ಠಾಣೆಗಳಲ್ಲಿ ಎಫ್‌'ಐಆರ್ ದಾಖಲಿಸಿಕೊಳ್ಳದೇ ಇರುವುದನ್ನು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಬೇಕು. ಇಂಥ ಪ್ರಕರಣಗಳಲ್ಲಿ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಕಾನೂನು ರೂಪಿಸಬೇಕು ಎಂದು ಸ್ಥಾಯಿ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ನವದೆಹಲಿ(ಫೆ.12): ಜನಸಾಮಾನ್ಯರು ಪೊಲೀಸ್ ಠಾಣೆಗಳಿಗೆ ತೆರಳಿ ದೂರು ನೀಡಲು ಹೋದರೆ ಪೊಲೀಸರು ಎಫ್'ಐಆರ್ ದಾಖಲಿಸಿಕೊಳ್ಳುವುದಿಲ್ಲ ಎಂಬ ಆರೋಪವನ್ನು ಗಂಭೀರವಾಗಿ ಪರಿಗಣಿಸಿರುವ ಸಂಸದೀಯ ಸ್ಥಾಯಿ ಸಮಿತಿಯೊಂದು, ಎಫ್'ಐಆರ್ ದಾಖಲಿಸಿಕೊಳ್ಳದೇ ಇರುವುದು ಅಥವಾ ನಿರಾಕರಿಸುವುದನ್ನು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಿ, ಅಂಥ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತಹ ಕಾನೂನು ರೂಪಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ.
2015ರಲ್ಲೇ ಇಂಥದ್ದೊಂದು ಸಲಹೆ ನೀಡಲಾಗಿತ್ತಾದರೂ, ಎಲ್ಲಾ ಠಾಣೆಗಳಲ್ಲೂ ಎಫ್'ಐಆರ್ ದಾಖಲಿಸಿಕೊಳ್ಳುವುದನ್ನು ಖಾತರಿಗೊಳಿಸಿ ಎಂದು ರಾಜ್ಯಗಳಿಗೆ ಸಲಹೆ ನೀಡಿ ಕೇಂದ್ರ ಸರ್ಕಾರ ಕೈತೊಳೆದುಕೊಂಡಿದೆ. ಇದರಿಂದ ಯಾವುದೇ ಪ್ರಯೋಜನ ಆಗಿಲ್ಲ ಎಂದು ಪಿ.ಚಿದಂಬರಂ ಅಧ್ಯಕ್ಷತೆಯ ಕೇಂದ್ರ ಗೃಹ ಸಚಿವಾಲಯಗಳ ಕುರಿತಾದ ಸಂಸದೀಯ ಸ್ಥಾಯಿ ಸಮಿತಿ, ಸರ್ಕಾರದ ಧೋರಣೆಯನ್ನು ತರಾಟೆಗೆ ತೆಗೆದುಕೊಂಡಿದೆ.
‘ನಮ್ಮ ಈ ಹಿಂದಿನ ಸಲಹೆಗೆ ದೇಶದ ಎಲ್ಲಾ 12,519 ಪೊಲೀಸ್ ಠಾಣೆಗಳಲ್ಲೂ ಶೇ.100ರಷ್ಟು ಪ್ರಮಾಣದಲ್ಲಿ ಎಫ್'ಐಆರ್ ದಾಖಲು ಮಾಡಲಾಗುತ್ತಿದೆ ಎಂದು ನೀವು ಮಾಹಿತಿ ನೀಡಿದ್ದೀರಿ. ಇಂಥ ಮಾಹಿತಿ ನೀಡಲು ಯಾವ ದಾಖಲೆ ಬಳಸಿಕೊಂಡಿದ್ದೀರಿ ಎಂಬುದನ್ನು ತೋರಿಸಿ’ ಎಂದು ಸ್ಥಾಯಿ ಸಮಿತಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಸರ್ಕಾರದ ಇಂಥ ಧೋರಣೆಯಿಂದಾಗಿ ಈಗಲೂ ಜನಸಾಮಾನ್ಯರು ಠಾಣೆಯಲ್ಲಿ ನ್ಯಾಯಾಕ್ಕಾಗಿ ಅಲೆಯುವಂತಾಗಿದೆ. ಹೀಗಾಗಿ ಠಾಣೆಗಳಲ್ಲಿ ಎಫ್'ಐಆರ್ ದಾಖಲಿಸಿಕೊಳ್ಳದೇ ಇರುವುದನ್ನು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಬೇಕು. ಇಂಥ ಪ್ರಕರಣಗಳಲ್ಲಿ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಕಾನೂನು ರೂಪಿಸಬೇಕು ಎಂದು ಸ್ಥಾಯಿ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.
