ನವದೆಹಲಿ : ಫೆ. 14ರಂದು CRPF ಯೋಧರ ಮೇಲೆ ಪುಲ್ವಾಮಾದಲ್ಲಿ ಜೈಶ್ ಸಂಘಟನೆ ದಾಳಿ ನಡೆಸಿದ ಬೆನ್ನಲ್ಲೇ ಹಲವು ರೀತಿಯಲ್ಲಿ ಪಾಕ್ ಹಾಗೂ ಭಾರತದ ನಡುವಿನ ಸಂಪರ್ಕದ ಮೇಲೆ ಪರಿಣಾಮ ಎದುರಾಗಿದೆ. 

ರೈಲ್ವೆ ಸಚಿವಾಲಯದ ಮಾಹಿತಿ ಪ್ರಕಾರ ದಿಲ್ಲಿ ಹಾಗೂ ಲಾಹೋರ್ ನಡುವೆ ಸಂಚರಿಸುವ ರೈಲು ಸೇವೆಯ ಮೇಲೆ ಸಾಕಷ್ಟು ಪರಿಣಾಮವಾಗಿದ್ದು, ಪ್ರಯಾಣಿಕರ ಸಂಖ್ಯೆ ಅತ್ಯಂತ ಕನಿಷ್ಟ ಮಟ್ಟಕ್ಕೆ ಕುಸಿದಿದೆ. 

 ಸಂಜೋತಾ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸುವವರು ಅತೀ ಕಡಿಮೆಯಾಗಿದ್ದು, ಸಂಪೂರ್ಣ ಖಾಲಿ ಯಾಗಿ ಸಂಚಾರ ಮಾಡುವಂತಾಗಿದೆ. 

ಸಾವಿರಾರು ಜನರು ಪ್ರಯಾಣಿಸಬಹುದಾದ ರೈಲಿನಲ್ಲಿ ಕೇವಲ 100ರ ಸಂಖ್ಯೆಯಲ್ಲಿ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. 

ಸಾಮಾನ್ಯ ದಿನಗಳಲ್ಲೇ ರೈಲಿನಲ್ಲಿ 1000ಕ್ಕೂ ಹೆಚ್ಚು ಪ್ರಯಾಣಿಕರು ಸಂಚರಿಸುತ್ತಿದ್ದರು. ವಾರದಲ್ಲಿ 2 ದಿನ ಸಂಚಾರ ಮಾಡುವ ರೈಲಿನಲ್ಲಿ ಇದೀಗ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಕನಿಷ್ಟ ಮಟ್ಟಕ್ಕೆ ಕುಸಿಯುತ್ತಿದೆ ಎಂದು ರೈಲ್ವೆ ಇಲಾಖೆ ಹೇಳಿದೆ. 

ಇನ್ನು ಇದೀಗ ಭಾರತೀಯ ವಾಯುಪಡೆಯು ಗಡಿ ನಿಯಂತ್ರಣ ರೇಖೆಯನ್ನು ದಾಟಿ ಉಗ್ರರ ಶಿಬಿರಗಳನ್ನು ಧ್ವಂಸ ಮಾಡಿದ್ದು, 300 ಉಗ್ರರು ಹತರಾಗಿರಬಹುದೆಂದು ಅಂದಾಜಿಸಲಾಗಿದೆ.