ಜೈಪುರ: ಕರ್ನಾಟಕದಲ್ಲಿ ‘ಆಪರೇಷನ್‌ ಕಮಲ’ ನಡೆಸಿ, ಸರ್ಕಾರ ಉರುಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್‌- ಜೆಡಿಎಸ್‌ ಮಿತ್ರಕೂಟ ಆರೋಪಿಸುತ್ತಿರುವಾಗಲೇ, ಆ ರಾಜ್ಯದಲ್ಲಿ ಯಾವಾಗ ಬೇಕಾದರೂ ರಾಜಕೀಯ ಭೂಕಂಪ ಸಂಭವಿಸಬಹುದು ಎಂದು ಬಿಜೆಪಿ ಹಿರಿಯ ನಾಯಕರೂ ಆಗಿರುವ ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಸ್ಫೋಟಕ ಹೇಳಿಕೆ ನೀಡಿದ್ದಾರೆ.

"

ಕರ್ನಾಟಕದಲ್ಲಿ ಕಾಂಗ್ರೆಸ್‌, ಜೆಡಿಎಸ್‌ ನಡುವೆ ಅಸ್ಥಿರ ಮೈತ್ರಿ ಏರ್ಪಟ್ಟಿದೆ. ಆ ಸರ್ಕಾರ ಸ್ಥಿರವಾಗಿಲ್ಲ, ಎಂದಿಗೂ ಅಭಿವೃದ್ಧಿಯನ್ನು ನೀಡಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಯಾವಾಗ ಬೇಕಾದರೂ ಧಮಾಕ (ಸ್ಫೋಟ) ಸಂಭವಿಸಬಹುದು ಎಂದು ಜನರು ನಿರೀಕ್ಷಿಸುತ್ತಿದ್ದಾರೆ. ಅದು ಯಾವಾಗ ಎಂಬುದನ್ನು ಬಿ.ಎಸ್‌. ಯಡಿಯೂರಪ್ಪ ಮಾತ್ರ ಹೇಳಬಲ್ಲರು ಎಂದು ಕಾಂಗ್ರೆಸ್‌ ನಾಯಕ ಡಿ.ಕೆ. ಶಿವಕುಮಾರ್‌ ಹಾಗೂ ಯಡಿಯೂರಪ್ಪ ಭೇಟಿ ಕುರಿತ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಸರ್ಕಾರ ರಚನೆಗೆ ಕೇವಲ 7 ಸ್ಥಾನಗಳ ಕೊರತೆ ಇತ್ತು. ಜೆಡಿಎಸ್‌- ಕಾಂಗ್ರೆಸ್‌ ಅವಕಾಶವಾದಿ ರಾಜಕಾರಣಕ್ಕೆ ಹೆಸರುವಾಸಿ. ಅವರೆಡೂ ಪಕ್ಷಗಳು ಸ್ಥಿರ ಸರ್ಕಾರವನ್ನು ನೀಡಲಾರವು ಎಂದು ರಾಜಸ್ಥಾನ ಚುನಾವಣೆಗೆ ಬಿಜೆಪಿ ಉಸ್ತುವಾರಿಯಾಗಿರುವ ಅವರು ತಿಳಿಸಿದರು.

ಕೆಲ ದಿನಗಳ ಹಿಂದೆ ಡಿ.ಕೆ. ಶಿವಕುಮಾರ್‌ ಅವರನ್ನು ಯಡಿಯೂರಪ್ಪ ಹಾಗೂ ಅವರ ಪುತ್ರ ಬಿ.ವೈ. ರಾಘವೇಂದ್ರ ಭೇಟಿಯಾಗಿ ಸಮಾಲೋಚನೆ ನಡೆಸಿದ್ದರು. ಇದು ರಾಜಕೀಯ ವಲಯದಲ್ಲಿ ಸಂಚಲನಕ್ಕೆ ಕಾರಣವಾಗಿತ್ತು. ಆದರೆ ಶಿವಮೊಗ್ಗ ಜಿಲ್ಲೆಯ ವಿವಿಧಿ ಅಭಿವೃದ್ಧಿ ಯೋಜನೆಗಳ ಕುರಿತಂತೆ ಈ ಮಾತುಕತೆ ನಡೆಯಿತು. ಅದರಿಂದಾಚೆಗೆ ಏನೂ ಇರಲಿಲ್ಲ ಎಂದು ಇಬ್ಬರೂ ನಾಯಕರು ತೆರೆ ಎಳೆಯುವ ಪ್ರಯತ್ನ ಮಾಡಿದ್ದರು.