Asianet Suvarna News Asianet Suvarna News

ಮೈಸೂರು: ಬಿಜೆಪಿಯಿಂದ ಸಿಂಹ, ಕೈ-ದಳದಿಂದ ಯಾರು?

ಲೋಕಸಭಾ ಚುನಾವಣೆಗೆ ಮೈಸೂರು ಕ್ಷೇತ್ರದಿಂದ ಬಿಜೆಪಿಯಿಂದ ಪ್ರತಾಪ್ ಸಿಂಹ ಸ್ಪರ್ಧಿಸಲಿದ್ದಾರೆ | ಕಾಂಗ್ರೆಸ್- ದಳದಿಂದ ಇನ್ನೂ ಅಭ್ಯರ್ಥಿಗಳ ನಿರ್ಧಾರವಾಗಿಲ್ಲ | ಸಿದ್ದರಾಮಯ್ಯ ತವರು ಕ್ಷೇತ್ರವಾಗಿದ್ದರಿಂದ ಪ್ರತಿಷ್ಠೆ ಪ್ರಶ್ನೆ | 

Pratap Simha is BJP Candidate From Mysore Constituency Congress, JDS yet to Decide
Author
Bengaluru, First Published Jan 29, 2019, 11:55 AM IST

ಮೈಸೂರು (ಜ. 29):  ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಣದಿಂದಾಗಿ ಮೈಸೂರು ಸಹಜವಾಗಿಯೇ ಪ್ರತಿಷ್ಠಿತ ಕ್ಷೇತ್ರವಾಗಿ ಪರಿಣಮಿಸಿದ್ದು, ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾಗಿರುವ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಡುವೆ ಸ್ಥಾನ ಹೊಂದಾಣಿಕೆಯಾದಲ್ಲಿ ಈ ಕ್ಷೇತ್ರ ಯಾವ ಪಕ್ಷದ ಪಾಲಾಗಬಹುದು ಎಂಬ ಕುತೂಹಲ ತೀವ್ರವಾಗಿದೆ.

ಈವರೆಗೆ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಈವರೆಗೆ ತ್ರಿಕೋನ ಹೋರಾಟ ನಡೆಯುತ್ತಿತ್ತು. ಅದರಲ್ಲೂ ಇತ್ತೀಚಿನ ಚುನಾವಣೆಗಳಲ್ಲಿ ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳ ನಡುವೆಯೇ ಜಿದ್ದಾಜಿದ್ದಿನ ಹೋರಾಟ ನಡೆಯುತ್ತಿತ್ತು. ಆದರೆ, ಈ ಬಾರಿ ಬಿಜೆಪಿ ವರ್ಸಸ್‌ ಕಾಂಗ್ರೆಸ್‌-ಜೆಡಿಎಸ್‌ ನಡುವೆ ನೇರ ಸ್ಪರ್ಧೆ ನಡೆಯುವುದು ಬಹುತೇಕ ನಿಶ್ಚಿತವಾಗಿದೆ. ಒಂದು ವೇಳೆ ಜೆಡಿಎಸ್‌ ಪಾಲಾದಲ್ಲಿ ಆ ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡ ಅವರೇನಾದರೂ ಕಣಕ್ಕಿಳಿಯುವರೇ ಎಂಬುದನ್ನು ಕಾದು ನೋಡಬೇಕು.

ಬಿಜೆಪಿಯಿಂದ ಮತ್ತೆ ಪ್ರತಾಪ್ ಸಿಂಹ:

ಬಿಜೆಪಿಯಿಂದ ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್‌ ತಾವು ಕೂಡ ಆಕಾಂಕ್ಷಿ ಎಂದು ಹೇಳಿದ್ದರೂ ಬಹುತೇಕ ಹಾಲಿ ಸಂಸದ ಪ್ರತಾಪ್‌ ಸಿಂಹ ಮತ್ತೊಮ್ಮೆ ಅಭ್ಯರ್ಥಿಯಾಗುವುದು ಖಚಿತ ಎಂಬ ವಾತಾವರಣವಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಹಲವಾರು ಸಚಿವರೊಂದಿಗೆ ಇರುವ ನಿಕಟ ಸಂಪರ್ಕದಿಂದ ಹಲವಾರು ಹೊಸ ರೈಲ್ವೆ ಸಂಪರ್ಕಗಳು, ವಿಮಾನಯಾನ ಪುನಾರಂಭ, ಮೈಸೂರು- ಬೆಂಗಳೂರು ಹೆದ್ದಾರಿ, ಪಾಸ್‌ ಪೋರ್ಟ್‌ ಸೇವಾ ಕೇಂದ್ರ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ತಂದಿರುವ, ಕರ್ನಾಟಕ ರಾಜ್ಯ ಮುಕ್ತ ವಿವಿ ಮಾನ್ಯತೆ ಸಮಸ್ಯೆ ಬಗೆಹರಿಸಿರುವ ಪ್ರತಾಪ್‌ಸಿಂಹ ಚುನಾವಣೆಗೆ ಸಜ್ಜಾಗುತ್ತಿದ್ದಾರೆ.

ವಿಜಯಶಂಕರ್‌ ಲಾಬಿ:

ಆದರೆ ಮೈತ್ರಿ ಪಕ್ಷಗಳಲ್ಲಿ ಇನ್ನೂ ಒಮ್ಮತ ಮೂಡಿಲ್ಲ. ಕಳೆದ ಬಾರಿ ತಮಗೆ ಟಿಕೆಟ್‌ ನಿರಾಕರಿಸಿ, ಹಾಸನಕ್ಕೆ ಕಳುಹಿಸಿದ ವರಿಷ್ಠರ ವಿರುದ್ಧ ಮುನಿದಿದ್ದ ಮಾಜಿ ಸಂಸದ ಸಿ.ಎಚ್‌.ವಿಜಯಶಂಕರ್‌ ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಅವಕಾಶ ಮಾಡಿಕೊಡಲ್ಲ ಎಂದು ಬಿಜೆಪಿಯಿಂದ ದೂರವಾಗಿ ಈಗ ಕಾಂಗ್ರೆಸ್‌ನಲ್ಲಿದ್ದಾರೆ. ಮಾಜಿ ಸಿಎಂ, ರಾಜ್ಯ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯಅವರ ಆಪ್ತವಲಯದಲ್ಲಿರುವ ವಿಜಯಶಂಕರ್‌ ತಮಗೆ ಕಾಂಗ್ರೆಸ್‌ ಟಿಕೆಟ್‌ ಹಾಗೂ ಕ್ಷೇತ್ರವನ್ನು ಜೆಡಿಎಸ್‌ ಬಿಟ್ಟುಕೊಡಲಿದೆ ಎಂಬ ಆತ್ಮವಿಶ್ವಾಸದಲ್ಲಿದ್ದಾರೆ. ಕ್ಷೇತ್ರದಲ್ಲಿ ಈವರೆಗೆ ಜೆಡಿಎಸ್‌ ಗೆದ್ದಿಲ್ಲ ಎಂಬ ಅಂಶವನ್ನು ಅವರು ಮುಂದೆ ಮಾಡುತ್ತಿದ್ದಾರೆ. ಅಲ್ಲದೇ ಮೈಸೂರಿನಲ್ಲಿ ಇಬ್ಬರು ಜೆಡಿಎಸ್‌ ಸಚಿವರು ಇರುವುದರಿಂದ ಸಿದ್ದರಾಮಯ್ಯ ಅವರು ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಸ್ಥಾನ ಬಿಟ್ಟುಕೊಡುವಂತೆ ಪಟ್ಟು ಹಿಡಿಯುವ ಸಾಧ್ಯತೆ ಇದೆ.

ದೇವೇಗೌಡರೇ ಬನ್ನಿ..:

ಆದರೆ ಮೈಸೂರು ಜಿಲ್ಲೆಯಲ್ಲಿ ಪಕ್ಷ ಪ್ರಬಲವಾಗಿರುವುದರಿಂದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್‌ ಗೆದ್ದಿರುವುದರಿಂದ ತಮಗೆ ಬಿಟ್ಟುಕೊಡಬೇಕು ಎಂದು ಆ ಪಕ್ಷದ ವರಿಷ್ಠರು ಪಟ್ಟು ಹಿಡಿದಿದ್ದಾರೆ. ಇಲ್ಲಿಂದ ಜನತಾ ಪರಿವಾರ ಗೆದ್ದಿಲ್ಲ ಎಂಬ ಕಳಂಕವನ್ನು ಹೋಗಲಾಡಿಸಲು ಈ ಬಾರಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರೇ ಸ್ಪರ್ಧಿಸಲಿ ಎಂಬ ಆಹ್ವಾನವನ್ನು ನೀಡಿದ್ದಾರೆ. ಆದರೆ ಗೌಡರು ಈವರೆಗೆ ಪ್ರತಿಕ್ರಿಯೆ ನೀಡಿಲ್ಲ.

ಜೆಡಿಎಸ್‌ ಆಕಾಂಕ್ಷಿಗಳು:

ಏತನ್ಮಧ್ಯೆ ಚಾಮರಾಜ ಕ್ಷೇತ್ರದಲ್ಲಿ ಸೋತಿರುವ ಮೈವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್‌.ರಂಗಪ್ಪ ಅವರು ಮೈಸೂರು ಅಥವಾ ಮಂಡ್ಯದಲ್ಲಿ ಅವಕಾಶ ಮಾಡಿಕೊಡಬೇಕು ಎಂದು ಕೇಳುತ್ತಿದ್ದಾರೆ ಎಂದು ಗೊತ್ತಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹುಣಸೂರಿನಲ್ಲಿ ಎಚ್‌.ವಿಶ್ವನಾಥ್‌ ಅವರಿಗೆ ಅವಕಾಶ ಮಾಡಿಕೊಡಲು ಹಿಂದೆ ಸರಿದ ಜಿಲ್ಲಾ ಸಚಿವ ಜಿ.ಟಿ.ದೇವೇಗೌಡರ ಪುತ್ರ ಹಾಗೂ ಎಂಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಜಿ.ಡಿ. ಹರೀಶ್‌ಗೌಡರಿಗೆ ಟಿಕೆಟ್‌ ನೀಡಬೇಕು ಎಂದು ಕೆಲವರು ಕೇಳುತ್ತಿದ್ದಾರೆ. ನಾವಾಗಿ ಟಿಕೆಟ್‌ ಕೇಳುವುದಿಲ್ಲ, ಪಕ್ಷ ಅವಕಾಶ ಮಾಡಿಕೊಟ್ಟಲ್ಲಿ ಹೋರಾಟ ಮಾಡುತ್ತೇವೆ ಎಂಬುದು ಜಿ.ಟಿ.ದೇವೇಗೌಡರ ಕುಟುಂಬದ ನಿಲುವು ಎನ್ನಲಾಗಿದೆ.

ರಾಜ್ಯದ 28 ಸೀಟುಗಳಲ್ಲಿ ಜೆಡಿಎಸ್‌ಗೆ ಕಾಂಗ್ರೆಸ್‌ ಎಷ್ಟುಸ್ಥಾನ ಬಿಟ್ಟುಕೊಡಲಿದೆ. ಆ ಪೈಕಿ ಪಕ್ಕದ ಚಾಮರಾಜನಗರ ಕಾಂಗ್ರೆಸ್‌ ಪಾಲಾಗುವುದರಿಂದ ಜೆಡಿಎಸ್‌ ದಕ್ಷಿಣದಲ್ಲಿ ಹಾಸನ, ಮಂಡ್ಯ ಜೊತೆಗೆ ಮೈಸೂರು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಶಿವಮೊಗ್ಗ ಕೇಳುವ ಸಾಧ್ಯತೆ ಇದೆ. ಸೀಟು ಹೊಂದಾಣಿಕೆಯ ಆಧಾರದ ಮೇಲೆ ಮೈಸೂರಿನಲ್ಲಿ ಸ್ಪರ್ಧೆ ಕಾಂಗ್ರೆಸ್ಸಾ, ಜೆಡಿಎಸ್ಸಾ ಎಂಬುದು ನಿರ್ಧಾರವಾಗುವ ಸಾಧ್ಯತೆ ಹೆಚ್ಚು.

ಒಮ್ಮೆಯೂ ಗೆಲ್ಲದ ಜನತಾ ಪರಿವಾರ:

ಸಿದ್ದರಾಮಯ್ಯ, ಎಂ.ರಾಜಶೇಖರಮೂರ್ತಿ, ವಿ.ಶ್ರೀನಿವಾಸಪ್ರಸಾದ್‌, ಡಾ.ಎಚ್‌.ಸಿ.ಮಹದೇವಪ್ಪ, ಎಚ್‌.ಎಸ್‌.ಮಹದೇವಪ್ರಸಾದ್‌ ಅವರಂಥ ಘಟಾನುಘಟಿ ನಾಯಕರಿದ್ದಾಗಲೂ ಈ ಕ್ಷೇತ್ರದಲ್ಲಿ ಜನತಾ ಪರಿವಾರ ಈವರೆಗೆ ಗೆದ್ದಿಲ್ಲ.

1977ರಲ್ಲಿ ಭಾರತೀಯ ಲೋಕದಳದಿಂದ ಹಾಗೂ 1980ರಲ್ಲಿ ಜನತಾಪಕ್ಷದಿಂದ ಎಂ.ಎಸ್‌. ಗುರುಪಾದಸ್ವಾಮಿ ಸ್ಪರ್ಧಿಸಿ ಸೋತರು. 1983ರಲ್ಲಿ ಜನತಾಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿ ಕೆ.ಪಿ. ಶಾಂತಮೂರ್ತಿ ಎರಡೆಲೆ ಗುರುತಿನಲ್ಲಿ ಸ್ಪರ್ಧಿಸಿ ಸೋತರು. 1989ರಲ್ಲಿ ಜನತಾ ಪರಿವಾರ ಇಬ್ಭಾಗವಾಗಿ ಜನತಾದಳದಿಂದ ಪ.ಮಲ್ಲೇಶ್‌, ಸಮಾಜವಾದಿ ಜನತಾಪಕ್ಷದಿಂದ ಡಿ.ಮಾದೇಗೌಡ ಸ್ಪರ್ಧಿಸಿ ಸೋತರು.

1991 ರಲ್ಲಿ ಡಿ.ಮಾದೇಗೌಡರು ಜನತಾದಳದ ಏಕೈಕ ಅಭ್ಯರ್ಥಿಯಾದರೂ ಸೋತರು. 1996ರಲ್ಲಿ ಜನತಾದಳದ ಜಿ.ಟಿ.ದೇವೇಗೌಡರು ಕಾಂಗ್ರೆಸ್‌ನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರಿಗೆ ಪ್ರಬಲ ಪೈಪೋಟಿ ನೀಡಿ, ಕಡಿಮೆ ಅಂತರದಲ್ಲಿ ಸೋತರು. ಆದರೆ 1998ರಲ್ಲಿ ಮತ್ತೆ ಸ್ಪರ್ಧಿಸಿ ಮೂರನೇ ಸ್ಥಾನಕ್ಕೆ ಹೋದರು. 1999 ರಲ್ಲಿ ಜೆಡಿಎಸ್‌ನಿಂದ ಬಿ.ಎಸ್‌.ಮರಿಲಿಂಗಯ್ಯ ಪಕ್ಷದ ಅಭ್ಯರ್ಥಿಯಾಗಿ ಮೂರನೇ ಸ್ಥಾನದಲ್ಲಿ ಮುಂದುವರಿದರು.

2004ರಲ್ಲಿ ಜೆಡಿಎಸ್‌ ಅಲೆ ಇದ್ದಿದ್ದರಿಂದ ಆ ಪಕ್ಷದ ಅಭ್ಯರ್ಥಿ ಎ.ಎಸ್‌.ಗುರುಸ್ವಾಮಿ ಪ್ರಬಲ ಪೈಪೋಟಿ ನೀಡಿ, ಕಡಿಮೆ ಅಂತರದಲ್ಲಿ ಸೋತರು. ಆ ಚುನಾವಣೆಯಲ್ಲಿ ಬಿಜೆಪಿಯ ಸಿ.ಎಚ್‌.ವಿಜಯಶಂಕರ್‌ ಗೆದ್ದರೆ, ಕಾಂಗ್ರೆಸ್‌ನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಮೂರನೇ ಸ್ಥಾನಕ್ಕೆ ಹೋದರು. 2009ರಲ್ಲಿ ಜೆಡಿಎಸ್‌ನ ಬಿ.ಎ.ಜೀವಿಜಯ, 2014 ರಲ್ಲಿ ನ್ಯಾ.ಚಂದ್ರಶೇಖರ್‌ ಅವರಿಗೂ ಸಿಕ್ಕಿದ್ದು ಮೂರನೇ ಸ್ಥಾನ.

ರೇಸ್‌ನಲ್ಲಿ ಯಾರು?

ಬಿಜೆಪಿ- ಹಾಲಿ ಸಂಸದ ಪ್ರತಾಪ್‌ ಸಿಂಹ

ಕಾಂಗ್ರೆಸ್‌- ಸಿ.ಎಚ್‌.ವಿಜಯಶಂಕರ್‌

ಜೆಡಿಎಸ್‌- ಎಚ್‌.ಡಿ.ದೇವೇಗೌಡ, ಪ್ರೊ.ಕೆ.ಎಸ್‌.ರಂಗಪ್ಪ, ಜಿ.ಡಿ.ಹರೀಶ್‌ಗೌಡ

 

Follow Us:
Download App:
  • android
  • ios