ಪಾಟ್ನಾ(ಸೆ.16): ದೇಶದ ಅತ್ಯಂತ ಪ್ರತಿಭಾವಂತ ಚುನಾವಣಾ ನೀತಿ ನಿರೂಪಕ, ಐಪ್ಯಾಕ್ ಸಂಸ್ಥೆಯ ಮುಖ್ಯಸ್ಥ ಪ್ರಶಾಂತ್ ಕಿಶೋರ್ ಇಂದು ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷ ಸೇರಲಿದ್ದಾರೆ.

ಇಂದು ಪಾಟ್ನಾದಲ್ಲಿ ಜೆಡಿಯು ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಸೇರಲಿದ್ದು, ಈ ವೇಳೆ ಪ್ರಶಾಂತ್ ಕಿಶೋರ್ ಅವರನ್ನು ನಿತೀಶ್ ಪಕ್ಷಕ್ಕೆ ಬರಮಾಡಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇನ್ನು ಪ್ರಶಾಂತ್ ಅವರಿಗೆ ಪಕ್ಷ ಮತ್ತು ಸರ್ಕಾರ ಎರಡರಲ್ಲೂ ಉನ್ನತ ಹುದ್ದೆ ನೀಡಲು ನಿತೀಶ್ ನಿರ್ಧರಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇನ್ನು ಜೆಡಿಯು ಮತ್ತು ಬಿಜೆಪಿ ನಡುವೆ ಸ್ನೇಹದ ಕೊಂಡಿಯಾಗಿ ಕೆಲಸ ಮಾಡಲಿರುವ ಪ್ರಶಂತ್ ಕಿಶೋರ್, ಮೈತ್ರಿ ಸರ್ಕಾರ ಮತ್ತು ಮುಂದಿನ ಲೋಕಸಭೆ ಚುನಾವಣೆ ರಣತಂತ್ರ ಒಟ್ಟಿಗೆ ಹೆಣೆಯುವ ಜವಾಬ್ದಾರಿ ಹೊರಲಿದ್ದಾರೆ ಎನ್ನಲಾಗಿದೆ.

ಈ ಹಿಂದೆ ಜೆಡಿಯು ಸೇರುವ ಸುದ್ದಿಯನ್ನು ತಳ್ಳಿ ಹಾಕಿದ್ದ ಪ್ರಶಾಂತ್ ಕಿಶೋರ್, ಇದೀಗ ಅಧಿಕೃತವಾಗಿ ಪಕ್ಷ ಸೇರಲಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸೀಟು ಹಂಚಿಕೆ ಕುರಿತಂತೆ ಜೆಡಿಯು ಮತ್ತು ಬಿಜೆಪಿ ನಡುವಿನ ಮಾತುಕತೆಯಲ್ಲಿ ಪ್ರಶಾಂತ್ ಕಿಶೋರ್ ಮಹತ್ವದ ಪಾತ್ರ ನಿರ್ವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೋದಿ ಗೆಲ್ಲಿಸಿದ್ದ 'ಪಿಕೆ' ಸೇರ್ತಾರಾ ನಿತೀಶ್ ಕ್ಯಾಂಪ್?: "ಚುನಾವಣಾ ಚಾಣಕ್ಯ' ಆರ್ ಯೂ ಓಕೆ?