ಇದೇ ಮೊದಲ ಬಾರಿಗೆ ಹಾಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಸುದ್ದಿ ಗೋಷ್ಠಿ ನಡೆಸಿದ್ದು, 'ದೇಶದ ಅತ್ಯುನ್ನತ ನ್ಯಾಯಾಲಯದಲ್ಲಿ ಎಲ್ಲವೂ ಸರಿ ಇಲ್ಲ' ಎಂದು ಅಲವತ್ತು ತೋಡಿಕೊಂಡಿದ್ದಾರೆ.
ಹೊಸದಿಲ್ಲಿ: ನ್ಯಾಯಾಂಗ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಸುದ್ದಿ ಗೋಷ್ಠಿ ನಡೆಸಿರುವ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ನ್ಯಾಯಾಧೀಶರ ಆಯ್ಕೆಯಲ್ಲಿ ಎಲ್ಲವೂ ಸರಿಯಿಲ್ಲವೆಂದು ತಮ್ಮ ಅಲವತ್ತು ತೋಡಿಕೊಂಡಿದ್ದಾರೆ.
ನ್ಯಾ.ಚೆಲಮೇಶ್ವರ್, ನ್ಯಾ.ರಂಜನ್ ಗೊಗೋಯಿ, ನ್ಯಾ. ಮದನ್ ಲೊಕೂರ್ ಮತ್ತು ನ್ಯಾ.ಕುರಿಯನ್ ಜೋಸೆಫ್ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ನ್ಯಾ.ಚೆಲಮೇಶ್ವರ ಅವರ ನಿವಾಸದಲ್ಲಿ ಈ ಗೋಷ್ಠಿ ನಡೆಯಿತು.
'ನಾವು ನಾಲ್ಕು ನ್ಯಾಯಾಧೀಶರು ಯಾವುದೋ ಕಾರ್ಯ ನೆರವೇರಬೇಕೆಂದು ಭಾರತದ ಮುಖ್ಯ ನ್ಯಾಯಮೂರ್ತಿಗೆ ಕೇಳಿಕೊಂಡಿದ್ದೆವು. ಆ ಕೆಲಸವಾಗಿತ್ತು. ಆದರೆ, 'ಭಾರತದ ಸಾರ್ವಭೌಮವನ್ನು ಪ್ರಶ್ನಿಸುವಂತಾಯಿತು. ಯಾವ ಕೆಲಸ, ಹೇಗೆ ಆಗಬೇಕು,' ಎಂಬುವುದು ಮುಖ್ಯ ಎಂದರು.
'ಎಲ್ಲೀಯವರೆಗೂ ನ್ಯಾಯಾಂಗ ಮೌಲ್ಯಗಳನ್ನು ರಕ್ಷಿಸಲು ಆಗುವುದಿಲ್ಲವೋ, ಅಲ್ಲೀವರೆಗೂ ಪ್ರಜಾಪ್ರಭುತ್ವವನ್ನು ರಕ್ಷಿಸಲಾಗುವುದಿಲ್ಲ,' ಎಂದು ಹೇಳಿದ ನ್ಯಾಯಾಧೀಶರು ದೇಶದ ಅತ್ಯುನ್ನತ ನ್ಯಾಯಾಲಯದಲ್ಲಿ ಎಲ್ಲವೂ ಸರಿಯಾಗುವುದಿಲ್ಲವೆಂದರು.
ಈ ನ್ಯಾಯಾಧೀಶರ ಸುದ್ದಿಗೋಷ್ಠಿಗೆ ವಿರೋಧ
ಪೀಠದಲ್ಲಿರುವ ನ್ಯಾಯಾಧೀಶರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದು, ಇದೇ ಮೊದಲಾಗಿದ್ದು ನ್ಯಾಯಾಲಯದ ಘಟನೆಗೆ ಚ್ಯುತಿಯಾಗಿದೆ ಎಂದು ಕಾನೂನು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದೇವರ ಸ್ಥಾನದಲ್ಲಿರುವ ನ್ಯಾಯಾಲಯ ಹಾಗೂ ಅದರ ಉಸ್ತುವಾರಿಗಳಾದ ನ್ಯಾಯಾಧೀಶರು ಈ ರೀತಿ ದೇಶವನ್ನು ಉದ್ದೇಶಿಸಿ ಮಾತನಾಡುವುದು ತಪ್ಪೆಂದು ನಿವೃತ್ತ ನ್ಯಾಯಾಮೂರ್ತಿಗಳು ಸೇರಿ ಹಲವರು ವಿರೋಧ ವ್ಯಕ್ತಪಡಿಸಿದ್ದು, ಇನ್ನು ಮುಂದೆ ಈ ನಾಲ್ವರು ಯಾವುದೇ ತೀರ್ಪು ನೀಡಲು ಅನರ್ಹರು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
