ನವದೆಹಲಿ : ದೇಶದಲ್ಲಿ ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಈ ನಿಟ್ಟಿನಲ್ಲಿ ವಿಪಕ್ಷಗಳ ಒಕ್ಕೂಟ ಫೆ.13ರ ಬುಧವಾರ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಮಹಾ ರ‍್ಯಾಲಿಯೊಂದನ್ನು ಹಮ್ಮಿಕೊಂಡಿದೆ. ಇದರಲ್ಲಿ ಪಾಲ್ಗೊಳ್ಳಲು ಆಗಮಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರನ್ನು ವಿವಿಧ ರೀತಿಯ ಪೋಸ್ಟರ್‌ಗಳು ಸ್ವಾಗತಿಸಿದ್ದು, ದೀದಿ ಕಾಲೆಳೆದಿವೆ.

 ದೀದಿ ನಿಮ್ಮ ಹೃದಯದಿಂದ ನಗು ಹೊಮ್ಮಿಸಿ, ಇದು ಪ್ರಜಾಪ್ರಭುತ್ವದ  ನಾಡು ಎನ್ನುವ ಸಂದೇಶ ಪ್ರಕಟಿಸಿ ಪೋಸ್ಟರ್ ಮೂಲಕ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಟೀಕಿಸಲಾಗಿದೆ. 

ದೀದಿ ಆಗಮಿಸುವ ನಿಟ್ಟಿನಲ್ಲಿ ದಿಲ್ಲಿಯ ಜಂತರ್ ಮಂತರ್ ರಸ್ತೆ, ಬಂಗಾ ಭವನ್,  ವಿಂಡ್ಸರ್ ಪ್ಯಾಲೇಸ್ ಸರ್ಕಲ್ ಪ್ರದೇಶದಲ್ಲಿ ಈ ರೀತಿಯ ಪೋಸ್ಟರ್ ಗಳು ರಾರಾಜಿಸುತ್ತಿದ್ದು, ಎಲ್ಲರ ಗಮನ ಸೆಳೆಯುತ್ತಿವೆ.   

ದೇಶದಲ್ಲಿ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಈ ನಿಟ್ಟಿನಲ್ಲಿ ದಿಲ್ಲಿಯಲ್ಲಿ ನಡೆಯುವ ತನ್ಶಾಹಿ ಹಟಾವೋ, ಲೋಕತಂತ್ರ ಬಚಾವೋ ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ಮಮತಾ ಬ್ಯಾನರ್ಜಿ ರಾಷ್ಟ್ರ ರಾಜಧಾನಿಗೆ ಆಗಮಿಸಿದ್ದಾರೆ. 

ಬಿಜೆಪಿ ರ‍್ಯಾಲಿಗೆ ವಿರೋಧ ಹಿನ್ನೆಲೆ ಟೀಕೆ :  ಕಳೆದ ತಿಂಗಳು ಕೋಲ್ಕತಾದಲ್ಲಿ ನಡೆಯಬೇಕಿದ್ದ ಬಿಜೆಪಿ ಮಹಾ ರಥಯಾತ್ರೆಗೆ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಅನುಮತಿ ನೀಡಲು ನಿರಾಕರಿಸಿದ್ದ ಕಾರಣ ಮತ್ತೊಂದು ಪೋಸ್ಟರ್ ಹಾಕಿದ್ದು,  ದೀದಿ ನಿವು ಜನತೆಯನ್ನುದ್ದೇಶಿಸಿ ಮಾತನಾಡುವುದನ್ನು ಇಲ್ಲಿ ಯಾರೂ ತಡೆಯುವುದಿಲ್ಲ ಎಂದು ಹೇಳಲಾಗಿದೆ. 

ಕಳೆದ ತಿಂಗಳ ಬಿಜೆಪಿ ರ‍್ಯಾಲಿಗೆ ಅಮಿತ್ ಶಾ ಬದಲಿಗೆ ಆಗಮಿಸಿ ಭಾಷಣ ಮಾಡಬೇಕಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೆಲಿಕಾಪ್ಟರ್ ಲ್ಯಾಂಡ್ ಮಾಡಲು ಅವಕಾಶ ನೀಡಿರಲಿಲ್ಲ.  ಈ ನಿಟ್ಟಿನಲ್ಲಿ ದಿಲ್ಲಿಗೆ ಆಗಮಿಸಿರುವ ಮಮತಾ ಬ್ಯಾನರ್ಜಿಗೆ ವಿವಿಧ ರೀತಿಯಲ್ಲಿ ಟೀಕಾ ಪ್ರಹಾರ ಮಾಡಲಾಗಿದೆ. 

ದೇಶದಲ್ಲಿ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ವಿವಿಧ ಪಕ್ಷಗಳು ಹೆಚ್ಚಿನ ಸ್ಥಾನ ಪಡೆದುಕೊಂಡು ಅಧಿಕಾರ ಗದ್ದುಗೆಗೆ ಏರಲು ಶತಪ್ರಯತ್ನ ನಡೆಸುತ್ತಿವೆ. ಇನ್ನು  ದೀದಿ ರಾಜ್ಯ ಪಶ್ಚಿಮ  ಬಂಗಾಳದಲ್ಲಿ ಬಿಜೆಪಿ 22ಕ್ಕಿಂತಲೂ ಹೆಚ್ಚು ಸ್ಥಾನ ಪಡೆಯಲು ಕಸರತ್ತು ನಡೆಸುತ್ತಿವೆ.