ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಒಬ್ಬರು ತನ್ನ ಪತ್ನಿಗೆ ತಿಳಿಯದಂತೆ ಬೇರೊಬ್ಬ ಮಹಿಳೆಯನ್ನು ಕೋರ್ಟ್‌ಗೆ ಹಾಜರುಪಡಿಸಿ ವಿಚ್ಛೇದನ ಪಡೆಯುವ ಮೂಲಕ ಮೋಸ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮೈಸೂರು (ಡಿ.25): ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಒಬ್ಬರು ತನ್ನ ಪತ್ನಿಗೆ ತಿಳಿಯದಂತೆ ಬೇರೊಬ್ಬ ಮಹಿಳೆಯನ್ನು ಕೋರ್ಟ್‌ಗೆ ಹಾಜರುಪಡಿಸಿ ವಿಚ್ಛೇದನ ಪಡೆಯುವ ಮೂಲಕ ಮೋಸ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಈ ಸಂಬಂಧ ಮೊದಲ ಪತ್ನಿ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಲೋಕಾಯುಕ್ತ ಅಧೀಕ್ಷಕರ ಕಚೇರಿಯಲ್ಲಿ ಹೆಡ್‌ಕಾನ್ಸ್‌ಟೇಬಲ್ ಕರ್ತವ್ಯ ನಿರ್ವಹಿಸುತ್ತಿರುವ ಎನ್. ರಾಜಾಚಾರಿ ಮೋಸ ಮಾಡಿರುವುದಾಗಿ ಅವರ ಪತ್ನಿ ಸವಿತಾ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪೊಲೀಸ್ ಒಬ್ಬರೇ ಈ ರೀತಿ ತನ್ನ ಪತ್ನಿಗೆ ಈ ರೀತಿಯ ಅನ್ಯಾಯ ಎಸಗಿದ್ದಾರೆಂದು ವಿಶ್ವಕರ್ಮ ಮಹಾಮಂಡಲದ ಜಿಲ್ಲಾಧ್ಯಕ್ಷ ಸಿ.ಟಿ. ಆಚಾರ್ಯ ಸುದ್ದಿ ಗೋಷ್ಠಿಯಲ್ಲಿ ಆರೋಪಿಸಿದರು. ಹುಣಸೂರು ತಾಲೂಕು ವಡೇರ ಹೊಸಹಳ್ಳಿಯ ಎನ್. ರಾಜಾಚಾರಿ ಅವರು ಚಿಕ್ಕಬೀಚನಹಳ್ಳಿಯ ಪುತ್ರಿ ಸವಿತಾ ಎಂಬವರನ್ನು 17 ವರ್ಷದ ಹಿಂದೆ ವಿವಾಹವಾಗಿದ್ದರು. ಇವರಿಗೆ 16 ವರ್ಷದ ಮಗ ಮತ್ತು 13 ವರ್ಷದ ಮಗಳು ಇದ್ದಾರೆ.

3 ತಿಂಗಳ ಹಿಂದೆ ಪತ್ನಿ ಸವಿತಾಗೆ ತಿಳಿಯದಂತೆ ಬೇರೊಬ್ಬ ಮಹಿಳೆಯನ್ನು ಕೋರ್ಟಿಗೆ ಹಾಜರುಪಡಿಸಿ ವಿಚ್ಛೇದನ ಪಡೆದಿರುವುದಾಗಿ ಅವರು ದೂರಿದರು. ಮಧ್ಯ ರಾತ್ರಿ ಕುಡಿದು ಬಂದು ಆಗಾಗ್ಗೆ ಜಗಳವಾಡುತ್ತಿದ್ದ ರಾಜಾಚಾರಿ, ಸೆ.28ರಂದು ತಡರಾತ್ರಿ ಪತ್ನಿ ಸವಿತಾರನ್ನು ಮನೆಯಿಂದ ಆಚೆಗೆ ಕಳುಹಿಸಿದ್ದರು. ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ವಿಚ್ಛೇದನ ಪಡೆದಿರುವುದು ಬೆಳಕಿಗೆ ಬಂದಿದೆ.