ಸಿ. ಕೆ. ಜಾಫರ್ ಷರೀಫ್, ಮಾಜಿ ಸಿಎಂ ಎಸ್. ನಿಜಲಿಂಗಪ್ಪ ಅವಧಿಯಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. ಕಾಂಗ್ರೆಸ್ ಇಬ್ಭಾಗವಾದಾಗ ಇಂದಿರಾ ಗಾಂಧಿ ಬಣ ಸೇರಿದ ಅವರು, ಇಂದಿರಾ ಗಾಂಧಿ ಆಪ್ತ ಬಣದಲ್ಲಿ ಗುರುತಿಸಿಕೊಂಡಿದ್ದರು. ಬಳಿಕ ಬೆಂಗಳೂರು ಉತ್ತರ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿದ್ದ ಷರೀಫ್ 1991ರಿಂದ 1995 ರವರೆಗೆ ದಿವಂಗತ ಪ್ರಧಾನಿ ಪಿ. ವಿ. ನರಸಿಂಹರಾವ್ ಸಂಪುಟದಲ್ಲಿ ರೈಲ್ವೇ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. 

ಬೆಂಗಳೂರು (ನ. 27): ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ರೈಲ್ವೇ ಸಚಿವ ಜಾಫರ್ ಷರೀಫ್ ಭಾನುವಾರ ಅಸು ನೀಗಿದ್ದಾರೆ. 

1933ರ ನವೆಂಬರ್ ನಲ್ಲಿ ಚಿತ್ರದುರ್ಗದ ಚಳ್ಳಕೆರೆಯಲ್ಲಿ ಜನಿಸಿದ್ದ ಸಿ. ಕೆ. ಜಾಫರ್ ಷರೀಫ್, ಮಾಜಿ ಸಿಎಂ ಎಸ್. ನಿಜಲಿಂಗಪ್ಪ ಅವಧಿಯಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. ಕಾಂಗ್ರೆಸ್ ಇಬ್ಭಾಗವಾದಾಗ ಇಂದಿರಾ ಗಾಂಧಿ ಬಣ ಸೇರಿದ ಅವರು, ಇಂದಿರಾ ಗಾಂಧಿ ಆಪ್ತ ಬಣದಲ್ಲಿ ಗುರುತಿಸಿಕೊಂಡಿದ್ದರು.

ಬಳಿಕ ಬೆಂಗಳೂರು ಉತ್ತರ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿದ್ದ ಷರೀಫ್ 1991ರಿಂದ 1995 ರವರೆಗೆ ದಿವಂಗತ ಪ್ರಧಾನಿ ಪಿ. ವಿ. ನರಸಿಂಹರಾವ್ ಸಂಪುಟದಲ್ಲಿ ರೈಲ್ವೇ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ರೈಲ್ವೇ ಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ರೈಲ್ವೇ ಗೇಜ್ ಪರಿವರ್ತನೆ ಹೆಗ್ಗಳಿಕೆ ಹಾಗೂ ಎಲ್ಲಾ ಬಗೆಯ ಗೇಜ್‌ಗಳನ್ನು ಬ್ರಾಡ್ ಗೇಜ್‌ಗೆ ಪರಿವರ್ತಿಸಿದ ಹೆಗ್ಗಳಿಕೆ ಜಾಫರ್ ಷರೀಫ್ ಅವರಿಗೆ ಸಲ್ಲುತ್ತದೆ.

ರೈಲ್ವೆ ಓಡಿಸಿದ ‘ಡ್ರೈವರ್ ಷರೀಫ್’

1969 ರಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಡ್ರೈವರ್ ಆಗಿ ಕೆಲಸಕ್ಕಿದ್ದ ಜಾಫರ್ ಷರೀಫ್ ತನ್ನ ರಾಜಕೀಯ ಗುರು ನಿಜಲಿಂಗಪ್ಪ ಕಾಂಗ್ರೆಸ್ ಪಕ್ಷವನ್ನು ಒಡೆಯುವ ಬಗ್ಗೆ ಮಾತನಾಡುತ್ತಿದ್ದುದನ್ನು ಕೇಳಿಸಿಕೊಂಡಿದ್ದರು. ಇದನ್ನು ಇಂದಿರಾ ಗಾಂಧಿ ಕಿವಿಗೆ ಮುಟ್ಟಿಸಿದ ಜಾಫರ್ ಷರೀಫ್‌ರ ಭವಿಷ್ಯವೇ ಬದಲಾಗಿಹೋಯಿತು. ಹಿಂದೆಲ್ಲಾ ಟ್ರೈನ್ ನಿಂದ ದಿಲ್ಲಿಗೆ ಬರಲು 5 ದಿನ ಹಿಡಿಯುತ್ತಂತೆ. ಇದನ್ನು ಅನುಭವಿಸಿದ್ದ ಷರೀಫ್ ರೈಲ್ವೆ ಮಂತ್ರಿಯಾದ ನಂತರ ಬೆಂಗಳೂರಿನಿಂದ ಮನ್ ಮಾಡ್‌ವರೆಗೆ ಬ್ರಾಡ್‌ಗೇಜ್ ಲೈನ್‌ಗೆ ಹಸಿರು ನಿಶಾನೆ ಕೊಟ್ಟರು.

ಅನಂತರ 36 ಗಂಟೆಗಳಲ್ಲಿ ದಿಲ್ಲಿ ತಲುಪುವುದು ಸಾಧ್ಯವಾಯಿತು. ಒಮ್ಮೆ ಪಾರ್ಲಿಮೆಂಟ್‌ನಲ್ಲಿ ಓಡಾಡುತ್ತಿದ್ದ ಜಾಫರ್ ಷರೀಫ್‌ಗೆ ಬೆಮೆಲ್ ಕಾರ್ಮಿಕರು ಸಿಕ್ಕಿ, ‘ಫ್ಯಾಕ್ಟರಿ ಬಂದಾಗುತ್ತಿದೆ ಸಾರ್’ ಎಂದು ಅಳತೊಡಗಿದಾಗ, ಸ್ಥಳದಲ್ಲಿಯೇ ಅಧಿಕಾರಿಗಳನ್ನು ಕರೆದು 300 ಗಾಲಿ ನಿರ್ಮಿಸುವ ಆರ್ಡರ್ ಕೊಡಿಸಿದರಂತೆ. ಷರೀಫ್‌ಗೂ ಮುಖ್ಯಮಂತ್ರಿ ಆಗಬೇಕೆಂದು ಆಸೆಯಿತ್ತು. ಆದರೆ ಮುಸ್ಲಿಂ ಆದ್ದರಿಂದ ಸಾಧ್ಯವಿಲ್ಲ ಎಂದು ಕೊರಗುತ್ತಿದ್ದರಂತೆ. ದೇವರಾಜ್ ಅರಸು, ಗುಂಡೂರಾವ್, ಎಸ್ ಎಂ ಕೃಷ್ಣ, ಕೊನೆಗೆ ಸಿದ್ದರಾಮಯ್ಯ ಜೊತೆ ಗುದ್ದಾಡಿಕೊಂಡಿದ್ದ ಷರೀಫ್ ಕೊನೆಗಾಲದಲ್ಲಿ ಮೊಮ್ಮಗನ ರಾಜಕೀಯಕ್ಕೋಸ್ಕರ ಗಾಂಧಿ ಕುಟುಂಬದ ಮೇಲೂ ಬೇಜಾರಾಗಿದ್ದರು. 

-ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್ ಕ್ಲಿಕ್ ಮಾಡಿ