ಬೆಂಗಳೂರು :  ಖಾಸಗಿ ಸಾಲ ಮನ್ನಾಕ್ಕಾಗಿ ರಾಜ್ಯ ಸರ್ಕಾರದ ಉದ್ದೇಶಿತ ‘ಕರ್ನಾಟಕ ಋುಣಭಾರ ಮಸೂದೆ-2018’ ಅಧಿಕೃತವಾಗಿ ಜಾರಿಗೂ ಮುನ್ನ ಸಾಲ ವಸೂಲಿಗೆ ಆರ್ಥಿಕ ದುರ್ಬಲ ವರ್ಗದ ಮೇಲೆ ಲೇವಾದೇವಿ ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳ ದೌರ್ಜನ್ಯ ನಿಯಂತ್ರಣಕ್ಕೆ ರಾಜ್ಯ ಪೊಲೀಸ್‌ ಇಲಾಖೆ ಮುಂದಾಗಿದೆ.

ಈ ದೌರ್ಜನ್ಯ ಸಂಬಂಧ ಲಭ್ಯವಾದ ಮಾಹಿತಿ ಆಧರಿಸಿ ಸ್ವಯಂಪ್ರೇರಿತ ಪ್ರಕರಣ ದಾಖಲು ಹಾಗೂ ಕಿರುಕುಳ ಕೃತ್ಯಗಳ ತನಿಖೆ ಉಸ್ತುವಾರಿಗೆ ಡಿಸಿಪಿ/ಹೆಚ್ಚುವರಿ ಪೊಲೀಸ್‌ ಅಧೀಕ್ಷಕರ ನೇಮಕ ಸೇರಿದಂತೆ ಎಂಟು ಅಂಶಗಳನ್ನು ಜಾರಿಗೊಳಿಸುವಂತೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕಿ ನೀಲಮಣಿ ಎನ್‌.ರಾಜು ಸುತ್ತೋಲೆ ಹೊರಡಿಸಿದ್ದಾರೆ.

ಸಣ್ಣ ರೈತರು, ಭೂ ರಹಿತ ಕೃಷಿ ಕಾರ್ಮಿಕರು ಹಾಗೂ ಅಶಕ್ತ ವರ್ಗದ ಜನರಿಗೆ ಋುಣಭಾರ ಸಮಸ್ಯೆಗಳ ಪರಿಹಾರಕ್ಕಾಗಿ ‘ಕರ್ನಾಟಕ ಋುಣಭಾರ ಮಸೂದೆ-2018’ ಅನುಷ್ಠಾನಕ್ಕೆ ರಾಜ್ಯ ರಾಜ್ಯ ಸರ್ಕಾರವು ಸಿದ್ಧತೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಅಂತಹ ಜನರ ಮೇಲೆ ಸಾಲ ನೀಡಿರಬಹುದಾದ ಲೇವಾದೇವಿಗಾರರು ಅಥವಾ ಹಣಕಾಸು ಸಂಸ್ಥೆಗಳು, ಮಸೂದೆ ಜಾರಿಗೂ ಮುನ್ನವೇ ಸಾಲ ಮರುಪಾವತಿಗೆ ವಿವಿಧ ರೀತಿಯ ಒತ್ತಡಗಳನ್ನು ಹಾಕುತ್ತಿರುವುದು ಕಂಡು ಬಂದಿದೆ. ಹೀಗಾಗಿ ಸಾಲ ಪಡೆದವರ ಮೇಲೆ ಯಾವುದೇ ರೀತಿಯ ಕಾನೂನು ಬಾಹಿರ ಒತ್ತಡ ಹಾಗೂ ದೌರ್ಜನ್ಯಗಳು ನಡೆಯದಂತೆ ಪೊಲೀಸರು ನಿಗಾ ವಹಿಸಬೇಕು ಎಂದು ಡಿಜಿಪಿ ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.

ಸೂಚನೆಗಳು ಹೀಗಿವೆ

*ಕರ್ನಾಟಕ ಲೇವಾದೇವಿ ಕಾಯ್ದೆ 1961, ರಾಜ್ಯ ಗಿರವಿದಾರರ ಕಾಯ್ದೆ 1961, ದಿ ಚಿಟ್‌ ಫಂಡ್ಸ್‌ ಆಕ್ಟ್ 1982 ಹಾಗೂ ಕರ್ನಾಟಕ ಪ್ರಾಹಿಬಿಷನ್‌ ಆಫ್‌ ಚಾರ್ಜಿಂಗ್‌ ಎಕ್ಸಾರ್ಬಿಟೆಂಟ್‌ ಇಂಟೆರೆಸ್ಟ್‌ ಆಕ್ಟ್ 2004ಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು.

*ರೈತರಿಗೆ ಅನೌಪಚಾರಿಕ ಸಾಲ ನೀಡುವ ನಿಟ್ಟಿನಲ್ಲಿ ಕಾನೂನುಪಾಲನೆ ಹಾಗೂ ಸಾಲ ಮರುಪಾವತಿಗೆ ಸಂಬಂಧ ಕಿರುಕುಳ ನಡೆಯದಂತೆ ಎಚ್ಚರಿಕೆ ವಹಿಸಬೇಕು.

*ನಿಗದಿತ ಪ್ರಮಾಣಕ್ಕಿಂತ ಅಧಿಕ ಬಡ್ಡಿ ಹಾಗೂ ಸಾಲ ವಸೂಲಿಗೆ ಸಾರ್ವಜನಿಕರು ಹಾಗೂ ರೈತರ ಶೋಷಣೆ ಕುರಿತು ದೂರಿನ ಬಗ್ಗೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಬೇಕು.

*ಪ್ರತಿ ಜಿಲ್ಲಾ ಮತ್ತು ನಗರದ ಮಟ್ಟದಲ್ಲಿ ಸಹಾಯವಾಣಿ ಕೇಂದ್ರವು ದಿನದ 24 ತಾಸು ಕಾರ್ಯನಿರ್ವಹಿಸಬೇಕು. ಇದರ ನಿರ್ವಹಣೆಗೆ ಪಿಎಸ್‌ಐ ಮಟ್ಟದ ಅಧಿಕಾರಿ ನೇಮಿಸಬೇಕು.

*ಸಹಾಯವಾಣಿ ಕೇಂದ್ರ ಹಾಗೂ ನಿಯಂತ್ರಣ ಕೊಠಡಿಗಳಲ್ಲಿ ಸ್ವೀಕರಿಸುವ ದೂರುಗಳ ತನಿಖೆ ಉಸ್ತುವಾರಿಯನ್ನು ಜಿಲ್ಲೆಗಳಲ್ಲಿ ಎಎಸ್ಪಿ ಹಾಗೂ ನಗರದಲ್ಲಿ ಡಿಸಿಪಿಗಳು ನಡೆಸಬೇಕು.

*ಸಹಾಯವಾಣಿ ಕೇಂದ್ರದ ಕುರಿತು ಸಾರ್ವಜನಿಕರಿಗೆ ಕರಪತ್ರ ಹಂಚಿಕೆ, ಭಿತ್ತಿಪತ್ರಗಳು ಹಾಗೂ ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರ ಮಾಡಬೇಕು.

*ಅನಧಿಕೃತ ಬಡ್ಡಿ ಹಾಗೂ ಲೇವಾದೇವಿ ವ್ಯವಹಾರಗಳ ಕುರಿತು ಮಾಹಿತಿ ಸಂಗ್ರಹಿಸಿ ಗಸ್ತು ಸಿಬ್ಬಂದಿ ಬಳಕೆ ಸೂಚನೆ.

*ಸಾಲ ವಸೂಲಿ ನಿರ್ಬಂಧ ಕುರಿತು ಸಾಮಾಜಿಕ ಜಾಲ ತಾಣಗಳಾದ ವಾಟ್ಸ್‌ ಆ್ಯಪ್‌, ಫೇಸ್‌ಬುಕ್‌, ಪೊಲೀಸ್‌ ವೆಬ್‌ಸೈಟ್‌ ಮುಖಂತಾರ ಪ್ರಚಾರ ನಡೆಸುವುದು.