ಶಂಕಿತ ಆರೋಪಿ ನವೀನ್ ಕುಮಾರ್‌'ನನ್ನು ಸೋಮವಾರ ಘಟನಾ ಸ್ಥಳಕ್ಕೆ ಕರೆದೊಯ್ದು ಹತ್ಯೆ ಸನ್ನಿವೇಶವನ್ನು ಮರು ಸೃಷ್ಟಿಸಲಾಯಿತು. ಈ ವೇಳೆ ಗೌರಿ ಲಂಕೇಶ್ ಅವರ ಹತ್ಯೆಗೆ ಹಂತಕರು ಅಡ್ಡ ಮಾರ್ಗದಲ್ಲಿ ಬಂದಿದ್ದ ವಿಷಯ ಗೊತ್ತಾಯಿತು. ವಿಶೇಷ ಅಂದರೆ ಈ ಮಾರ್ಗದಲ್ಲಿ ಸಿಸಿಟಿವಿ ಕ್ಯಾಮೆರಾಗಳೇ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು(ಮಾ.07): ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಕೊಲೆಗೆ ಕರಾರುವಾಕ್ಕಾಗಿ ಸಂಚು ರೂಪಿಸಿದ್ದ ಆರೋಪಿಗಳು, ಹತ್ಯೆ ನಡೆದ ದಿನ ಗೌರಿ ಅವರ ಮನೆಗೆ ಮೈಸೂರು ರಸ್ತೆಯಲ್ಲಿ ಸಾಗದೆ ಅಡ್ಡದಾರಿ ಮೂಲಕ ಬಂದಿದ್ದರು ಎಂಬ ಮಹತ್ವದ ಮಾಹಿತಿ ಎಸ್'ಐಟಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಶಂಕಿತ ಆರೋಪಿ ನವೀನ್ ಕುಮಾರ್'ನನ್ನು ಸೋಮವಾರ ಘಟನಾ ಸ್ಥಳಕ್ಕೆ ಕರೆದೊಯ್ದು ಹತ್ಯೆ ಸನ್ನಿವೇಶವನ್ನು ಮರು ಸೃಷ್ಟಿಸಲಾಯಿತು. ಈ ವೇಳೆ ಗೌರಿ ಲಂಕೇಶ್ ಅವರ ಹತ್ಯೆಗೆ ಹಂತಕರು ಅಡ್ಡ ಮಾರ್ಗದಲ್ಲಿ ಬಂದಿದ್ದ ವಿಷಯ ಗೊತ್ತಾಯಿತು. ವಿಶೇಷ ಅಂದರೆ ಈ ಮಾರ್ಗದಲ್ಲಿ ಸಿಸಿಟಿವಿ ಕ್ಯಾಮೆರಾಗಳೇ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಗೌರಿ ಅವರು ನೆಲೆಸಿದ್ದ ರಾಜರಾಜೇಶ್ವರಿ ನಗರದ ಐಡಿಯಲ್ ಹೋಂ ಲೇಔಟ್'ಗೆ ಹೋಗಲು ಮೈಸೂರು ರಸ್ತೆ ಮಾರ್ಗವು ಸುಲಭದ ದಾರಿ. ಆದರೆ ಈ ಮಾರ್ಗದಲ್ಲಿ ತೆರಳಿದರೆ ಪೊಲೀಸರಿಗೆ ಸುಳಿವು ಸಿಗಬಹುದು ಎಂಬ ಯೋಚನೆಯಿಂದ ಆರೋಪಿಗಳು ಆ ದಾರಿಗೆ ಪರ್ಯಾಯ ಮಾರ್ಗ ಹುಡುಕಿದ್ದರು. ಈ ಹಿನ್ನೆಲೆಯಲ್ಲಿ ಹತ್ಯೆ ನಡೆದ ದಿನ ಆರೋಪಿಗಳ ಸಂಚಾರ ಸಂಬಂಧ ಮೈಸೂರು ರಸ್ತೆಯ ನೂರಾರು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿ ಪರಿಶೀಲಿಸಿದರೂ ಸಹ ಯಾವುದೇ ರೀತಿ ಮಾಹಿತಿ ಸಿಕ್ಕಿರಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಶಂಕಿತ ಆರೋಪಿ ತೋರಿಸಿದ ದಾರಿ: ಶಂಕಿತಆರೋಪಿ ಮದ್ದೂರು ತಾಲೂಕಿನ ಹಿಂದೂ ಪರ ಸಂಘಟನೆ ಕಾರ್ಯಕರ್ತ ನವೀನ್'ನನ್ನು ಗೌರಿ ಮನೆಗೆ ಕರೆದೊಯ್ದು ಘಟನಾ ಸ್ಥಳ ಪರಿಶೀಲಿಸಲಾಯಿತು. ಆಗ ನವೀನ್'ನನ್ನು ಜೀಪ್'ನ ಮುಂಬದಿ ಆಸನದಲ್ಲಿ ಕೂರಿಸಿ ‘ನಮಗೆ ಗೌರಿ ಲಂಕೇಶ್ ಅವರ ಮನೆ ವಿಳಾಸ ಗೊತ್ತಿಲ್ಲ. ನೀನೇ ಹಾದಿ ತೋರಿಸಬೇಕು’ ಎಂದು ಸೂಚಿಸಿದ್ದೆವು. ಕೊನೆಗೆ ಆತ ತೋರಿಸಿದ ದಾರಿ ಕಂಡು ಅಧಿಕಾರಿಗಳೇ ಬೆಸ್ತು ಬಿದ್ದರು. ಇದುವರೆಗೆ ಈ ಮಾರ್ಗದಲ್ಲಿ ಅಧಿಕಾರಿಗಳು ತನಿಖೆ ಸಹ ನಡೆಸಿರಲಿಲ್ಲ ಎಂದು ಎಸ್'ಐಟಿ ವಿಶ್ವಾಸನೀಯ ಮೂಲಗಳು ‘ಕನ್ನಡಪ್ರಭ’ಕ್ಕೆ ಹೇಳಿವೆ.
ಮೈಸೂರು ರಸ್ತೆಯಲ್ಲಿ ಬಿಎಚ್'ಇಎಲ್ ಕಂಪನಿ ದಾಟಿ ನಾಯಂಡಹಳ್ಳಿ ಜಂಕ್ಷನ್'ಗೆ ತಲುಪಿರುವ ಆರೋಪಿಗಳು ಅಲ್ಲಿ ಎಡ ತಿರುವು ತೆಗೆದುಕೊಂಡಿದ್ದಾರೆ. ಬಳಿಕ ಬನಶಂಕರಿ ರಸ್ತೆಗೆ ಬಂದ ಅವರು, ಪಿಇಎಸ್ ಕಾಲೇಜು ಬಳಸಿ ಗ್ಲೋಬಲ್ ಎಂಜಿನಿಯರಿಂಗ್ ಕಾಲೇಜು ಬಳಿಗೆ ಬಂದಿದ್ದಾರೆ. ಅಲ್ಲಿಂದ ಬಂಗಾರಪ್ಪ ನಗರ, ಆದಿತ್ಯ ಲೇಔಟ್, ಪಟ್ಟಣಗೆರೆ ಮೂಲಕ ರಾಜರಾಜೇಶ್ವರಿ ನಗರ ಮುಖ್ಯರಸ್ತೆಗೆ ಬಂದಿರುವ ಹಂತಕರು, ಬಾಟಾ ಶೋ ರೂಂ ಹಿಂಭಾಗ ಕೆಪಿಟಿಸಿಎಲ್ ಕಲ್ಯಾಣ ಮಂಟಪ ರಸ್ತೆಯಲ್ಲಿ ಬಲ ತಿರುವು ಪಡೆದಿದ್ದಾರೆ. ಅಲ್ಲಿಂದ ಗಲ್ಲಿ ರಸ್ತೆ ಮೂಲಕ ಗೌರಿ ಲಂಕೇಶ್ ಮನೆಗೆ ಬಂದಿದ್ದಾರೆ. ಈ ದಾರಿಯನ್ನು ಸೋಮವಾರ ಶಂಕಿತ ಆರೋಪಿ ನವೀನ್ ತೋರಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ. ಗೌರಿ ಅವರ ಮನೆ ಸಮೀಪ ಉದ್ಯಾನವಿದೆ ಎಂದು ವಿಚಾರಣೆ ವೇಳೆ ಆತ ಹೇಳಿದ್ದ. ಹೀಗಾಗಿ ಬೇಕಂತಲೇ ಗೌರಿ ಅವರ ಮನೆಗೆ ಕರೆದೊಯ್ಯುವಾಗ ತಪ್ಪು ದಾರಿಗೆ ಹೋಗಿದ್ದರೂ ನವೀನ್, ಅಂತಿಮವಾಗಿ ಪಕ್ಕಾ ವಿಳಾಸಕ್ಕೆ ಕರೆದುಕೊಂಡು ಹೋದ ಎನ್ನಲಾಗಿದೆ.
