ನವದೆಹಲಿ (ಮೇ. 30): ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಹೀನಾಯ ಸೋಲು ಕಂಡ ಬೆನ್ನಲ್ಲೇ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅಧ್ಯಕ್ಷ ಪಟ್ಟತ್ಯಜಿಸುವುದಾಗಿ ಪಟ್ಟು ಹಿಡಿದಿದ್ದಾರೆ. ಮೂಲಗಳ ಪ್ರಕಾರ ಇನ್ನು 3 ಅಥವಾ 4 ತಿಂಗಳಲ್ಲಿ ಬೇರೊಬ್ಬರು ಕಾಂಗ್ರೆಸ್‌ ಅಧ್ಯಕ್ಷಗಾಧಿಗೇರುವ ತನಕ ಮಾತ್ರ ರಾಹುಲ್‌ ಈ ಸ್ಥಾನದಲ್ಲಿ ಇರಲಿದ್ದಾರೆ.

1.2 ಲಕ್ಷ ಕೋಟಿ ದಾನಕ್ಕೆ ಅಮೆಜಾನ್‌ ಬಾಸ್‌ ಮಾಜಿ ಪತ್ನಿ ನಿರ್ಧಾರ!

ಹೀಗಾಗಿ ಮೋದಿ ಅಲೆಯಲ್ಲಿ ಕೊಚ್ಚಿ ಹೋಗುತ್ತಿರುವ ಶತಮಾನಗಳಷ್ಟುಹಳೆಯ ಪಕ್ಷವಾದ ಕಾಂಗ್ರೆಸ್‌ ಅನ್ನು ಮತ್ತೆ ಮೇಲೆತ್ತುವ ಸಮರ್ಥ ನಾಯಕರ ಹುಡುಕಾಟದಲ್ಲಿದೆ ಕಾಂಗ್ರೆಸ್‌. ಈ ಹಿನ್ನೆಲೆಯಲ್ಲಿ ರಾಹುಲ್‌ ಹೊರತಾಗಿ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿ ಯಾರಿದ್ದಾರೆ ಎಂಬ ಕಿರು ವಿವರಣೆ ಇಲ್ಲಿದೆ.

ಶಶಿ ತರೂರ್‌

63 ವರ್ಷದ ಶಶಿ ತರೂರ್‌ ಅವರದ್ದು ಬಹುಮುಖ ವ್ಯಕ್ತಿತ್ವ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ ಕೋಫಿ ಅನ್ನಾನ್‌ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ, ವಿಶ್ವಸಂಸ್ಥೆಯ ಸಂಪರ್ಕ ಮತ್ತು ಸಾರ್ವಜನಿಕ ಮಾಹಿತಿ ವಿಭಾಗದ ಅಧೀನ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯವಹಿಸಿದರು.

ಉತ್ತಮ ಲೇಖಕರೂ, ಅಂಕಣಕಾರರೂ, ಪತ್ರಕರ್ತರೂ, ಮಾನವ-ಹಕ್ಕುಗಳ ಹೋರಾಗಾರರೂ ಹೌದು. ಮಾಜಿ ವಿದೇಶಾಂಗ ಇಲಾಖೆಯ ರಾಜ್ಯ ಸಚಿವ ಮತ್ತು ಮೂರು ಬಾರಿ ಕೇರಳದ ತಿರುವನಂತಪುರಂನಿಂದ ಚುನಾಯಿತರಾಗಿ ಸಂಸತ್‌ ಸದಸ್ಯರಾಗಿದ್ದಾರೆ.

ಮೋದಿ ಶಪಥ ರಾತ್ರಿ 7ಕ್ಕೇ ಏಕೆ?: ಶುಭ ಮುಹೂರ್ತವಲ್ಲ, ಕಾರಣ ಬೇರೆಯೇ ಇದೆ!

ಉತ್ತಮ ವಾಕ್ಪಟು. ಕೇರಳದಲ್ಲಿ ಕಾಂಗ್ರೆಸ್‌ ಅಲ್ಪಮಟ್ಟಿಗೆ ಪ್ರಬಲವಾಗಿರಲು ಶಶಿ ತರೂರ್‌ ಅವರೂ ಕೂಡ ಕಾರಣ. ಆದರೆ 2009ರಿಂದ ಇವರು ರಾಜಕೀಯ ಪ್ರವೇಶಿಸಿದಾಗಿನಿಂದಲೂ ವಿವಾದಕ್ಕೆ ಒಳಗಾಗುತ್ತಲೇ ಇದ್ದಾರೆ. ಪತ್ನಿ ಸುನಂದ ಪುಷ್ಕರ್‌ ಅನುಮಾನಾಸ್ಪದ ಸಾವು ಪ್ರಕರಣ ಇವರ ಮೇಲಿದೆ.

ಅಮರೀಂದರ್‌ ಸಿಂಗ್‌

77 ವರ್ಷದ ಅಮರೇಂದರ್‌ ಸಿಂಗ್‌ ಪಂಜಾಬ್‌ನಲ್ಲಿ ಹಿಡಿತ ಹೊಂದಿರುವ ವ್ಯಕ್ತಿ. ಪಂಜಾಬ್‌ನ 13 ಲೋಕಸಭಾ ಕ್ಷೇತ್ರಗಳ ಪೈಕಿ 8ರಲ್ಲಿ ಕಾಂಗ್ರೆಸ್‌ ಗೆದ್ದಿದೆ. ಮೋದಿ ಅಲೆ ಎಲ್ಲ ರಾಜ್ಯಗಳನ್ನು ಕ್ಲೀನ್‌ ಸ್ವೀಪ್‌ ಮಾಡುತ್ತಿದ್ದರೆ, ಇತ್ತ ಪಂಜಾಬ್‌ ಮಾತ್ರ ಕಾಂಗ್ರೆಸ್‌ ಭದ್ರಕೋಟೆಯಾಗಿಯೇ ಉಳಿದಿದೆ. ವಿಧಾನಸಭಾ ಚುನಾವಣೆಯಲ್ಲೂ ಅಮರೀಂದರ್‌ ಸಿಂಗ್‌ ಅಕಾಲಿ-ಬಿಜೆಪಿ ಓಟವನ್ನು ತಡೆದು ನಿಲ್ಲಿಸಿದ್ದಾರೆ.

2014ರಲ್ಲಿ ಸಿಂಗ್‌ ಅಮೃತ್‌ಸರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ, ಮೋದಿ ಸಂಪುಟದಲ್ಲಿ ಹಣಕಾಸು ಮಂತ್ರಿಯಾಗಿದ್ದ ಅರುಣ್‌ ಜೇಟ್ಲಿ ಅವರನ್ನೇ ಮಣಿಸಿದ್ದರು. ಅದರಲ್ಲೂ ಅವರ ಧ್ವನಿಯಲ್ಲೊಂದು ವಿಶ್ವಾಸಾರ್ಹತೆ ಇದೆ. ಅಲ್ಲದೆ ಸೇನೆಯ ಹಿನ್ನೆಲೆ ಇರುವುದರಿಂದ ರಾಷ್ಟ್ರೀಯತೆಯ ವಿಷಯವನ್ನು ಸಮರ್ಥವಾಗಿ ನಿಭಾಯಿಸಬಲ್ಲರು.

ಅಲ್ಲದೆ ಅವರು ಸಿಖ್ಖರ ನಾಯಕ. ಇತಿಹಾಸವನ್ನು ನೋಡುವುದಾದರೆ, ಸಿಖ್ಖರ ನಾಯಕತ್ವದಲ್ಲಿ ಕಾಂಗ್ರೆಸ್‌ ಪಕ್ಷ ಒಳ್ಳೆಯ ಬೆಳವಣಿಗೆ ಕಂಡಿದೆ.

ಪ್ರಿಯಾಂಕಾ ಗಾಂಧಿ

ರಾಹುಲ್‌ ಕಾಂಗ್ರೆಸ್‌ ಅಧ್ಯಕ್ಷತೆ ವಹಿಸಿಕೊಂಡ ಬಳಿಕ ರಾಹುಲ್‌ಗೆ ಬಲಗೈ ಆಗಿರಲು ಪ್ರಿಯಾಂಕಾ ರಾಜಕೀಯ ಪ್ರವೇಶಿಸಿದರು. ಸದ್ಯ ಉತ್ತರ ಪ್ರದೇಶದ ಎಐಸಿಸಿ ಪ್ರಧಾನ ಕಾರ‍್ಯದರ್ಶಿಯಾಗಿರುವ ಪ್ರಿಯಾಂಕಾ ರಾಜಕೀಯ ಪ್ರವೇಶವು ಸಾಕಷ್ಟುಸುದ್ದಿ ಮಾಡಿತ್ತು. ಕಾಂಗ್ರೆಸ್‌ ಕೊನೆಯ ಅಸ್ತ್ರ ಎಂದೆಲ್ಲಾ ಹೆಸರಾಗಿತ್ತು.

ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಲಿ ಎಂಬ ಆಕಾಂಕ್ಷೆಯೂ ಹಲವರಲ್ಲಿ ಇತ್ತು. ಅಂದರೆ ಮೋದಿ ವಿರುದ್ಧ ಪ್ರಿಯಾಂಕಾಗೆ ಮೊದಲ ಸ್ಪರ್ದೆಯ್ಲಲೇ ಗೆಲ್ಲಲಾಗದಿದ್ದರೂ ಮೋದಿ ಗೆಲುವಿ ಓಟಕ್ಕೆ ಲಗಾಮು ಹಾಕುವ ತಾಕತ್ತು ಪ್ರಿಯಾಂಕಾಗೆ ಇದೆ ಎಂದು ವಿಶ್ಲೇಷಿಸಲಾಗಿತ್ತು. ಆದಾಗ್ಯೂ ಪ್ರಿಯಾಂಕಾ ಸ್ಪರ್ಧಿಸದೆ ಕೊನೇ ಕ್ಷಣದಲ್ಲಿ ಹಿಂದೆ ಸರಿದರು.

ಇದರ ಹೊರತಾಗಿ ರಾಹುಲ್‌ ಗಾಂಧಿಗೆ ಹೋಲಿಸಿದರೆ ಪ್ರಿಯಾಂಕಾ ಬಗ್ಗೆ ಜನರಲ್ಲಿ ವಿಶ್ವಾಸವಿದೆ. ಅಲ್ಲದೆ ಅಜ್ಜಿ ಇಂದಿರಾ ಗಾಂಧಿಯನ್ನೇ ಹೋಲುವುದು ಅವರ ಮತ್ತೊಂದು ಪ್ಲಸ್‌ ಪಾಯಿಂಟ್‌. ರಾಹುಲ್‌ ಬದಲಾಗಿ ಪ್ರಿಯಾಂಕಾ ಕಾಂಗ್ರೆಸ್‌ ಅಧ್ಯಕ್ಷಗಾಧಿ ಹಿಡಿದರೆ ಪಕ್ಷದ ಬಲವರ್ಧನೆ ಖಂಡಿತ ಸಾಧ್ಯ ಎಂಬ ವಿಶ್ಲೇಷಣೆಗಳು ಸದ್ಯ ಚಾಲ್ತಿಯಲ್ಲಿವೆ. ಆದರೆ ಗಾಂಧಿ ಕುಟುಂಬದವರು ಅಧ್ಯಕ್ಷಗಾಧಿ ಹಿಡಿಯುವುದು ಬೇಡ ಎನ್ನುತ್ತಿರುವುದು ಇದಕ್ಕೆ ತೊಡಕಾಗಬಹುದು.

ರಾಹುಲ್‌ ರಾಜೀನಾಮೆ ನಿರ್ಧಾರ ಅಚಲ: ಸೋಲಿನ ಆಘಾತದಿಂದ ಹೊರಬಾರದ 'ಕೈ' ಅಧ್ಯಕ್ಷ

ಸಚಿನ್‌ ಪೈಲಟ್‌

ರಾಜಸ್ಥಾನದ ಉಪಮುಖ್ಯಮಂತ್ರಿಯಾಗಿರುವ ಸಚಿನ್‌ ಪೈಲಟ್‌, 2018ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ರಾಜಸ್ಥಾನ ಮುಖ್ಯಮಂತ್ರಿ ಹುದ್ದೆಗೂ ಅಭ್ಯರ್ಥಿಯಾಗಿದ್ದರು. ಕೊನೆಗೆ ರಾಹುಲ್‌ ಮನವೊಲಿಕೆ ಬಳಿಕ ಗೆಹ್ಲೋಟ್‌ ಮುಖ್ಯಮಂತ್ರಿಯಾಗಿದ್ದರು. 26ನೇ ವಯಸ್ಸಿಗೇ ಸಂಸತ್‌ ಪ್ರವೇಶಿಸಿ, ಯುಪಿಎ-2 ಅವಧಿಯಲ್ಲಿ ಕಂಪನಿ ವ್ಯವಹಾರಗಳ ಸಚಿವರಾಗಿದ್ದರು.

ಅತಿ ಚಿಕ್ಕವಯಸ್ಸಲ್ಲೇ ರಾಜಕೀಯ ಪ್ರವೇಶಿಸಿ ಅತ್ಯುನ್ನತ ಹುದ್ದೆಯಲ್ಲಿರುವ ವ್ಯಕ್ತಿ ಸಚಿನ್‌ ಪೈಲಟ್‌ ಮದುವೆಯಾಗಿದ್ದು, ಜಮ್ಮು ಕಾಶ್ಮೀರದ ಮುಸ್ಲಿಂ ಪ್ರಭಾವೀ ರಾಜಕಾರಣಿ ಹಾಗೂ ಮಾಜಿ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ ಮಗಳನ್ನು. ಅಲ್ಲದೆ ಸಚಿನ್‌ ಪೈಲಟ್‌ 2012ರಲ್ಲಿ ಕೇಂದ್ರ ಸಚಿವರಾಗಿದ್ದಾಗಲೇ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು.

ಯುವ ನಾಯಕ ಮತ್ತು ಯಾವುದೇ ಕಪ್ಪು ಚುಕ್ಕೆ ಇಲ್ಲದ ಕಾರಣ ಇವರ ಮೇಲೆ ಜನರಿಗೆ ಹೆಚ್ಚು ವಿಶ್ವಾಸ ಇದೆ. ಸಚಿನ್‌ ಪೈಲಟ್‌ಗೆ ಕಾಂಗ್ರೆಸ್‌ ಅಧ್ಯಕ್ಷ ಪಟ್ಟನೀಡುವ ಕುರಿತು ಆಂತರಿಕ ವಲಯದಲ್ಲಿ ಮಾತುಕತೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.

ಮಲ್ಲಿಕಾರ್ಜುನ ಖರ್ಗೆ

ಮಲ್ಲಿಕಾರ್ಜುನ ಖರ್ಗೆ ಕರ್ನಾಟಕದ ಕಾಂಗ್ರೆಸ್‌ ಹಿರಿಯ ನಾಯಕ. ಸೋಲಿಲ್ಲದ ಸರದಾರ ಎಂದೇ ಖ್ಯಾತಿಯಾಗಿದ್ದ ಖರ್ಗೆ ಅವರು 17ನೇ ಲೋಕಸಭೆಯಲ್ಲಿ ಸೋತು ಮೊದಲ ಬಾರಿಗೆ ಸೋಲಿನ ರುಚಿ ನೋಡಿದ್ದಾರೆ. ಅದರಾಚೆಗೆ ಖರ್ಗೆ ರೈಲ್ವೆ ಸಚಿವರಾಗಿದ್ದರು ಮತ್ತು ಕಾರ್ಮಿಕ ಮತ್ತು ಉದ್ಯೋಗ ಸಚಿವರಾಗಿದ್ದರು.

2009 ರಿಂದ ಸಂಸತ್ತಿನ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಸತತವಾಗಿ ಆಯ್ಕೆಯಾಗುತ್ತಾ ಬಂದಿದ್ದರು. ಕರ್ನಾಟಕದ ಹಿರಿಯ ದಲಿತ ರಾಜಕಾರಣಿ ಮತ್ತು 2014 ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವ ಮೊದಲು ಕರ್ನಾಟಕ ಶಾಸನಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿದ್ದರು. ಅದಕ್ಕೂ ಮುಂಚೆ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷರಾಗಿದ್ದರು.

ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧ ಲೋಕಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕನಾಗಿ ನಾಮನಿರ್ದೇಶನಗೊಂಡಿದ್ದರು. ಖರ್ಗೆ ಅವರು ಕಾಂಗ್ರೆಸ್‌ ಅಧ್ಯಕ್ಷ ಪಟ್ಟಕ್ಕೇರಿದರೆ ಕಾಂಗ್ರೆಸ್‌ ಕಳೆದುಕೊಂಡ ಅಹಿಂದ ಮತಗಳು ಮತ್ತೆ ಕ್ರೊಡೀಕರಣಗೊಳ್ಳಬಹುದು. ಅಲ್ಲದೆ ಖರ್ಗೆ ಅವರಿಗೆ ಅತ್ಯುನ್ನತ ಸ್ಥಾನಮಾನ ನೀಡುವ ಮೂಲಕ ದಕ್ಷಿಣ ಭಾರತದಲ್ಲಿ ಕಾಂಗ್ರೆಸ್‌ ಮತ್ತೆ ಪ್ರಬಲಗೊಳ್ಳಬಹುದು.

ಅಧೀರ್‌ ರಂಜನ್‌ ಚೌದರಿ

ಈ ಬಾರಿ ಪಶ್ಚಿಮ ಮುರ್ಷಿದಾಬಾದ್‌ ಜಿಲ್ಲೆಯಲ್ಲಿ ತೃಣಮೂಲ ಕಾಂಗ್ರೆಸ್‌ನ ಅಪುರಬಾ ಸರ್ಕಾರ್‌ ವಿರುದ್ಧ ಸ್ಪರ್ಧಿಸಿ 78,000 ಮತಗಳ ಅಂತರದಲ್ಲಿ ಗೆದ್ದ ಏಕೈಕ ಕಾಂಗ್ರೆಸ್‌ ಅಭ್ಯರ್ಥಿ ಅಧೀರ್‌ ರಂಜನ್‌ ಚೌದರಿ. ಅಂದರೆ ಬಂಗಾಳ ಮಮತಾ ಬ್ಯಾನರ್ಜಿ ನೆಲವಾಗಿದ್ದರೂ, ಮುರ್ಷಿದಾಬಾದ್‌ ಈಗಲೂ ಕಾಂಗ್ರೆಸ್‌ನ ಭದ್ರ ಕೋಟೆ.

ಮೋದಿ ಅಲೆಯ ವಿರುದ್ಧ ಮೇಲೇಳಲು ಕಾಂಗ್ರೆಸ್‌ ಕಸರತ್ತು ಪಡುತ್ತಿರುವಾಗ ಚೌದರಿ, ಬರಹಂಪುರ ಗೆದ್ದಿದ್ದು ಉತ್ತರ ಭಾರತದ ಕಾಂಗ್ರೆಸ್‌ ನಿಟ್ಟುಸಿರುವ ಬಿಡುವಂತೆ ಮಾಡಿತ್ತು. 2014ರಲ್ಲಿ ಚೌದರಿ ಟಿಎಂಸಿ ಸೆಲೆಬ್ರಿಟಿ ಅಭ್ಯರ್ಥಿ ಇಂದ್ರನಿಲ್‌ ಸೇನ್‌ ಅವರನ್ನೇ ಸೋಲಿಸಿದ್ದರು. ಕಾಂಗ್ರೆಸ್‌ ಸಬಲೀಕರಣಕ್ಕೆ ಮತ್ತು ಅದರ ಭವಿಷ್ಯಕ್ಕೆ ಇಂತ ಪ್ರಾದೇಶಿಕ ನಾಯಕರ ಅಗತ್ಯ ಇದೆ ಎಂದು ಹೇಳಲಾಗುತ್ತಿದೆ.

ಎ.ಕೆ ಆ್ಯಂಟನಿ

ಎ.ಕೆ ಆ್ಯಂಟನಿ ಕಾಂಗ್ರೆಸ್‌ನ ಹಿರಿಯ ನಾಯಕರು ಮತ್ತು ನೆಹರು-ಗಾಂಧಿ ಕುಟುಂಬದ ನಿಕಟವರ್ತಿಗಳು. ಸದ್ಯ ರಾಜ್ಯಸಭಾ ಸದಸ್ಯರಾಗಿರುವ ಎ.ಕೆ ಆ್ಯಂಟನಿ ಅತಿ ಹೆಚ್ಚು ಅವಧಿಯ ವರೆಗೆ ರಕ್ಷಣಾ ಸಚಿವರಾಗಿ ಕಾರ‍್ಯ ನಿರ್ವಹಿಸಿದವರು. ಅಲ್ಲದೆ ಕೇರಳದಲ್ಲಿ 3 ಬಾರಿ ಮುಖ್ಯಮಂತ್ರಿಯಾಗಿ ಕಾರ‍್ಯನಿರ್ವಹಿಸಿದ್ದಾರೆ.

ಜೊತೆಗೆ ಪಿ.ವಿ ನರಸಿಂಹರಾವ್‌ ಸರ್ಕಾರದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾಗಿಯೂ ಕಾರ‍್ಯನಿರ್ವಹಿಸಿದ್ದರು. ಆದರೆ ಇವರ ಸಚಿವಾಲಯ ಸಕ್ಕರೆ ಆಮದು ಹಗರಣ ಕೇಳಿಬಂದ ಹಿನ್ನೆಲೆಯಲ್ಲಿ 1994ರಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ವಿದ್ಯಾರ್ಥಿ ಜೀವನದಿಂದಲೇ ಕೇರಳ ವಿದ್ಯಾರ್ಥಿ ಸಂಘ ಸೇರಿ ಪ್ರತಿಭಟನೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಕೇರಳ ಪ್ರದೇಶ ಕಾಂಗ್ರೆಸ್‌ ಸಮಿತಿಯಲ್ಲೂ ಕೆಲಸ ಮಾಡಿರುವ ಆ್ಯಂಟನಿ, 1984ರಲ್ಲಿ ಎಐಸಿಸಿ ಕಾರ‍್ಯದರ್ಶಿಯಾಗಿಯೂ ಕಾರ‍್ಯನಿರ್ವಹಿಸಿದ್ದಾರೆ.

ರಾಹುಲ್‌ ನಾಯಕತ್ವದಲ್ಲಿ ಕಾಂಗ್ರೆಸ್‌

ಶತಮಾನದಷ್ಟುಹಳೆಯ ಪಕ್ಷದ ಚುಕ್ಕಾಣಿ ಹಿಡಿದ ನೆಹರು-ಗಾಂಧಿ ಕುಟುಂಬದ 5ನೇ ಕುಡಿ ರಾಹುಲ್‌ ಗಾಂಧಿ. ರಾಹುಲ್‌ ಅಧ್ಯಕ್ಷ ಪಟ್ಟಕ್ಕೇರುವಾಗ ಕೇವಲ ಗಾಂಧಿ ಕುಟುಂಬದವರು ಮಾತ್ರ ಕಾಂಗ್ರೆಸ್‌ ಚುಕ್ಕಾಣಿ ಹಿಡಿಯುತ್ತಾರೆ ಎಂಬ ಅಪವಾದವೂ ಕೇಳಿಬಂದಿತ್ತು.

ಆದಾಗ್ಯೂ ಒಲ್ಲದ ಮನಸ್ಸಿನಿಂದಲೇ ರಾಜಕೀಯ ಪ್ರವೇಶಿಸಿದ ‘ಯುವರಾಜ’ನಿಗೆ ಕಾಂಗ್ರೆಸ್‌ ಪಕ್ಷವನ್ನು ಮುನ್ನಡೆಸುವ ಹೊಣೆಯನ್ನು 2017ರ ಡಿಸೆಂಬರ್‌ನಲ್ಲಿ ನೀಡಲಾಗಿತ್ತು. ಲೋಕಸಭೆಗೆ 16 ತಿಂಗಳಷ್ಟೇ ಬಾಕಿ ಉಳಿದಿರುವಾಗ ರಾಹುಲ್‌ ಪಕ್ಷದ ಅಧ್ಯಕ್ಷ ಪಟ್ಟಕ್ಕೇರಿದ್ದರು. ಅದು ಅವರಿಗೆ ಸವಾಲಾಗಿ ಪರಿಣಮಿಸಿತ್ತು. ಅದಕ್ಕೂ ಮುನ್ನದ ನಡೆದ ಪಂಚರಾಜ್ಯಗಳ ಚುನಾವಣೆಯಲ್ಲಿ ರಾಹುಲ್‌ ನಾಯಕತ್ವದ ಪರೀಕ್ಷೆ ನಡೆದಿತ್ತು. ಆದರೆ ಅವುಗಳಲ್ಲಿ ರಾಹುಲ್‌ ಭಾಗಶಃ ಗೆದ್ದಿದ್ದರು.

ಕರ್ನಾಟಕದಲ್ಲಿ ಕಾಂಗ್ರೆಸ್‌ ಬಹುಮತ ಪಡೆದಿದ್ದರೂ ಜೆಡಿಎಸ್‌ ನೊಂದಿಗೆ ಮೈತ್ರಿ ಸಾಧಿಸಿ ಬಿಜೆಪಿ ಅಧಿಕಾರಕ್ಕೆ ಏರುವುದನ್ನು ತಡೆದಿದ್ದರು. ಅನಂತರ ಮಧ್ಯಪ್ರದೇಶ, ರಾಜಸ್ಥಾನ, ಮಿಜೋರಾಂ, ಛತ್ತೀಸ್‌ಗಢ ಮತ್ತು ತೆಲಂಗಾಣದಲ್ಲಿ ನಡೆದ ವಿಧಾನ ಸಭೆಯಲ್ಲಿ ಬಿಜೆಪಿ ಓಟಕ್ಕೆ ಕಾಂಗ್ರೆಸ್‌ ಬ್ರೇಕ್‌ಹಾಕಿತ್ತು.

ಅದು ರಾಹುಲ್‌ ನಾಯಕತ್ವಕ್ಕೆ ಬಲ ನೀಡಿತ್ತು. ಹೀಗಾಗಿ 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ನಿರೀಕ್ಷೆ ಹೆಚ್ಚಿತ್ತು. ಆದರೆ ಕಾಂಗ್ರೆಸ್‌ ಕೇವಲ 52 ಸೀಟಿಗೇ ತೃಪ್ತಿ ಪಡಬೇಕಾಯಿತು. ಇದು ರಾಹುಲ್‌ ಗಾಂಧಿಯನ್ನು ತೀವ್ರ ಮುಜುಗರಕ್ಕೀಡು ಮಾಡಿದೆ. ಈ ಪರಾಭವದಿಂದ ನೊಂದು ಅಧ್ಯಕ್ಷ ಪಟ್ಟ ತ್ಯಜಿಸುವುದಾಗಿ ಪಟ್ಟು ಹಿಡಿದಿದ್ದರು.