ಹಿರಿಯ ನಟ, ಮಾಜಿ ಸಚಿವ ಅಂಬರೀಷ್ ಅವರ ನಿಧನಕ್ಕೆ ನಾಡಿಗೆ ನಾಡೇ ಕಂಬನಿ ಮಿಡಿಯುತ್ತಿದ್ದು, ಅವರ ಅಭಿಮಾನಿಗಳ ದುಃಖದ ಕಟ್ಟೆ ಕೋಡಿ ಒಡೆದಿದೆ. ಇಲ್ಲೋರ್ವ ಅಂಬಿ ಅಭಿಮಾನಿ ಪೊಲೀಸ್ ಇನ್ಸ್ ಪೆಕ್ಟರ್ ಕೇಶಮುಂಡನ ಮಾಡಿಸಿಕೊಂಡು ನಮನ ಸಲ್ಲಿಸಿದ್ದಾರೆ.
ಬೆಂಗಳೂರು : ಹಿರಿಯ ನಟ, ಮಾಜಿ ಸಚಿವ ಅಂಬರೀಷ್ ಅವರ ನಿಧನಕ್ಕೆ ನಾಡಿಗೆ ನಾಡೇ ಕಂಬನಿ ಮಿಡಿಯುತ್ತಿದ್ದು, ಅವರ ಅಭಿಮಾನಿಗಳ ದುಃಖದ ಕಟ್ಟೆ ಕೋಡಿ ಒಡೆದಿದೆ. ಒಬ್ಬೊಬ್ಬ ಅಭಿಮಾನಿಗಳು ಒಂದೊಂದು ರೀತಿ ತಮ್ಮ ನಾಯಕನಿಗೆ ಗೌರವ ಸಲ್ಲಿಸುತ್ತಿದ್ದಾರೆ. ನಗರದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್‌ವೊಬ್ಬರು ಕೇಶಮುಂಡನ ಮಾಡಿಸಿಕೊಳ್ಳುವ ಮೂಲಕ ತಮ್ಮ ನೆಚ್ಚಿನ ನಾಯಕನಿಗೆ ನಮನ ಸಲ್ಲಿಸಿದ್ದಾರೆ.
ಈಶಾನ್ಯ ವಿಭಾಗದ ಬಾಗಲೂರು ಠಾಣೆ ಇನ್ಸ್‌ಪೆಕ್ಟರ್ ನಂದಕುಮಾರ್ ಕೇಶಮುಂಡನ ಮಾಡಿಸಿಕೊಂಡು ಅಂಬರೀಷ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ ನಡೆದ ಅಂತ್ಯಕ್ರಿಯೆ ವೇಳೆ ನಂದಕುಮಾರ್ ಕರ್ತವ್ಯ ನಿರ್ವಹಿಸಿ ಅಂತಿಮವಾಗಿ ಅಂಬರೀಷ್ ಅವರಿಗೆ ಗೌರವ ಸೂಚಿಸಿದ್ದಾರೆ.
2003 ನೇ ಬ್ಯಾಚ್‌ನ ಇನ್ಸ್‌ಪೆಕ್ಟರ್ ನಂದಕುಮಾರ್ ಮೂಲತಃ ಮಂಡ್ಯ ಜಿಲ್ಲೆಯವರು. ತಮ್ಮ ಜಿಲ್ಲೆಯವರೇ ಆದ ಅಂಬರೀಷ್ ಎಂದರೆ ನಂದಕುಮಾರ್ ಅವರಿಗೆ ಎಲ್ಲಿಲ್ಲದ ಪ್ರೀತಿ. ಅಂಬರೀಷ್ ಅವರ ಇನ್‌ಸ್ಪೆಕ್ಟರ್ ಕ್ರಾಂತಿಕುಮಾರ್ ಮತ್ತಿತರ ಪೊಲೀಸ್ ಪಾತ್ರದ ಚಿತ್ರಗಳನ್ನು ನೋಡಿಕೊಂಡು ನಂದಕುಮಾರ್ ಬೆಳೆದವರು.
ಅಂಬರೀಷ್ ಅವರನ್ನೇ ತಮ್ಮ ಸ್ಫೂರ್ತಿಯ ಸೆಲೆಯಾಗಿಸಿಕೊಂಡಿದ್ದ ನಂದಕುಮಾರ್ ಇದೀಗ ಇನ್ಸ್ ಪೆಕ್ಟರ್ ಆಗಿ ಬಾಗಲೂರು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ನಂದಕುಮಾರ್ ಅವರು, ನನ್ನಂತಹ ಎಷ್ಟೋ ಮಂದಿಗೆ ಅವರು ಮಾರ್ಗದರ್ಶಕ ರಾಗಿದ್ದರು. ಅವರನ್ನು ನೋಡಿಕೊಂಡೇ ನಾನು ಬೆಳೆದೆ. ನೆಚ್ಚಿನ ನಟ, ನಾಯಕ ಅಂಬರೀಷ್ ಅವರನ್ನು ಕಳೆದುಕೊಂಡು ನೋವಾಗಿದೆ. ಕೇಶಮುಂಡನ ಮಾಡಿಸಿಕೊಳ್ಳುವ ಮೂಲಕ ಅವರಿಗೆ ಗೌರವ ಸಲ್ಲಿಸಿದ್ದೇನೆ ಎಂದು ಹೇಳಿದರು. ಕಾಕಾತಾಳೀಯ ಎಂಬಂತೆ ನನ್ನನ್ನು ಕಂಠೀರವ ಸ್ಟುಡಿಯೋದಲ್ಲಿನ ಅಂತ್ಯಕ್ರಿಯೆಗೆ ನಿಯೋಜಿಸಿದ್ದರು. ಅಂತಿಮವಾಗಿ ಅಂಬರೀಷ್ ಅವರಿಗೆ ಕೊನೆ ಬಾರಿಗೆ ಗೌರವ ಸಲ್ಲಿಸಲು ಅವಕಾಶ ಸಿಕ್ಕಿತ್ತು ಎಂದು ಪ್ರತಿಕ್ರಿಯಿಸಿದರು.
