ಪ್ರತಿ ನಿತ್ಯ ಎರಡು ಗಂಟೆಗಳ ಕಾಲ ಎಮ್ಮೆಗಳ ಆರೈಕೆ ಮಾಡಿ, ಅವುಗಳನ್ನು ಸ್ವತಃ ರೇಶ್ಮಾ ಬಾವಿಮನೆಯೇ ಮೇಯಿಸಿಕೊಂಡು ಬಂದು ನಂತರ ಶಾಲೆಗೆ ಹೋಗುತ್ತಿದ್ದಳು.
ಧಾರವಾಡ(ಮೇ.13): ಬಡತನ ಸಾಧನೆಗೆ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಧಾರವಾಡ ತಾಲೂಕಿನ ಯಾದವಾಡ ಗ್ರಾಮದ ಬಾಲಕಿಯೊಬ್ಬಳು ಸಾಧಿಸಿ ತೋರಿಸಿದ್ದಾಳೆ.
ತಂದೆ ಹಾಗೂ ತಾಯಿ ಕೂಲಿಯ ಕೆಲಸ ಮಾಡಿದರೆ, ಮಗಳು ತಮ್ಮ ಮನೆಯಲ್ಲಿರುವ ಎರಡು ಎಮ್ಮೆಗಳ ಸಾಕಾಣೆ ಮಾಡುವ ಮೂಲಕ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ. 93.44 ಅಂಕ ಪಡೆದು ಇತರರಿಗೆ ಮಾದರಿಯಾಗಿದ್ದಾಳೆ. ಮಗಳ ಈ ಸಾಧನೆಗೆ ಪೋಷಕರು, ಗ್ರಾಮಸ್ಥರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರತಿ ನಿತ್ಯ ಎರಡು ಗಂಟೆಗಳ ಕಾಲ ಎಮ್ಮೆಗಳ ಆರೈಕೆ ಮಾಡಿ, ಅವುಗಳನ್ನು ಸ್ವತಃ ರೇಶ್ಮಾ ಬಾವಿಮನೆಯೇ ಮೇಯಿಸಿಕೊಂಡು ಬಂದು ನಂತರ ಶಾಲೆಗೆ ಹೋಗುತ್ತಿದ್ದಳು.
ಸಂಜೆ ಶಾಲೆಯಿಂದ ಬಂದನಂತರ ಮತ್ತೇ ಒಂದು ಗಂಟೆ ಕಾಲ ಎಮ್ಮೆಗಳ ಮೈ ದಡವಿ, ಮೇವು ಹಾಕಿ, ಸಗಣೆ ತೆಗೆದು ಪೋಷಿಸುತ್ತಿದ್ದಳು. ಬಳಿಕ ರಾತ್ರಿ ಹನ್ನೊಂದು ಗಂಟೆಯವರೆಗೆ ಓದುತ್ತಿದ್ದಳು. ಗ್ರಾಮಧ ಸರ್ಕಾರಿ ಪ್ರೌಢಶಾಲೆಯಲ್ಲಿ ಓದಿರುವ ರೇಶ್ಮಾ ಬಾವಿಮನಿ ಇದೀಗ ಎಸ್ಎಸ್ಎಲ್ಸಿಯಲ್ಲಿ ಶೇ. 93.44 ಅಂಕ ಪಡೆದಿರುವುದು ಹೆಮ್ಮೆ ಮೂಡಿಸಿದೆ. ಮುಂದೆ ಪಿಯುಸಿ ವಿಜ್ಞಾನ ಓದಿ ನರ್ಸ್ ಆಗುವ ಬಯಕೆ ಹೊಂದಿದ್ದಾಳೆ. ಮಗಳ ಈ ಸಾಧನೆಗೆ ತಂದೆ ಭಾಸ್ಕರ್ ಸಾಬ ಬಾವಿಮನಿ, ತಾಯಿ ಬಸೀರಾ ಬಾವಿಮನಿ ಸಂತಸ ವ್ಯಕ್ತಪಡಿಸಿದ್ದಾರೆ.
