ಮಗುವನ್ನು ಪಕ್ಕದಲ್ಲಿರಿಸಿ ಕರ್ತವ್ಯ ನಿರ್ವಹಿಸಿದ ಮಹಿಳಾ ಅಧಿಕಾರಿ! ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಮಹಿಳಾ ಅಧಿಕಾರಿಯ ತಾಯಿ ಪ್ರೇಮ! ಟ್ವಿಟ್ಟರ್‌ನಲ್ಲಿ ಫೋಟೋ ಶೇರ್ ಮಾಡಿದ ಉತ್ತರಪ್ರದೇಶ ಪೊಲೀಸ್ ಮುಖ್ಯಸ್ಥ! ಮಗುವಿಗೆ ಹಾಲುಣಿಸಿ ಕರ್ತವ್ಯಕ್ಕೆ ಹಾಜರಾದ ಮಹಿಳಾ ಅಧಿಕಾರಿ
ಲಕ್ನೋ(ಅ.28): ಪೊಲೀಸರು, ಯೋಧರು ಇತ್ಯಾದಿ ಸೇವೆಯಲ್ಲಿರುವವರಿಗೆ ತಮ್ಮ ವೈಯಕ್ತಿಕ ಕೆಲಸ ಕಾರ್ಯಗಳಿಗಿಂತ ಜನರ ರಕ್ಷಣೆ, ದೇಶ ಸೇವೆ ಮುಖ್ಯವಾಗುತ್ತದೆ. ಹಾಗೆಂದು ಈ ವೃತ್ತಿಗಳಲ್ಲಿರುವ ಮಹಿಳೆಯರಿಗೆ ಖಾಸಗಿ ಬದುಕನ್ನು ಕೂಡ ನೋಡಿಕೊಳ್ಳಬೇಕಾಗುತ್ತದೆ. ಗಂಡ, ಮನೆ, ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ಕೂಡ ಇರುತ್ತದೆ.
ಉತ್ತರ ಪ್ರದೇಶ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಕರ್ತವ್ಯದ ವೇಳೆ ತಮ್ಮ ಮಗುವನ್ನು ಪಕ್ಕದಲ್ಲಿ ಮಲಗಿಸಿಕೊಂಡಿರುವ ದೃಶ್ಯ ಜನರ ಮನಸ್ಸನ್ನು ಗೆದ್ದಿದೆ. ಮಹಿಳೆಯರು ಒಟ್ಟೊಟ್ಟಿಗೆ ಎರಡು ಕೆಲಸಗಳನ್ನು ನಿಭಾಯಿಸಲು ಸಮರ್ಥರು ಎಂಬುದನ್ನು ಈ ಫೋಟೋ ಸಾಬೀತುಪಡಿಸುತ್ತದೆ.
ಉತ್ತರ ಪ್ರದೇಶದ ಇನ್ಸ್ ಪೆಕ್ಟರ್ ಜನರಲ್ ನವನೀತ್ ಸೆಕೆರಾ ಮಹಿಳಾ ಪೊಲೀಸರೊಬ್ಬರ ಫೋಟೋವನ್ನು ಶೇರ್ ಮಾಡಿದ್ದಾರೆ. ತಮ್ಮ ಕೆಲಸದ ಸ್ಥಳಕ್ಕೆ ಒಂದು ವರ್ಷಕ್ಕಿಂತ ಚಿಕ್ಕ ಮಗುವನ್ನು ಕರೆದುಕೊಂಡು ಬಂದು ಹಾಲುಣಿಸಿ ಮಲಗಿಸಿದ್ದು ಅದರ ಫೋಟೋ ತೆಗೆದು ನವನೀತ್ ಅವರು, 'ಅದ್ಭುತ. ಇದಕ್ಕೆ ಯಾವುದೇ ಶೀರ್ಷಿಕೆಯ ಅಗತ್ಯವಿಲ್ಲ ಎಂದು ಬರೆದುಕೊಂಡಿದ್ದಾರೆ.
ತಮ್ಮ ವೃತ್ತಿ ಮತ್ತು ಖಾಸಗಿ ಬದುಕು, ತಾಯಿಯ ಕರ್ತವ್ಯವನ್ನು ಮಹಿಳೆಯೊಬ್ಬಳು ಹೇಗೆ ನಿಭಾಯಿಸುತ್ತಾಳೆ ಎಂಬುದನ್ನು ಈ ಫೋಟೋ ಸಾರುತ್ತದೆ.
ಇತ್ತೀಚೆಗೆ ಮೆಹಬೂಬ್ ನಗರ ಮತ್ತು ಹೈದರಾಬಾದ್ ನಲ್ಲಿ ತಮ್ಮ ಪುಟ್ಟ ಕಂದಮ್ಮಗಳನ್ನು ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಬಂದು ಪರೀಕ್ಷೆ ಬರೆದ ಮಹಿಳೆಯರನ್ನು ತೆಲಂಗಾಣ ಪೊಲೀಸರು ಈ ರೀತಿ ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೋ ಹಾಕಿ ಶ್ಲಾಘಿಸಿದ್ದು ಸುದ್ದಿಯಾಗಿತ್ತು.
