ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯನ್ನು ಶಿವಸೇನೆ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡೇ ಎದುರಿಸಿತ್ತು. ಮತದಾರ ಬಹುಮತವನ್ನೂ ಕಲ್ಪಿಸಿದ್ದಾನೆ. ಆದರಿನ್ನೂ ಸರಕಾರ ರಚನೆಯಾಗಿಲ್ಲ. ಶಿವಸೇನೆ ಪಟ್ಟು ಬಿಡುತ್ತಿಲ್ಲ, ಬಿಜೆಪಿ ಒಪ್ಪಲು ಸಿದ್ಧವಿಲ್ಲ.

ಮುಂಬೈ (ಅ.30): ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಕೂಟ ಬಹುಮತ ಪಡೆದಿದ್ದರೂ, ಸದ್ಯಕ್ಕೆ ಅಧಿಕಾರಕ್ಕೆ ಬರುವ ಲಕ್ಷಣಗಳು ಕಂಡುಬರುತ್ತಿಲ್ಲ. ಸಮಾನ ಅಧಿಕಾರ ಹಂಚಿಕೆ ಸಂಬಂಧ ಉಭಯ ಪಕ್ಷಗಳ ನಡುವೆ ಏರ್ಪಟ್ಟಿರುವ ಜಟಾಪಟಿ ಮಂಗಳವಾರ ಮತ್ತಷ್ಟುತೀವ್ರಗೊಂಡಿದೆ. ಅಧಿಕಾರ ಹಂಚಿಕೆ ಕುರಿತಾದ ಮಾತುಕತೆಗಳು ಕೊನೇ ಕ್ಷಣದಲ್ಲಿ ರದ್ದಾಗಿವೆ.

‘ಶಿವಸೇನೆಗೆ 2.5 ವರ್ಷ ಸಿಎಂ ಹುದ್ದೆ ಹಂಚಿಕೊಳ್ಳುವ ಬಗ್ಗೆ ಯಾವುದೇ ಭರವಸೆಯನ್ನೇ ನಾವು ಕೊಟ್ಟಿಲ್ಲ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ನನಗೆ ಹೇಳಿದ್ದಾರೆ. ನಾನೇ 5 ವರ್ಷದ ಅವಧಿಗೆ ಸಿಎಂ ಆಗಿರುವೆ’ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಮಂಗಳವಾರ ಬೆಳಗ್ಗೆ ಖಡಕ್‌ ಮಾತುಗಳನ್ನು ಆಡಿದ್ದಾರೆ. ಇದರ ಬೆನ್ನಲ್ಲೇ, ಮಂಗಳವಾರ ಸಂಜೆ 4 ಗಂಟೆಗೆ ಶಿವಸೇನೆ ಅಧ್ಯಕ್ಷ ಉದ್ಧವ್‌ ಠಾಕ್ರೆ, ಫಡ್ನವೀಸ್‌, ಕೇಂದ್ರ ಸಚಿವ ಪ್ರಕಾಶ ಜಾವಡೇಕರ್‌ ಅವರ ನಡುವೆ ನಡೆಯಬೇಕಿದ್ದ ಅಧಿಕಾರ ಹಂಚಿಕೆ ಮಾತುಕತೆಯನ್ನು ಶಿವಸೇನೆ ರದ್ದುಗೊಳಿಸಿದೆ. ಆದರೆ ನವೆಂಬರ್‌ 1ರಂದು ಮುಂಬೈಗೆ ಅಮಿತ್‌ ಶಾ ಆಗಮಿಸುವ ನಿರೀಕ್ಷೆಯಿದ್ದು, ಅಂದು ಅಧಿಕಾರ ಹಂಚಿಕೆ ತೀರ್ಮಾನವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಇನ್ನು ‘ಶಿವಸೇನೆಯ 45 ಶಾಸಕರು ಫಡ್ನವೀಸ್‌ ಅವರೇ ಮುಖ್ಯಮಂತ್ರಿಯಾಗುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಅವರಿಗೆ ವಿಪಕ್ಷದಲ್ಲಿ ಕೂಡಲು ಇಷ್ಟವಿಲ್ಲ. ಅವರು ಠಾಕ್ರೆ ಅವರನ್ನು ಮನವೊಲಿಸುವ ವಿಶ್ವಾಸವಿದೆ’ ಎಂದು ಬಿಜೆಪಿ ಸಂಸದ ಸಂಜಯ ಕಾಕಡೆ ಹೇಳಿದ್ದಾರೆ. ಫಡ್ನವೀಸ್‌ ಹಾಗೂ ಕಾಕಡೆ ಅವರ ಮಾತುಗಳು ಶಿವಸೇನೆ ಇಬ್ಭಾಗವಾಗಿ, ಕೆಲವು ಶಾಸಕರು ಬಿಜೆಪಿ ಸೇರಲಿದ್ದಾರೆ ಎಂಬ ಸಂದೇಹವನ್ನು ಸೃಷ್ಟಿಸಿವೆ.

ಇದಕ್ಕೆ ತಿರುಗೇಟು ನೀಡಿರುವ ಶಿವಸೇನೆ ಸಂಸದ ಹಾಗೂ ಪಕ್ಷದ ಮುಖವಾಣಿ ‘ಸಾಮ್ನಾ’ ಸಂಪಾದಕ ಸಂಜಯ ರಾವುತ್‌, ‘ಬಹುಮತಕ್ಕೆ ಅಗತ್ಯವಾದ 145 ಶಾಸಕರ ಬೆಂಬಲವಿದ್ದರೆ ಫಡ್ನವೀಸ್‌ ಅವರೇ ಸರ್ಕಾರ ರಚಿಸಿಕೊಳ್ಳಲಿ. ನಾವು ಇಲ್ಲಿ ಧರ್ಮ ಹಾಗೂ ಸತ್ಯದ ರಾಜಕೀಯ ನಡೆದಿದೆ. ನಾವು ಅಧಿಕಾರಕ್ಕಾಗಿ ಹಪಹಪಿಸುತ್ತಿಲ್ಲ’ ಎಂದಿದ್ದಾರೆ.

ಇದಲ್ಲದೆ, ಕಳೆದ ಫೆಬ್ರವರಿ 18ರಂದು ಫಡ್ನವೀಸ್‌ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ ವೀಡಿಯೋವನ್ನು ಶಿವಸೇನೆ ಬಿಡುಗಡೆ ಮಾಡಿದೆ. ಇದರಲ್ಲಿ ಫಡ್ನವೀಸ್‌ ಅವರು, ‘ಬಿಜೆಪಿ-ಶಿವಸೇನೆ ಕೂಟ ಮತ್ತೆ ಅಧಿಕಾರಕ್ಕೆ ಬಂದರೆ ಸಮಾನ ಅಧಿಕಾರ ಹಂಚಿಕೆಯಾಗಲಿದೆ’ ಎಂದು ಹೇಳಿರುವುದು ಕಂಡುಬರುತ್ತದೆ. ಇದನ್ನು ‘ಜರಾ ಯಾದ್‌ ಕರೋ ಜಬಾನಿ’ (ಆಡಿದ ಮಾತುಗಳನ್ನು ನೆನಪಿಸಿಕೊಳ್ಳಿ) ಎಂಬ ತಲೆಬರಹದಲ್ಲಿ ಶಿವಸೇನೆಯು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಿದ್ದು, ಫಡ್ನವೀಸ್‌ ಅವರಿಗೆ ಟಾಂಗ್‌ ನೀಡಿದೆ.

ಫಡ್ನವೀಸ್‌ ಗರಂ:

ಮಂಗಳವಾರ ಬೆಳಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಫಡ್ನವೀಸ್‌, ಶಿವಸೇನೆಯ ಮೇಲೆ ಕಿಡಿಕಾರಿದರು. ‘ಶಿವಸೇನೆಯ ಮುಖವಾಣಿ ಸಾಮ್ನಾ ಪತ್ರಿಕೆಯು ಬಿಜೆಪಿಯನ್ನು ಗುರಿಯಾಗಿಸಿಕೊಂಡು ಟೀಕಿಸುತ್ತಿದೆ. ಇದರಿಂದ ಮಾತುಕತೆ ಪ್ರಕ್ರಿಯೆಗಳು ಹಳಿತಪ್ಪುತ್ತಿವೆ’ ಎಂದು ಆರೋಪಿಸಿದರು.

ಹಂಚಿಕೆ ಪಟ್ಟು ಬಿಡದ ಶಿವಸೇನೆ

‘ಎರಡೂವರೆ ವರ್ಷ ಸಿಎಂ ಹುದ್ದೆಯ ಅಧಿಕಾರ ಹಂಚಿಕೆ ಸಂಬಂಧ ಶಿವಸೇನೆಗೆ ಯಾವುದೇ ಭರವಸೆಯನ್ನು ನಾನು ನೀಡಿರಲಿಲ್ಲ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ನನಗೆ ಖಚಿತಪಡಿಸಿದ್ದಾರೆ’ ಎಂದು ಫಡ್ನವೀಸ್‌ ಸ್ಪಷ್ಟಪಡಿಸಿದರು. ಈ ಮೂಲಕ 2.5 ವರ್ಷ ಅಧಿಕಾರ ಹಂಚಿಕೆ ಸಂಬಂಧ ಶಾ ಸಮ್ಮುಖದಲ್ಲಿ ಒಪ್ಪಂದವಾಗಿತ್ತು ಎಂದಿದ್ದ ಉದ್ಧವ್‌ ಠಾಕ್ರೆಗೆ ಅವರು ತಿರುಗೇಟು ನೀಡಿದರು.

‘ಬಿಜೆಪಿ ನೇತೃತ್ವದ ಸರ್ಕಾರವೇ 5 ವರ್ಷಗಳ ಅಧಿಕಾರಾವಧಿ ಪೂರೈಸಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಒಟ್ಟಾಗಿಯೇ ನಾವು ಸರ್ಕಾರ ರಚಿಸಲಿದ್ದೇವೆ. ಸಮಂಜಸ ಬೇಡಿಕೆಗಳನ್ನು ನಾವು ಪರಿಗಣಿಸುತ್ತೇವೆ. ನಮ್ಮಲ್ಲಿ ‘ಪ್ಲ್ಯಾನ್‌-ಬಿ’ ಎಂಬುದು ಇಲ್ಲ. ಇರುವುದು ‘ಪ್ಲ್ಯಾನ್‌-ಎ’ ಮಾತ್ರ. ಇದು ಯಶಸ್ವಿಯಾಗಲಿದೆ’ ಎಂದರು.

‘ಸಿಎಂ ಯಾರಾಗುತ್ತಾರೆ’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ನಿಮಗೇನಾದರೂ ಅನಮಾನವಿದೆಯಾ? ಅದು ಈಗಾಗಲೇ ನಿರ್ಧಾರವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರೇ ಹೆಸರು ಘೋಷಣೆ ಮಾಡಿದ್ದಾರೆ. ಕೇವಲ ಔಪಚಾರಿಕತೆಯಷ್ಟೇ ಬಾಕಿ ಇದೆ’ ಎಂದು ಹೇಳಿದರು. ಮೋದಿ ಅವರು ‘ಫಡ್ನವೀಸ್‌ ಸಿಎಂ ಆಗಲಿದ್ದಾರೆ’ ಎಂದು ಚುನಾವಣಾ ಫಲಿತಾಂಶ ಪ್ರಕಟವಾಗುವ ದಿನ ಹೇಳಿದ್ದರು.

‘ಡಿಸಿಎಂ ಯಾರಾಗಲಿದ್ದಾರೆ?’ ಎಂಬ ಪ್ರಶ್ನೆಗೆ ‘ಸೂಕ್ತ ಸಮಯದಲ್ಲಿ ನಿರ್ಧರಿಸಲಾಗುತ್ತದೆ’ ಎಂದ ಫಡ್ನವೀಸ್‌, ‘ಯಾವಾಗ ಸರ್ಕಾರ ರಚನೆ ಆಗಲಿದೆ?’ ‘50:50 ಸೂತ್ರದಲ್ಲಿ ಏನಿದೆ?’ ಎಂಬ ಪ್ರಶ್ನೆಗೆ ‘ಶೀಘ್ರ ನಿಮಗೆ ಈ ಬಗ್ಗೆ ತಿಳಿಯಲಿದೆ’ ಎಂಬ ಒಂದೇ ಉತ್ತರವನ್ನು ನೀಡಿದರು.

45 ಶಾಸಕರಿಗೂ ಫಡ್ನಾವೀಸ್ ಸಿಎಂ ಆಗಬೇಕು

ಫಡ್ನವೀಸ್‌ ಹೇಳಿದ್ದು....

ಶಿವಸೇನೆಗೆ 2.5 ವರ್ಷ ಸಿಎಂ ಹುದ್ದೆ ಹಂಚಿಕೊಳ್ಳುವ ಬಗ್ಗೆ ಯಾವುದೇ ಭರವಸೆಯನ್ನೇ ನಾವು ಕೊಟ್ಟಿಲ್ಲ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ನನಗೆ ಹೇಳಿದ್ದಾರೆ. ನಾನೇ 5 ವರ್ಷದ ಅವಧಿಗೆ ಸಿಎಂ ಆಗಿರುವೆ.

ಶಿವಸೇನೆ ಟಾಂಗ್‌

ಫೆಬ್ರವರಿ 18ರಂದು ಫಡ್ನವೀಸ್‌ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ಬಿಜೆಪಿ-ಶಿವಸೇನೆ ಕೂಟ ಮತ್ತೆ ಅಧಿಕಾರಕ್ಕೆ ಬಂದರೆ ಸಮಾನ ಅಧಿಕಾರ ಹಂಚಿಕೆಯಾಗಲಿದೆ’ ಎಂದಿದ್ದರು. ಜರಾ ಯಾದ್‌ ಕರೋ ಜಬಾನಿ ಎಂದು ಶಿವಸೇನೆ ತಿರುಗೇಟು