ಹಾಸನ[ಜೂ.22]: ಅನಾರೋಗ್ಯದ ಕಾರಣ ಜೂ.17ರಂದು ಪ್ರಮಾಣ ವಚನ ಸ್ವೀಕಾರಕ್ಕೆ ಗೈರು ಹಾಜರಾಗಿದ್ದ ಹಾಸನ ಲೋಕಸಭಾ ಕ್ಷೇತ್ರದ ಸದಸ್ಯ ಪ್ರಜ್ವಲ್‌ ರೇವಣ್ಣ ಶುಕ್ರವಾರ ಸಂಸದರಾಗಿ ಶಪಥ ಗ್ರಹಣ ಮಾಡಿದ್ದಾರೆ.

ಮಧ್ಯಾಹ್ನ 2 ಗಂಟೆಯ ಸಮಯದಲ್ಲಿ ತಮ್ಮ ಮನೆ ದೇವರಾದ ಈಶ್ವರನ ಹೆಸರಿನಲ್ಲಿ ಕನ್ನಡ ಭಾಷೆಯಲ್ಲಿಯೇ ಪ್ರಜ್ವಲ್‌ ಲೋಕಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರು ಪ್ರಮಾಣವಚನ ಬೋಧಿಸಿದರು. ನಂತರ ಲೋಕಸಭಾ ಸದಸ್ಯರ ಹೆಸರು ಇರುವ ಕಡತಕ್ಕೆ ಸಹಿ ಹಾಕಿದರು.

ಪ್ರಜ್ವಲ್‌ ಪ್ರಮಾಣವಚನಕ್ಕೆ ತಂದೆ, ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ, ತಾಯಿ ಭವಾನಿ ರೇವಣ್ಣ, ಸಹೋದರ ಡಾ.ಸೂರಜ್‌ ರೇವಣ್ಣ ಸಾಕ್ಷಿಯಾದರು. ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಹುಟ್ಟಿದ ಹರದನಹಳ್ಳಿಯಲ್ಲಿ ಈಶ್ವರ ದೇವಾಲಯ ಇದ್ದು, ಈ ದೇವರು ದೇವೇಗೌಡರ ಕುಟುಂಬದ ಮನೆ ದೇವರಾಗಿದೆ. ಹೀಗಾಗಿ ಪ್ರಜ್ವಲ್‌ ಮನೆ ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸುವುದಕ್ಕೂ ಮುನ್ನ ಪ್ರಜ್ವಲ್‌ ರೇವಣ್ಣ ತಮ್ಮ ಜೊತೆಗೆ ದೆಹಲಿಗೆ ಬಂದ ತಮ್ಮ ತಂದೆ ಎಚ್‌.ಡಿ.ರೇವಣ್ಣ ಮತ್ತು ತಾಯಿ ಭವಾನಿ ಅವರ ಆಶೀರ್ವಾದ ಪಡೆದರು.

ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪ್ರಜ್ವಲ್‌, ಅನಾರೋಗ್ಯದ ಕಾರಣ ಜೂ.17 ರಂದು ಸಂಸತ್‌ನಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯ ಆಗಿರಲಿಲ್ಲ. ಈ ಬಗ್ಗೆ ಲೋಕಸಭಾ ಸ್ಪೀಕರ್‌ ಅವರಿಗೂ ಮಾಹಿತಿ ನೀಡಿದ್ದೆ. ಇದೀಗ ಸಂಸದನಾಗಿ ಸ್ವೀಕಾರ ಮಾಡಿದ್ದೇನೆ. ರಾಜ್ಯದ ನೆಲ, ಜಲದ ಪ್ರಶ್ನೆ ಬಂದಾಗ ಸಂಸತ್‌ನಲ್ಲಿ ದನಿ ಎತ್ತುತ್ತೇನೆ ಎಂದು ತಿಳಿಸಿದರು.