ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ಪೇದೆ ಗುರು ಮೂರ್ತಿ  ಮಂಡ್ಯ ಮೂಲದ ಮಹಿಳೆಯೊಬ್ಬರಿಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿರುವ ಆರೋಪ ಕೇಳಿ ಬಂದಿದೆ.

ಬೆಂಗಳೂರು(ಡಿ.8): ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ಪೇದೆ ಗುರು ಮೂರ್ತಿ ಮಂಡ್ಯ ಮೂಲದ ಮಹಿಳೆಯೊಬ್ಬರಿಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿರುವ ಆರೋಪ ಕೇಳಿ ಬಂದಿದೆ. ವರಲಕ್ಷ್ಮಿ ಎಂಬ ಮಹಿಳೆ ಪತಿ ಕಿರುಕುಳ ಕೊಡುತ್ತಾರೆ ಎಂದು ದೂರು ನೀಡಲು ಹೋದ ವೇಳೆ ಮಹಿಳೆಯ ನಂಬರ್ ಕಲೆಕ್ಟ್ ಮಾಡಿಕೊಂಡಿದ್ದ ಪೇದೆ ಗುರು ಮೂರ್ತಿ ಮರು ದಿನದಿಂದಲೇ ಆಕೆಗೆ ಕರೆ ಮಾಡೋದು, ವಾಟ್ಸಾಪ್’ನಲ್ಲಿ ಅಶ್ಲೀಲವಾಗಿ ಚಾಟ್ ಮಾಡೋಕೆ ಶುರು ಮಾಡಿದ್ದಾನೆ.

ಕೆಟ್ಟ ಫೋಟೊಗಳನ್ನು ಆಕೆ ಮೊಬೈಲ್ ಗೆ ಕಳುಹಿಸೋದು, ಕರೆ ಮಾಡಿ ಮಂಚಕ್ಕೆ ಕರೆಯೋದೂ ಮಾಡುತ್ತಾ ಇದ್ದಾನೆ. ಅಷ್ಟೇ ಅಲ್ಲದೆ ಇದಕ್ಕೆ ಒಪ್ಪದಿದ್ರೆ, ನಿನ್ನ ವಿರುದ್ಧ ಇಲ್ಲ ಸಲ್ಲದ ಕೇಸ್ ಹಾಕುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಇದರಿಂದ ಬೇಸತ್ತ ಮಹಿಳೆ ಆರೋಪಿ ಗುರು ಮೂರ್ತಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದು, ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಲು ಮುಂದಾಗಿದ್ದು ಸೂಕ್ತ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.