಗೆ ಈ ಮಾರ್ಗದಲ್ಲೂ ಮೆಟ್ರೋ ಸಂಚಾರ ಆರಂಭಗೊಳ್ಳುವ ಮೂಲಕ ಮೊದಲನೇ ಹಂತದ ಮೆಟ್ರೋ ಸಂಪೂರ್ಣ ಬಳಕೆಗೆ ಮುಕ್ತವಾಗಲಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.