ಯಡಿಯೂರಪ್ಪ ಸರ್ಕಾರ ಇದ್ದಾಗ ಕರಂದ್ಲಾಜೆಯಿಂದ 28 ಸಾವಿರ ಕೋಟಿ ರು. ಹಗರಣ | ಖರೀದಿಯಲ್ಲಿ ಅವ್ಯವಹಾರ ಬಯಲಿಗೆ ಕಾಂಗ್ರೆಸ್ ಸಿದ್ಧತೆ | ಇದೇ 30ಕ್ಕೆ ಸದನ ಸಮಿತಿ ಸಭೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಲ್ಲಿದ್ದಲು ಹಗರಣದ ಆರೋಪ ಮಾಡಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಮಾಜಿ ಇಂಧನ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಅದೇ ಇಲಾಖೆಯ ಹಗರಣದ ಅಸ್ತ್ರ ಪ್ರಯೋಗಿಸಲು ರಾಜ್ಯದ ಕಾಂಗ್ರೆಸ್ ಸರ್ಕಾರ ಸಜ್ಜಾಗಿದೆ.

ಹಿಂದೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ನಡೆದಿದೆ ಎನ್ನಲಾದ ಕೋಟ್ಯಂತರ ರು. ಮೌಲ್ಯದ ವಿದ್ಯುತ್ ಖರೀದಿ ಹಗರಣವನ್ನು ಬಯಲು ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ರಾಜ್ಯದ ಬೊಕ್ಕಸಕ್ಕೆ 28 ಸಾವಿರ ಕೋಟಿ ರು. ನಷ್ಟವುಂಟಾಗಿದೆ ಎನ್ನಲಾಗಿರುವ ದಾಖಲೆಗಳಿರುವ ಸದನ ಸಮಿತಿಯ ವರದಿಯನ್ನು ಬೆಳಗಾವಿ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಲು ಸರ್ಕಾರ ಸಜ್ಜಾಗಿದೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಸದನ ಸಮಿತಿಯ ಸಭೆಯನ್ನು ಸಮಿತಿ ಅಧ್ಯಕ್ಷರೂ ಆದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅ.30ರಂದು ಕರೆದಿದ್ದು, ಸದನ ಸಮಿತಿ ವರದಿಗೆ ಸಭೆಯ ಅನುಮೋದನೆ ಪಡೆಯಲಿದ್ದಾರೆ ಎಂದು ಹೇಳಲಾಗಿದೆ. ಆದರೆ, ಶಿವಕುಮಾರ್ ಅವರೇ ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆ ಅವರನ್ನು ರಕ್ಷಿಸಲು ಯತ್ನಿಸುತ್ತಿದ್ದಾರೆ ಎಂದು ಈ ಹಿಂದೆ ಆರೋಪಿಸಿ ಸದನ ಸಮಿತಿ ಸಭೆಗಳಿಂದ ದೂರವುಳಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಈ ಸಭೆಯಲ್ಲಿ ಪಾಲ್ಗೊಂಡು ಸದನ ಸಮಿತಿಯ ವರದಿಗೆ ತಮ್ಮ ಸಹಿ ಹಾಕುವರೇ ಎಂಬುದು ಕುತೂಹಲ ಉಳಿದಿದೆ.

ಶೋಭಾ ನೇರ ಪಾತ್ರ ನಿರ್ವಹಿಸಿದ್ದಾರೆ ಎನ್ನಲಾದ ಈ ಹಗರಣದಲ್ಲಿ, 25 ವರ್ಷಗಳ ಅವಧಿಗೆ ಪ್ರತಿ ಯೂನಿಟ್‌ಗೆ 3.50 ರು.ಗೆ ವಿದ್ಯುತ್ ನೀಡಲು ಖಾಸಗಿ ಕಂಪೆನಿ ಸಿದ್ಧವಿದ್ದರೂ ಅದನ್ನು ತಾಂತ್ರಿಕ ನೆಪವೊಡ್ಡಿ ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಿದ್ದ ಟೆಂಡರ್ ಅನ್ನು ರದ್ದುಪಡಿಸಲಾಗುತ್ತದೆ. ಇದಾಗಿ ಕೆಲವೇ ದಿನಗಳಲ್ಲಿ ಯಾವ ಸಂಸ್ಥೆಯೂ ಪ್ರತಿ ಯೂನಿಟ್‌ಗೆ 3.50 ರು. ದರದಲ್ಲಿ ವಿದ್ಯುತ್ ನೀಡಲು ಸಿದ್ಧವಾಗಿತ್ತೋ ಅದೇ ಸಂಸ್ಥೆಯಿಂದ ಪ್ರತಿ ಯೂನಿಟ್‌ಗೆ 6.20 ರು.ಗೆ ವಿದ್ಯುತ್ ಖರೀದಿ ಮಾಡುವ ಟೆಂಡರ್ ಅನ್ನು ನೀಡುತ್ತದೆ.

ಇಂಧನ ಇಲಾಖೆ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದರೂ ಲೆಕ್ಕಿಸದೇ ಟೆಂಡರ್ ನೀಡಲಾಗುತ್ತದೆ ಎಂಬುದು ಆರೋಪ. ಈ ಸಂಬಂಧ ವಿದ್ಯುತ್ ಖರೀದಿ ಹಗರಣದ ಸದನ ಸಮಿತಿಗೆ ಸಮಿತಿ ಸದಸ್ಯರೂ ಆಗಿರುವ ಮಾಜಿ ಸಿಎಂ ಎಚ್ .ಡಿ.ಕುಮಾರಸ್ವಾಮಿ ಅವರು ಎರಡು ತಿಂಗಳ ಹಿಂದೆಯೇ ನೀಡಿರುವ ದಾಖಲೆಗಳನ್ನು ಆಧರಿಸಿ, ಬಿಜೆಪಿಗೆ ಮುಖಂಡರ ವಿರುದ್ಧ ಪ್ರತ್ಯಸ್ತ್ರ ಪ್ರಯೋಗಿಸಲು ಸರ್ಕಾರ ಮುಂದಾಗಿದೆ.

ಏನಿದು ವಿದ್ಯುತ್ ಖರೀದಿ ಹಗರಣ?: ಇಂಧನ ಇಲಾಖೆಯು ವಿದ್ಯುತ್ ಪೂರೈಕೆ ಸಂಬಂಧ ಕೇಂದ್ರ ಸರ್ಕಾರ, ಇತರೆ ರಾಜ್ಯ ಸರ್ಕಾರಗಳು, ಖಾಸಗಿ ಕಂಪನಿಗಳಿಂದ ಅಲ್ಪಾವಧಿ (ಒಂದು ವರ್ಷ) ಮಧ್ಯಮಾವಧಿ (ಏಳು ವರ್ಷ) ಹಾಗೂ ದೀರ್ಘಾವಧಿ (25 ವರ್ಷ) ಗಾತ್ರ ವಿದ್ಯುತ್ ಖರೀದಿ ಒಪ್ಪಂದಗಳನ್ನು ಮಾಡಿಕೊಳ್ಳುತ್ತದೆ.

ಇದೇ ರೀತಿ 2010ರಲ್ಲಿ ಇಂಧನ ಇಲಾಖೆ 1580 ಮೆಗಾ ವ್ಯಾಟ್ ವಿದ್ಯುತ್ ಖರೀದಿಗೆ ದೀರ್ಘಾವಧಿ ಟೆಂಡರ್ ಆಹ್ವಾನ ಮಾಡಿತ್ತು. ಆ ವೇಳೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರೆ, ಶೋಭಾ ಕರಂದ್ಲಾಜೆ ಇಂಧನ ಸಚಿವೆಯಾಗಿದ್ದರು. ಟೆಂಡರ್‌ನಲ್ಲಿ ಜಿಂದಾಲ್ ಕಂಪನಿ ಪ್ರತಿ ಮೆ.ವ್ಯಾ.ಗೆ 3.50 ರು.ಗಳ ದರದಲ್ಲಿ ಪೂರೈಕೆಗೆ ಒಪ್ಪಿಕೊಂಡಿತ್ತು. ಕಡಿಮೆ ದರ ನಮೂದಿಸಿದ್ದ ಜಿಂದಾಲ್‌ಗೆ ಟೆಂಡರ್ ನೀಡುವ ಕುರಿತು ಸಚಿವ ಸಂಪುಟ ಸಭೆ ಅನುಮೋದನೆ ನೀಡಿತ್ತು.

ಅದಾದ ಬಳಿಕ ಅಂದಿನ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರು, ಜಿಂದಾಲ್ ನಮೂದಿಸಿರುವ ಪ್ರತಿ ಮೆ.ವ್ಯಾ. ದರವು ದುಬಾರಿಯಾಗಿದ್ದು, ಅದನ್ನು ಕೈ ಬಿಟ್ಟು ಮತ್ತೊಮ್ಮೆ ಟೆಂಡರ್ ಕರೆಯುವಂತೆಯೂ, ಜಿಂದಾಲ್ ನೀಡಿರುವ ಟೆಂಡರ್ ಸ್ಥಗಿತಗೊಳಿಸುವಂತೆಯೂ ಸರ್ಕಾರವನ್ನು ಕೋರಿದರು.

ಆಗ ಇಂಧನ ಇಲಾಖೆಯ ಮುಖ್ಯ ಎಂಜಿನಿಯರ್ (ಯೋಜನೆ) ಅಂದಿನ ಸಿಎಂ ಯಡಿಯೂರಪ್ಪ ಅವರಿಗೆ ನೇರವಾಗಿ ಪತ್ರ ಬರೆದು, ಜಿಂದಾಲ್‌ಗೆ ನೀಡಿರುವ ಟೆಂಡರ್‌ನ ಮೊತ್ತ ಸೂಕ್ತವಾಗಿದ್ದು, ಅದನ್ನು ಮುಂದುವರಿಸುವಂತೆ ಕೋರಿದ್ದರು.

ಇದಾದ ನಂತರವೂ ಜಿಂದಾಲ್ ಕಂಪೆನಿಗೆ ನೀಡಲಾಗಿದ್ದ ಟೆಂಡರ್ ರದ್ದಾಗುತ್ತದೆ. ಆದರೆ, ಕೆಲವೇ ದಿನಗಳಲ್ಲಿ ಅದೇ ಜಿಂದಾಲ್ ಕಂಪನಿಗೆ ಅದೇ 1580 ಮೆ.ವ್ಯಾ. ಮೊತ್ತದ ವಿದ್ಯುತ್‌ನ್ನು ಅಲ್ಪಾವಧಿಗೆ (ಒಂದು ವರ್ಷಕ್ಕೆ) ಪ್ರತಿ ಮೆ. ವ್ಯಾ.ಗೆ 6.20 ರು.ಗಳ ದರದಲ್ಲಿ ವಿದ್ಯುತ್ ಖರೀದಿಸಲು ಟೆಂಡರ್ ನೀಡಲಾಯಿತು.

ಇದರಿಂದಾಗಿ ಪ್ರತಿ ಮೆ.ವ್ಯಾ. ಗೆ ಸರಿಸುಮಾರು 90 ಪಟ್ಟು ಹೆಚ್ಚಿನ ಮೊತ್ತಕ್ಕೆ ಇಂಧನ ಇಲಾಖೆ ಜಿಂದಾಲ್‌ನಿಂದ ವಿದ್ಯುತ್ ಖರೀದಿಸಿತ್ತು. ದೀರ್ಘಾವಧಿಯ ಟೆಂಡರ್‌ನ್ನು ಅಲ್ಪಾವಧಿಗೆ ಇಳಿಸಿ, ಪ್ರತಿ ಮೆ.ವ್ಯಾ.ನ ಮೊತ್ತವನ್ನು 3.50 ರು.ಗಳಿಂದ 6.20 ರು.ಗಳಿಗೆ ಹೆಚ್ಚಿಸಿದ ಪರಿಣಾಮವಾಗಿ ರಾಜ್ಯ ಸರ್ಕಾರಕ್ಕೆ 28 ಸಾವಿರ ಕೋಟಿ ರು.ಗಳ ನಷ್ಟ ಉಂಟಾಗಿದೆ (3.50 ರು.ಗೆ ವಿದ್ಯುತ್ ಪೂರೈಸಿದ್ದರೆ ಈ ಪ್ರಮಾಣದ ಹಣ ರಾಜ್ಯಕ್ಕೆ

ಉಳಿತಾಯವಾಗುತ್ತಿತ್ತು ಎಂಬುದು ವಾದ) ಎಂದ ಕುಮಾರಸ್ವಾಮಿ ವಿದ್ಯುತ್ ಖರೀದಿ ಮೇಲಿನ ಸದನ ಸಮಿತಿಗೆ ನೀಡಿದ್ದ ದಾಖಲೆಗಳಲ್ಲಿ ಉಲ್ಲೇಖಿಸಿದ್ದಾರೆ.

ದೀರ್ಘಾವಧಿ ವಿದ್ಯುತ್ ಖರೀದಿಗಾಗಿ ಒಪ್ಪಂದ ನಡೆದಿತ್ತು. ಇದರಲ್ಲಿ ಅಧಿಕಾರಿಗಳೇ ನಿರ್ಣಾಯಕ ಪಾತ್ರ ವಹಿಸಿದ್ದು, ಇಂಧನ ಸಚಿವರ ಪಾತ್ರ ಇರಲಿಲ್ಲ. ನನ್ನ ವಿರುದ್ಧದ ಆರೋಪದ ತನಿಖೆಯನ್ನು ಬೇಕಿದ್ದರೆ ಸಿಬಿಐಗೆ ವಹಿಸಲಿ. ಇದರಲ್ಲಿ ಯಾರ ಷಡ್ಯಂತ್ರ ಇದೆ ಎಂಬುದು ಜನತೆಗೆ ಗೊತ್ತಾಗಲಿ.

ಶೋಭಾ ಕರಂದ್ಲಾಜೆ ಬಿಜೆಪಿ ಸಂಸದೆ

ಖರೀದಿಯಲ್ಲಿ ನನ್ನ ಪಾತ್ರವಿಲ್ಲ, ಸಿಬಿಐಗೆ ಒಪ್ಪಿಸಿ

ಬಿಜೆಪಿ ಆಡಳಿತಾವಧಿಯಲ್ಲಿ ನಡೆದಿದೆ ಎನ್ನಲಾದ ವಿದ್ಯುತ್ ಖರೀದಿ ಹಗರಣದಲ್ಲಿ ಇಂಧನ ಸಚಿವರ ಯಾವುದೇ ಪಾತ್ರ ಇಲ್ಲವಾಗಿದ್ದು, ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬಹುದು ಎಂದು ಮಾಜಿ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಬಿಜೆಪಿಯ ಅಧಿಕಾರಾವಧಿಯಲ್ಲಿ ನಿಯಮಗಳನ್ನು ಉಲ್ಲಂಘನೆ ಮಾಡಿ 28 ಸಾವಿರ ಕೋಟಿ ರು. ಮೊತ್ತದ ವಿದ್ಯುತ್ ಖರೀದಿ ಮಾಡಲಾಗಿದ್ದು, ಸರ್ಕಾರದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡಲಾಗಿದೆ ಎಂಬ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಅವರು, ದೀರ್ಘಾವಧಿ ಯೋಜನೆಗಾಗಿ ವಿದ್ಯುತ್ ಖರೀದಿ ಮಾಡಿಕೊಳ್ಳಲು ಸರ್ಕಾರ ಮತ್ತು ಸರ್ಕಾರಗಳ ನಡುವೆ ಒಪ್ಪಂದವಾಗಿದೆ. ಖರೀದಿಯಲ್ಲಿ ಅಧಿಕಾರಿಗಳೇ ನಿರ್ಣಾಯಕ ಪಾತ್ರ ವಹಿಸಿದ್ದು, ಇಂಧನ ಸಚಿವರ ಯಾವುದೇ ಪಾತ್ರ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು.

ನನ್ನ ವಿರುದ್ಧ ಆರೋಪ ಮಾಡಿರುವ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬಹುದು. ವಿದ್ಯುತ್ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂಬುದರ ಹಿಂದೆ ಯಾರೆಲ್ಲರ ಷಡ್ಯಂತ್ರ ಇದೆ ಎನ್ನುವುದು ಜನತೆಗೆ ಗೊತ್ತಾಗಲಿ. ವಿನಾಕಾರಣ ಬಿಜೆಪಿ ನಾಯಕರ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಲಾಗುತ್ತಿದೆ. ಬೆಳಗಾವಿ ಅಧಿವೇಶನದಲ್ಲಿ ವರದಿಯನ್ನು ಮಂಡಿಸಬಹುದು ಎಂದರು.