ಬೆಂಗ​ಳೂರು (ಡಿ.19): ಕಾಂಗ್ರೆಸ್‌ ಶಾಸ​ಕಾಂಗ ಪಕ್ಷದ ನಾಯಕ ಸಿದ್ದ​ರಾ​ಮಯ್ಯ ಅವರು ಡಿ. 22ರಂದು ಸಂಪುಟ ವಿಸ್ತ​ರಣೆ ನಡೆದೇ ನಡೆ​ಯ​ಲಿದೆ ಎಂದು ಖಚಿ​ತ​ವಾಗಿ ಹೇಳಿ​ರು​ವು​ದ​ರಿಂದ ರಾಜ್ಯ ರಾಜ​ಕೀಯ ವಲ​ಯ​ದಲ್ಲಿ ಸಂಪುಟ ಹೈಟೈನ್ಷನ್‌ ನಿರ್ಮಾ​ಣ​ವಾ​ಗಿದೆ. ಪರಿ​ಣಾಮ ಕಾಂಗ್ರೆ​ಸ್‌-ಜೆಡಿ​ಎ​ಸ್‌​ನಲ್ಲಿ ಸಂಪುಟ ಸೇರ್ಪ​ಡೆಗೆ ಲಾಬಿ ತೀವ್ರ​ಗೊಂಡಿದೆ. ಈ ಇಡೀ ಬೆಳ​ವ​ಣಿ​ಗೆ​ಯನ್ನು ಬಿಜೆಪಿ ಅತ್ಯಂತ ಸೂಕ್ಷ್ಮ​ವಾಗಿ ಗಮ​ನಿ​ಸು​ತ್ತಿದ್ದು, ಅತೃಪ್ತಿ ಸ್ಫೋಟಿಸಿ ಆಪ​ರೇ​ಷನ್‌ ಕಮ​ಲಕ್ಕೆ ಅವ​ಕಾಶ ದೊರೆ​ಯು​ವುದೇ ಎಂದು ಕಾದು ಕುಳಿ​ತಿ​ದೆ.

ರಾಜ್ಯ ಸಚಿವ ಸಂಪುಟ ವಿಸ್ತ​ರ​ಣೆಗೆ ಮಹೂರ್ತ ನಿಗ​ದಿ​ಯಾ​ಗಿದೆ. ಸಂಪುಟ ವಿಸ್ತ​ರಣೆಗೆ ಹೈಕ​ಮಾಂಡ್‌ ತಾತ್ವಿಕ ಒಪ್ಪಿಗೆ ನೀಡಿದ್ದು, ಡಿ.20ರಂದು ರಾಜ್ಯ ನಾಯ​ಕರು ಸಂಪುಟ ಸೇರ್ಪ​ಡೆ​ಯಾ​ಗ​ಲಿ​ರುವವರ ಪಟ್ಟಿಗೆ ಒಪ್ಪಿಗೆ ಪಡೆ​ಯಲು ಹೈಕ​ಮಾಂಡ್‌ ಭೇಟಿ ನಡೆ​ಸ​ಲಿ​ದ್ದಾರೆ.

ಒಪ್ಪಿಗೆ ಪಡೆದು ಡಿ.22ರಂದು ಸಂಪುಟ ವಿಸ್ತ​ರಣೆ ಖಚಿ​ತ​ವಾಗಿ ಮಾಡ​ಲಾ​ಗು​ವುದು ಎಂದು ಸಿದ್ದ​ರಾ​ಮಯ್ಯ ಖಚಿ​ತ​ವಾಗಿ ಹೇಳಿ​ದ್ದಾರೆ. ಹೀಗಾಗಿ ಕಾಂಗ್ರೆಸ್‌ ವಲ​ಯ​ದಲ್ಲಿ ಸಂಪುಟ ವಿಸ್ತ​ರಣೆ ಬಗ್ಗೆ ತುಂಬು ನಂಬಿಕೆ ಬಂದಿದ್ದು, ಚಟು​ವ​ಟಿ​ಕೆ​ಗಳು ಗರಿ​ಗೆ​ದ​ರಿವೆ. ಇಷ್ಟಾ​ಗಿಯೂ ಸಂಪುಟ ವಿಸ್ತ​ರಣೆ ಹಲವು ಬಾರಿ ಮುಂದೂ​ಡಿಕೆ ಕಂಡಿ​ರು​ವು​ದ​ರಿಂದ ಸಣ್ಣ ಅನು​ಮಾ​ನದ ಎಳೆ ಕಾಂಗ್ರೆಸ್‌ ವಲ​ಯ​ದಲ್ಲಿ ಇದ್ದೇ ಇದೆ.

ಮಂಗ​ಳ​ವಾರ ನಡೆದ ಕಾಂಗ್ರೆಸ್‌ ಶಾಸ​ಕಾಂಗ ಪಕ್ಷದ ಸಭೆ​ಯಲ್ಲಿ ಸಿದ್ದ​ರಾ​ಮಯ್ಯ ಅತ್ಯಂತ ಖಚಿತ ಧ್ವನಿ​ಯಲ್ಲಿ ಸಂಪುಟ ವಿಸ್ತ​ರಣೆ ನಡೆ​ಯ​ಲಿದೆ ಎಂದು ಭರ​ವಸೆ ನೀಡುವ ಮೂಲಕ ಶಾಸ​ಕ​ರ​ಲ್ಲಿದ್ದ ಅಸ​ಮಾ​ಧಾನ ಹಾಗೂ ಆಕ್ರೋಶ ಸ್ಫೋಟಿ​ಸ​ದಂತೆ ಯಶ​ಸ್ವಿ​ಯಾಗಿ ತಡೆ​ದರು. ಇದರ ಬೆನ್ನ ಹಿಂದೆಯೇ ಸಂಪುಟ ಸೇರ್ಪ​ಡೆಗೆ ಆಕಾಂಕ್ಷಿ​ಗಳು ದೊಡ್ಡ ಪ್ರಮಾ​ಣ​ದಲ್ಲಿ ಲಾಬಿ ಆರಂಭಿ​ಸಿ​ದ್ದಾರೆ. ಸದ್ಯ ಸಂಪು​ಟ​ದಲ್ಲಿ ಕಾಂಗ್ರೆಸ್‌ ಪಾಲಿನ ಆರು ಸ್ಥಾನ​ಗ​ಳನ್ನು ತುಂಬಿ​ಕೊ​ಳ್ಳಲು ಅವ​ಕಾ​ಶ​ವಿದೆ. ಆದರೆ, ಪ್ರಬಲ ಆಕಾಂಕ್ಷಿಗಳ ಸಂಖ್ಯೆ 15ಕ್ಕೂ ಹೆಚ್ಚಿ​ದೆ.

ಈ ಹಿನ್ನೆ​ಲೆ​ಯಲ್ಲಿ ಹಾಲಿ ಸಚಿ​ವರ ಪೈಕಿ ಕೆಲ​ವ​ರನ್ನು ಕೈ ಬಿಟ್ಟು ತಮಗೆ ಅವ​ಕಾಶ ನೀಡು​ವಂತೆಯೂ ಆಕಾಂಕ್ಷಿ​ಗಳು ರಾಜ್ಯ ನಾಯ​ಕತ್ವ ಹಾಗೂ ಹೈಕ​ಮಾಂಡನ್ನು ಒತ್ತಾಯ ಮಾಡಲು ಮುಂದಾ​ಗಿ​ದ್ದಾರೆ. ಈ ಬೆಳ​ವ​ಣಿಗೆ ಹಿನ್ನೆ​ಲೆ​ಯಲ್ಲಿ ಡಿ. 22ರಂದು ನಡೆ​ಯ​ಲಿ​ರು​ವುದು ಸಂಪುಟ ವಿಸ್ತ​ರ​ಣೆಯೋ ಅಥವಾ ಸಂಪುಟ ಪುನರ್‌ ರಚ​ನೆಯೋ ಎಂಬ ಪ್ರಶ್ನೆಯೂ ಹುಟ್ಟಿ​ಕೊಂಡಿದೆ.

ಇದಕ್ಕೆ ಉತ್ತ​ರಿ​ಸಿ​ರುವ ಕೆಪಿ​ಸಿಸಿ ಅಧ್ಯಕ್ಷ ದಿನೇಶ್‌ ಗುಂಡೂ​ರಾವ್‌ ಅವರು, ಸಂಪುಟ ವಿಸ್ತ​ರಣೆ ಮಾಡ​ಬೇಕೋ ಅಥವಾ ಪುನರ್‌ ರಚನೆ ಮಾಡ​ಬೇಕೋ ಎಂಬ ಬಗ್ಗೆ ಡಿ. 20ರಂದು ಹೈಕ​ಮಾಂಡ್‌ ಜತೆ ಚರ್ಚೆ ನಡೆ​ಸ​ಲಾ​ಗು​ವುದು. ಹೈಕ​ಮಾಂಡ್‌ ಈ ಕುರಿತು ಅಂತಿಮ ತೀರ್ಮಾನ ಕೈಗೊ​ಳ್ಳ​ಲಿದೆ ಎಂದು ಹೇಳು​ತ್ತಾ​ರೆ.

ಮೂಲ​ಗಳ ಪ್ರಕಾರ ಕೆಲ ಪ್ರಭಾವಿ ಸಚಿ​ವ​ರನ್ನು ಲೋಕ​ಸಭಾ ಚುನಾ​ವ​ಣೆಯಲ್ಲಿ ಕಣಕ್ಕೆ ಇಳಿ​ಸುವ ಇರಾದೆ ಪಕ್ಷಕ್ಕೆ ಇದೆ ಎನ್ನ​ಲಾ​ಗು​ತ್ತಿದೆ. ಆರ್‌.ವಿ.ದೇಶ​ಪಾಂಡೆ, ಕೃಷ್ಣ ಬೈರೇ​ಗೌಡ ಸೇರಿ​ದಂತೆ ಕೆಲ ಪ್ರಭಾವಿಗಳನ್ನು ಲೋಕ​ಸ​ಭೆಗೆ ಕಣಕ್ಕೆ ಇಳಿ​ಸುವ ಚಿಂತನೆ ಇದೆ ಎನ್ನ​ಲಾ​ಗು​ತ್ತಿದೆ. ಆದರೆ, ಸಚಿವ ಸ್ಥಾನ​ದಿಂದ ಅವ​ರನ್ನು ತೆಗೆ​ದು ಲೋಕ​ಸ​ಭೆ ಕಣಕ್ಕೆ ಇಳಿ​ಸು​ತ್ತಾರೋ ಅಥವಾ ಸಚಿವ ಸ್ಥಾನದಲ್ಲಿ​ದ್ದು​ಕೊಂಡೇ ಲೋಕ​ಸ​ಭೆಗೆ ಸ್ಪರ್ಧಿ​ಸು​ತ್ತಾರೋ ಎಂಬುದು ನಿರ್ಧಾ​ರ​ವಾ​ಗಿಲ್ಲ ಎನ್ನ​ಲಾ​ಗಿ​ದೆ. ಇವ​ರ​ಲ್ಲದೆ, ಸಚಿ​ವ​ರಾದ ಶಂಕರ್‌, ಜಯ​ಮಾಲಾ, ವೆಂಕ​ಟ​ರ​ಮ​ಣಪ್ಪ ಅವ​ರನ್ನು ಸಂಪು​ಟ​ದಿಂದ ಹೊರ​ಗಿ​ಡುವ ಬಗ್ಗೆಯೂ ಚಿಂತನೆ ನಡೆ​ದಿದೆ ಎನ್ನ​ಲಾ​ಗು​ತ್ತಿ​ದೆ.

ಪ್ರಬ​ಲ​ಗೊಂಡ ಲಾಬಿ:

ಸಚಿವ ಸಂಪುಟ ವಿಸ್ತ​ರಣೆ ಬಹು​ತೇಕ ಖಚಿತ ಎನ್ನುವ ಪರಿ​ಸ್ಥಿತಿಯಿರುವ ಹಿನ್ನೆ​ಲೆ​ಯಲ್ಲಿ ಕಾಂಗ್ರೆ​ಸ್‌​ನಲ್ಲಿ ಲಾಬಿ ತೀವ್ರ​ಗೊಂಡಿದೆ. ಉತ್ತರ ಕರ್ನಾ​ಟ​ಕಕ್ಕೆ ಅನ್ಯಾ​ಯ​ವಾ​ಗಿದೆ ಎಂಬ ಭಾವನೆ ತೀವ್ರ​ವಾ​ಗಿ​ರುವ ಹಿನ್ನೆ​ಲೆ​ಯಲ್ಲಿ ಈ ಬಾರಿ ಉತ್ತರ ಕರ್ನಾ​ಟ​ಕದ ಶಾಸ​ಕ​ರಿಗೆ ಅವ​ಕಾಶ ದೊರೆ​ಯುವ ಸಾಧ್ಯ​ತೆಯೂ ಇದೆ ಎನ್ನ​ಲಾ​ಗು​ತ್ತಿ​ದೆ.

ಮೂಲಗಳ ಪ್ರಕಾರ ಈ ಬಾರಿ ಲಿಂಗಾ​ಯತ, ಅಲ್ಪ​ಸಂಖ್ಯಾತ, ಕುರುಬ, ನಾಯಕ, ಅಲ್ಪ​ಸಂಖ್ಯಾತ ಮತ್ತು ಪರಿ​ಶಿಷ್ಟಎಡಗೈ ಸಮು​ದಾ​ಯ​ಗ​ಳಿಂದ ಸಚಿವ ಸ್ಥಾನಕ್ಕೆ ತೀವ್ರ ಒತ್ತ​ಡ​ವಿದೆ. ಇವ​ರ​ಲ್ಲದೆ, ಒಕ್ಕ​ಲಿ​ಗರು, ಇತರೆ ಹಿಂದು​ಳಿದ ವರ್ಗ​ಗಳ ನಾಯ​ಕರು ತೀವ್ರ ಪೈಪೋಟಿ ನಡೆ​ಸಿ​ದ್ದಾ​ರೆ.

ಕುರುಬ ಸಮು​ದಾ​ಯದಿಂದ ಉತ್ತರ ಕರ್ನಾ​ಟ​ಕಕ್ಕೆ ಪ್ರಾತಿ​ನಿಧ್ಯ ನೀಡ​ಬೇಕು ಎಂಬ ಮನಸ್ಸು ರಾಜ್ಯ ನಾಯ​ಕ​ರಿಗೆ ಇದೆ. ಹೀಗಾಗಿ ಸಿ.ಎಸ್‌. ಶಿವಳ್ಳಿ ಅವರ ಹೆಸರು ಪ್ರಬಲ ಪರಿ​ಗ​ಣ​ನೆ​ಯ​ಲ್ಲಿದೆ. ಆದರೆ, ಹೊಸ​ಕೋಟೆ ಶಾಸಕ ಎಂ.ಟಿ.ಬಿ. ನಾಗ​ರಾಜು ಶತ​ಪ್ರ​ಯತ್ನ ನಡೆ​ಸು​ತ್ತಿ​ರುವು​ದ​ರಿಂದ ಯಾರಿಗೆ ಸಚಿವ ಸ್ಥಾನ ನೀಡ​ಬೇಕು ಎಂಬುದು ಕಗ್ಗಂಟಾ​ಗಿ​ದೆ.

ಅಲ್ಪ​ಸಂಖ್ಯಾ​ತ​ರಿಂದ ರಹೀಂ ಖಾನ್‌​ ಹಾಗೂ ತನ್ವೀರ್‌ ಸೇಠ್‌ ಪೈಪೋಟಿ ನಡೆ​ಸು​ತ್ತಿ​ದ್ದಾರೆ. ಉತ್ತರ ಕರ್ನಾ​ಟ​ಕಕ್ಕೆ ಪ್ರಾತಿ​ನಿಧ್ಯ ದೊರೆ​ಯ​ಬೇ​ಕಿ​ರು​ವು​ದ​ರಿಂದ ರಹೀಂ ಖಾನ್‌ ಅವ​ರಿಗೆ ಅವ​ಕಾಶ ಹೆಚ್ಚಿದೆ ಎನ್ನ​ಲಾ​ಗು​ತ್ತಿ​ದೆ. ಈ ನಡುವೆ ಹಿರಿಯ ನಾಯಕ ರೋಷನ್‌ ಬೇಗ್‌ ಕೂಡ ಸಚಿವ ಸ್ಥಾನ​ಕ್ಕಾಗಿ ಪಟ್ಟು ಹಿಡಿ​ದಿ​ದ್ದಾರೆ ಎನ್ನ​ಲಾ​ಗಿದೆ. ವಾಸ್ತ​ವ​ವಾಗಿ ಅವರು ಲೋಕ​ಸಭೆ ಚುನಾ​ವ​ಣೆ​ಯಲ್ಲಿ ಬೆಂಗ​ಳೂರು ಕೇಂದ್ರ​ದಿಂದ ಸ್ಪರ್ಧಿ​ಸ​ಬ​ಯ​ಸಿ​ದ್ದಾರೆ. ಟಿಕೆಟ್‌ ನೀಡಿ​ದರೆ ಸಚಿವ ಸ್ಥಾನ ಬೇಕಿಲ್ಲ. ಇಲ್ಲ​ದಿ​ದ್ದರೆ, ಸಚಿವ ಸ್ಥಾನ ಬೇಕು ಎಂಬುದು ಅವರ ಹಟ ಎನ್ನ​ಲಾ​ಗಿದೆ.

ಲಿಂಗಾ​ಯ​ತ​ರಿಗೆ ಈ ಬಾರಿ ಎಷ್ಟುಸಚಿವ ಸ್ಥಾನ ನೀಡ​ಬೇಕು ಎಂಬ ಗೊಂದ​ಲ​ವಿದೆ. ರಾಜ್ಯ ನಾಯ​ಕರು ಒಂದು ಸ್ಥಾನ ನೀಡಿ​ದರೆ ಸಾಕು ಎಂಬ ಭಾವ​ನೆ ಹೊಂದಿ​ದ್ದರೆ ಸಮು​ದಾ​ಯ​ದಿಂದ ಎರಡು ಸ್ಥಾನಕ್ಕೆ ಪ್ರಬಲ ಲಾಬಿ​ಯಿದೆ. ಉತ್ತರ ಕರ್ನಾ​ಟ​ಕ​ದಿಂದ ಎಂ.ಬಿ. ಪಾಟೀಲ್‌, ಬಿ.ಸಿ. ಪಾಟೀಲ್‌ ಅವರ ಹೆಸರು ಪ್ರಬ​ಲ​ವಾಗಿ ಕೇಳಿ ಬರು​ತ್ತಿ​ದ್ದರೆ, ಮಧ್ಯ ಕರ್ನಾ​ಟ​ಕ​ದಿಂದ ಬಿ.ಕೆ. ಸಂಗ​ಮೇಶ್‌ ಹಾಗೂ ಶಾಮ​ನೂರು ಶಿವ​ಶಂಕ​ರಪ್ಪ ಅವರ ಪರ ಲಾಬಿಯೂ ಪ್ರಬ​ಲ​ವಾಗಿದೆ.

ಇನ್ನು ನಾಯಕ ಸಮು​ದಾಯ ಅದ​ರಲ್ಲೂ ಬಳ್ಳಾರಿ ಜಿಲ್ಲೆ​ಯನ್ನು ಪ್ರತಿ​ನಿ​ಧಿ​ಸುವ ನಾಯಕ ಜನಾಂಗ​ದ​ವ​ರಿಗೆ ಸಚಿವ ಸ್ಥಾನ ನೀಡ​ಬೇಕು ಎಂಬ ಒತ್ತ​ಡ​ವಿದೆ. ಹೀಗಾಗಿ ತುಕಾರಾಂ ಅವರ ಹೆಸರು ಪ್ರಬ​ಲ​ವಾಗಿ ಕೇಳಿ​ಬ​ರುತ್ತಿದೆ. ಇನ್ನು ಸತೀಶ್‌ ಜಾರ​ಕಿ​ಹೊಳಿ ಅವರು ನಾಯಕ ಸಮು​ದಾ​ಯದ ಕೋಟಾ​ದಿಂದ ಸಚಿವ ಸ್ಥಾನಕ್ಕೆ ಪ್ರಯತ್ನ ನಡೆ​ಸು​ತ್ತಿ​ದ್ದಾರೆ ಎಂದು ಹೇಳ​ಲಾ​ಗು​ತ್ತಿ​ದೆ.

ಪರಿ​ಶಿಷ್ಟಎಡಗೈ ಸಮು​ದಾ​ಯದಿಂದ ಆರ್‌.ಬಿ. ತಿಮ್ಮಾ​ಪುರ ಹಾಗೂ ರೂಪಾ ಶಶಿ​ಧರ್‌ ಪ್ರಯತ್ನ ನಡೆ​ಸು​ತ್ತಿ​ದ್ದಾರೆ. ಒಕ್ಕ​ಲಿಗ ಸಮು​ದಾಯ ತಮಗೂ ಪಾಲು ಬೇಕು ಎಂದು ಕೇಳು​ತ್ತಿದ್ದು ಡಾ.ಸುಧಾ​ಕರ್‌, ಎಸ್‌.ಟಿ. ಸೋಮ​ಶೇ​ಖರ್‌, ಎಂ. ಕೃಷ್ಣಪ್ಪ ಹಾಗೂ ರೆಡ್ಡಿ ಸಮು​ದಾ​ಯ​ದಿಂದ ರಾಮ​ಲಿಂಗಾ​ರೆಡ್ಡಿ ಅವರು ಪ್ರಯತ್ನ ನಡೆ​ಸಿ​ದ್ದಾ​ರೆ.

ಇತರೆ ಹಿಂದು​ಳಿದ ವರ್ಗ​ಗ​ಳಿಂದ ತಮಗೆ ಅವ​ಕಾಶ ಬೇಕು ಎಂದು ಮರಾಠ ಸಮು​ದಾ​ಯದ ಅಂಜಲಿ ನಿಂಬಾ​ಳ್ಕರ್‌ ಅವರು ಪ್ರಯತ್ನ ನಡೆ​ಸು​ತ್ತಿದ್ದು, ಅವರ ಪರ​ವಾಗಿ ಸಂಬಂಧಿಯೂ (ಚಿ​ಕ್ಕ​ಪ್ಪ​) ಆಗಿ​ರುವ ಮಹಾ​ರಾ​ಷ್ಟ್ರದ ಮಾಜಿ ಮುಖ್ಯ​ಮಂತ್ರಿ ಅಶೋಕ್‌ ಚವ್ಹಾಣ್‌ ಪ್ರಯತ್ನ ನಡೆ​ಸಿ​ದ್ದಾರೆ ಎನ್ನ​ಲಾ​ಗು​ತ್ತಿದೆ.

ಇವ​ರ​ಲ್ಲದೆ ರಘು​ಮೂರ್ತಿ, ನಾಗೇಂದ್ರ, ಆನಂದ್‌ ಸಿಂಗ್‌ ಮೊದ​ಲಾ​ದ​ವರು ಹೈಕ​ಮಾಂಡ್‌ ಮೂಲಕ ಸ್ಥಾನ ಗಿಟ್ಟಿ​ಸಲು ಯತ್ನ ನಡೆ​ಸಿ​ದ್ದಾರೆ ಎಂದು ಹೇಳ​ಲಾ​ಗು​ತ್ತಿ​ದೆ.