Asianet Suvarna News

ಅಸೆಂಬ್ಲಿ ಉಪಸಮರ: ಇಂದು ಮತದಾನ

ಅಸೆಂಬ್ಲಿ ಉಪಸಮರಕ್ಕೆ ಇಂದು ಮತ| ಚಿಂಚೋಳಿ, ಕುಂದಗೋಳದಲ್ಲಿ ಬೆಳಿಗ್ಗೆ 7ರಿಂದ ಮತದಾನ| ಮೈತ್ರಿ ಸರ್ಕಾರ, ಬಿಜೆಪಿ ನಡುವೆ ಜಿದ್ದಾಜಿದ್ದಿ ಕದನ

Polling begins in Karnataka s two Assembly seats Chincholi and Kundgol
Author
Bangalore, First Published May 19, 2019, 8:29 AM IST
  • Facebook
  • Twitter
  • Whatsapp

ಬೆಂಗಳೂರು[ಮೇ.19]: ರಾಜ್ಯ ಕಾಂಗ್ರೆಸ್‌-ಜೆಡಿಎಸ್‌ ಮಿತ್ರಪಕ್ಷ ಮತ್ತು ಪ್ರತಿಪಕ್ಷ ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿರುವ ಕುಂದಗೋಳ ಮತ್ತು ಚಿಂಚೋಳಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಭಾನುವಾರ ಮತದಾನ ನಡೆಯಲಿದ್ದು, ಚುನಾವಣಾ ಆಯೋಗವು ಶಾಂತಿಯುತ ಮತದಾನ ನಡೆಸಲು ಸರ್ವಸನ್ನದ್ಧವಾಗಿದೆ.

ಚುನಾವಣಾ ಅಖಾಡದಲ್ಲಿ ಒಟ್ಟು 25 ಅಭ್ಯರ್ಥಿಗಳ ಹಣೆಬರಹವನ್ನು 3.83 ಲಕ್ಷ ಮತದಾರರು ಬರೆಯಲಿದ್ದಾರೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ಎಡಗೈನ ಮಧ್ಯದ ಬೆರಳಿಗೆ ಶಾಯಿ ಹಾಕಲಾಗುತ್ತದೆ. ಎರಡು ಕ್ಷೇತ್ರಗಳಲ್ಲಿ 455 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 85 ಮತಗಟ್ಟೆಗಳು ಸೂಕ್ಷ್ಮ ಮತಗಟ್ಟೆಗಳು ಎಂದು ಗುರುತಿಸಲಾಗಿದೆ. ಮತದಾನ ಸುಗಮವಾಗಿ ನಡೆಯಲು 8 ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಲಾಗಿದ್ದು, 22 ವೆಬ್‌ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. 46 ಸೂಕ್ಷ್ಮ ವೀಕ್ಷಕರನ್ನು ನೇಮಕ ಮಾಡಲಾಗಿದೆ ಹಾಗೂ ಆರು ವಿಡಿಯೋಗ್ರಾಫರ್‌ಗಳನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ

ಪೌರಾಡಳಿತ ಸಚಿವರಾಗಿದ್ದ ಸಿ.ಎಸ್‌.ಶಿವಳ್ಳಿ ನಿಧನದಿಂದ ಕುಂದಗೋಳ ವಿಧಾನಸಭಾ ಕ್ಷೇತ್ರ ತೆರವುಗೊಂಡಿದ್ದರೆ, ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಶಾಸಕ ಡಾ.ಉಮೇಶ್‌ ಜಾಧವ್‌ ಬಿಜೆಪಿ ಸೇರ್ಪಡೆಯಾಗಿದ್ದರಿಂದ ಚಿಂಚೋಳಿ ಕ್ಷೇತ್ರವು ತೆರವುಗೊಂಡಿದೆ. ಹೀಗಾಗಿ ಎರಡು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ.

ಚಿಂಚೋಳಿ ಕ್ಷೇತ್ರದಲ್ಲಿ 17 ಅಭ್ಯರ್ಥಿಗಳು ಮತ್ತು ಕುಂದಗೋಳ ಕ್ಷೇತ್ರದಲ್ಲಿ ಎಂಟು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಚಿಂಚೋಳಿ ಕ್ಷೇತ್ರದಲ್ಲಿ 1.93 ಲಕ್ಷ ಮತದಾರರಿದ್ದು, ಈ ಪೈಕಿ 99,047 ಪುರುಷರು, 94,806 ಮಹಿಳೆಯರು ಮತ್ತು 16 ಇತರರು ಇದ್ದಾರೆ. ಕುಂದಗೋಳ ಕ್ಷೇತ್ರದಲ್ಲಿ 1.89 ಲಕ್ಷ ಮತದಾರರಿದ್ದಾರೆ. 97,501 ಪುರುಷರು, 91,938 ಮಹಿಳೆಯರು, 5 ಇತರೆ ಮತದಾರರಿದ್ದಾರೆ. ಎರಡು ಕ್ಷೇತ್ರಗಳ 3.83 ಲಕ್ಷ ಮತದಾರರಲ್ಲಿ 7908 ಯುವಜನಾಂಗವು ಮೊದಲ ಬಾರಿಗೆ ಮತಚಲಾಯಿಸಲಿದೆ. 18-21 ವಯೋಮಾನದವರು 19887 ಮಂದಿ ಇದ್ದಾರೆ ಹಾಗೂ 19,887 ಅಂಗವಿಕಲ ಮತದಾರರಿದ್ದಾರೆ. ಅಲ್ಲದೇ, 138 ಸೇವಾ ಮತದಾರರಿದ್ದು, ಈ ಪೈಕಿ ಚಿಂಚೋಳಿ ಕ್ಷೇತ್ರದಲ್ಲಿ 79 ಮತ್ತು ಕುಂದಗೋಳ ಕ್ಷೇತ್ರದಲ್ಲಿ 56 ಸೇವಾ ಮತದಾರರಿದ್ದಾರೆ.

ಚುನಾವಣೆಗಾಗಿ 1068 ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ಇವರಲ್ಲಿ 4-9 ಮತದಾನ ಸಿಬ್ಬಂದಿ, 396 ಪೊಲೀಸ್‌, 121 ಸಾರಿಗೆ ಸಿಬ್ಬಂದಿ ಮತ್ತು 90 ಇತರೆ ಸಿಬ್ಬಂದಿಯನ್ನು ಚುನಾವಣಾ ಕಾರ್ಯಕ್ಕಾಗಿ ನಿಯೋಜಿಸಲಾಗಿದೆ. ಚಿಂಚೋಳಿ ಕ್ಷೇತ್ರದಲ್ಲಿ 214 ಮತ್ತು ಕುಂದಗೋಳ ಕ್ಷೇತ್ರದಲ್ಲಿ 241 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಕುಂದಗೋಳದಲ್ಲಿ 310 ಬ್ಯಾಲೆಟ್‌ ಯೂನಿಟ್‌, 280 ಕಂಟ್ರೋಲ್‌ ಯೂನಿಟ್‌, 300 ವಿವಿ ಪ್ಯಾಟ್‌ಗಳನ್ನು ಬಳಕೆ ಮಾಡಲಾಗುತ್ತಿದೆ. ಅಂತೆಯೇ ಚಿಂಚೋಳಿ ಕ್ಷೇತ್ರದಲ್ಲಿ 350 ಬ್ಯಾಲೆಟ್‌ ಯೂನಿಟ್‌, 314 ಕಂಟ್ರೋಲ್‌ ಯೂನಿಟ್‌ ಮತ್ತು 340 ವಿವಿ ಪ್ಯಾಟ್‌ಗಳನ್ನು ಬಳಸಲಾಗುವುದು. ಮತದಾರರು ಚುನಾವಣಾ ಆಯೋಗದ ಗುರುತಿನ ಚೀಟಿ ಇಲ್ಲದಿದ್ದರೂ 11 ದಾಖಲೆಗಳನ್ನು ತೋರಿಸಿ ಮತ ಚಲಾಯಿಸಬಹುದಾಗಿದೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.

Follow Us:
Download App:
  • android
  • ios