ಬೆಂಗಳೂರು :  ತಾವು ಕೆಲಸ ಮಾಡುತ್ತಿದ್ದ ಅಪಾರ್ಟ್‌ಮೆಂಟ್‌ನಲ್ಲಿ ಕಳ್ಳತನ ಎಸಗಿದ ಆರೋಪದಡಿ ಬಂಧಿತರಾಗಿ ಬಳಿಕ ಸಿನಿಮೀಯ ಶೈಲಿಯಲ್ಲಿ ಪೊಲೀಸರಿಂದ ತಪ್ಪಿಸಿಕೊಂಡಿದ್ದ ನೇಪಾಳ ಮೂಲದ ಇಬ್ಬರು ಕಾವಲುಗಾರಿಗೆ ಕೆ.ಜಿ.ಹಳ್ಳಿ ಠಾಣೆ ಪೊಲೀಸರು ಗುಂಡು ಶನಿವಾರ ಹೊಡೆದಿದ್ದಾರೆ.

ಶಾಂಪುರ ರೈಲ್ವೆ ಗೇಟ್‌ ಸಮೀಪದ ಸ್ಮಶಾನದಲ್ಲಿ ಈ ದಾಳಿ ನಡೆದಿದ್ದು, ಗುಂಡೇಟಿನಿಂದ ಗಾಯಗೊಂಡಿರುವ ನಾಮರಾಜ್‌ ಬಾಸ್ಕತ್‌ ಹಾಗೂ ಸಂತೋಷ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಳ್ಳತನ ಪ್ರಕರಣದಲ್ಲಿ ಬಂಧಿತರಾಗಿದ್ದ ಆರೋಪಿಗಳನ್ನು ಪೊಲೀಸರು ವೈದ್ಯಕೀಯ ತಪಾಸಣೆ ಸಲುವಾಗಿ ಡಾ.ಬಿ.ಆರ್‌.ಅಂಬೇಡ್ಕರ್‌ ಆಸ್ಪತ್ರೆಗೆ ಕರೆತಂದಿದ್ದರು. ಆ ವೇಳೆ ಪೊಲೀಸರಿಂದ ತಪ್ಪಿಸಿಕೊಂಡಿದ್ದ ಸಂತೋಷ್‌ ಮತ್ತು ನಾಮರಾಜ್‌, ಶಾಂಪುರ ರೈಲ್ವೆ ಗೇಟ್‌ ಸಮೀಪ ಸ್ಮಶಾನದಲ್ಲಿ ಅವಿತುಕೊಂಡಿದ್ದರು. ಈ ಬಗ್ಗೆ ಖಚಿತ ಪಡೆದು ಬಂಧಿಸಲು ತೆರಳಿದ ಪೊಲೀಸರ ಮೇಲೆ ಮತ್ತೆ ಆರೋಪಿಗಳು ಹಲ್ಲೆಗೆ ಮುಂದಾಗಿದ್ದಾರೆ. ಆಗ ಇನ್ಸ್‌ಪೆಕ್ಟರ್‌ ಎಡ್ವಿನ್‌ ಪ್ರದೀಪ್‌, ಆರೋಪಿಗಳ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಪೂರ್ವ ವಿಭಾಗದ ಡಿಸಿಪಿ ಹೇಳಿದ್ದಾರೆ.

ಎರಡು ವರ್ಷಗಳಿಂದ ಎಚ್‌ಬಿಆರ್‌ ಲೇಔಟ್‌ 5ನೇ ಮುಖ್ಯರಸ್ತೆಯ ವೈಟ್‌ ಕಾರ್ನರ್‌ ಅಪಾರ್ಟ್‌ಮೆಂಟ್‌ನಲ್ಲಿ ಕಾವಲುಗಾರರಾಗಿ ಸಂತೋಷ್‌, ನಾಮರಾಜ್‌ ಹಾಗೂ ಕರನ್‌ ಬಹುದ್ದೂರ್‌ ಶಾಹಿ ಕೆಲಸ ಮಾಡುತ್ತಿದ್ದರು. ಆ ಆಪಾರ್ಟ್‌ಮೆಂಟ್‌ ನಿವಾಸಿ ಉದ್ಯಮಿ ಶೋಯೆಬ್‌ ಅವರ ಫ್ಲ್ಯಾಟ್‌ನಲ್ಲಿ ಜೂ.9ರಂದು ಕಳ್ಳತನ ಎಸಗಿದ್ದರು. ಈ ಬಗ್ಗೆ ಕೆ.ಜಿ.ಹಳ್ಳಿ ಠಾಣೆಯಲ್ಲಿ ಶೋಯೆಬ್‌ ದೂರು ದಾಖಲಿಸಿದ್ದರು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಕೃತ್ಯದ ನಡೆದ ಐದು ದಿನಗಳ ಬಳಿಕ ಶುಕ್ರವಾರ ಆರೋಪಿಗಳನ್ನು ಸೆರೆ ಹಿಡಿದರು.

ಆರೋಪಿಗಳಿಂದ 17 ಲಕ್ಷ ಮೌಲ್ಯದ ಚಿನ್ನಾಭರಣ, 85 ಸಾವಿರ ನಗದು, ದುಬಾರಿ ಮೌಲ್ಯದ 5 ವಾಚ್‌ಗಳು, 590 ಪ್ರಾಚೀನ ಒಡವೆಗಳು ಸೇರಿದಂತೆ ಒಟ್ಟು 20 ಲಕ್ಷ ಮೌಲ್ಯ ವಸ್ತುಗಳು ಜಪ್ತಿ ಮಾಡಿದ್ದರು. ಬಳಿಕ ಈ ಆರೋಪಿಗಳನ್ನು ವೈದ್ಯಕೀಯ ತಪಾಸಣೆಗೆ ಬೆಳಗ್ಗೆ 10.30 ಗಂಟೆಗೆ ಎಎಂಸಿ ಆಸ್ಪತ್ರೆಗೆ ಎಎಸ್‌ಐ ಖಾಜಾ ನಿಜಾಮುದ್ದೀನ್‌, ಗುಣಶೇಖರ್‌, ಸಂಜೀವ್‌ ಮೂರ್ತಿ ಹಾಗೂ ಹರೀಶ್‌ ಕುಮಾರ್‌ ಕರೆದುಕೊಂಡು ಹೋಗಿದ್ದರು. ತಪಾಸಣೆ ಮುಗಿಸಿ 11 ಗಂಟೆಯಲ್ಲಿ ಮರಳುವಾಗ ಸಂತೋಷ್‌ ಮತ್ತು ನಾಮರಾಜ್‌, ಪೊಲೀಸರನ್ನು ತಳ್ಳಿ ತಪ್ಪಿಸಿಕೊಂಡಿದ್ದರು. ಆ ವೇಳೆ ಪಿಎಸ್‌ಐ ವಶದಲ್ಲಿದ್ದ ಮತ್ತೊಬ್ಬ ಆರೋಪಿ ಬಹುದ್ದೂರ್‌ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಡಿಸಿಪಿ ರಾಹುಲ್‌ ಕುಮಾರ್‌ ಶಹಾಪುರವಾಡ್‌ ವಿವರಿಸಿದ್ದಾರೆ.

ತಕ್ಷಣವೇ ಘಟನೆ ಕುರಿತು ಇನ್ಸ್‌ಪೆಕ್ಟರ್‌ ಎಡ್ವಿನ್‌ ಪ್ರದೀಪ್‌ ಅವರಿಗೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಅದೇ ಹೊತ್ತಿಗೆ ಶಾಂಪುರ ರೈಲ್ವೆ ಮುಖ್ಯರಸ್ತೆ ಗಸ್ತಿನಲ್ಲಿದ್ದ ಇನ್ಸ್‌ಪೆಕ್ಟರ್‌, ಆರೋಪಿಗಳ ಬೆನ್ನಹತ್ತಿದ್ದಾರೆ. ಕೊನೆಗೆ ರೈಲ್ವೆ ಗೇಟ್‌ ಸಮೀಪದ ಸ್ಮಶಾನದ ಬಳಿ ಪೊಲೀಸರಿಗೆ ಆರೋಪಿಗಳು ಎದುರಾಗಿದ್ದಾರೆ. ಈ ಹಂತದಲ್ಲಿ ಮತ್ತೆ ಪೊಲೀಸರ ಮೇಲೆ ಕಲ್ಲು ಎಸೆದು ನೇಪಾಳಿಗಳು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆಗ ಆರೋಪಿಗಳಿಗೆ ಶರಣಾಗುವಂತೆ ಇನ್ಸ್‌ಪೆಕ್ಟರ್‌ ಸೂಚಿಸಿದರೂ ಕೇಳಿಲ್ಲ. ಕೊನೆಗೆ ಆತ್ಮರಕ್ಷಣೆಗೆ ಇನ್ಸ್‌ಪೆಕ್ಟರ್‌ ಅವರು, ನಾಮರಾಜ್‌ ಹಾಗೂ ಸಂತೋಷ್‌ ಮೇಲೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಈ ಘಟನೆಯಲ್ಲಿ ಪೊಲೀಸರಿಗೆ ಸಹ ಪೆಟ್ಟಾಗಿದೆ. ಕೊನೆಗೆ ಗುಂಡೇಟು ತಿಂದು ಕುಸಿದು ಬಿದ್ದ ಇಬ್ಬರನ್ನು ಎಂಎಂಸಿ ಆಸ್ಪತ್ರೆಗೆ ಪೊಲೀಸರು ದಾಖಲಿಸಿದ್ದಾರೆ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.