ಬೆಂಗಳೂರು[ಮಾ.17]: ತಮ್ಮ ಪರಿಚಿತನಿಂದ ಮರಣಾಂತಿಕ ಹಲ್ಲೆಗೊಳಗಾಗಿದ್ದ ಶಿಕ್ಷಕಿಯನ್ನು ಆಸ್ಪತ್ರೆಗೆ ದಾಖಲಿಸಿ, ಬಳಿಕ ಅವರಿಗೆ ರಕ್ತದಾನ ಮಾಡಿ ಪ್ರಾಣ ರಕ್ಷಿಸಿದ ಗಿರಿನಗರ ಠಾಣೆ ಇನ್ಸ್‌ಪೆಕ್ಟರ್‌ ಸಿ.ಎ.ಸಿದ್ದಲಿಂಗಯ್ಯ ಅವರನ್ನು ಶನಿವಾರ ಡಿಜಿಪಿ ಹಾಗೂ ಪೊಲೀಸ್‌ ಆಯುಕ್ತರು ಅಭಿನಂದಿಸಿದ್ದಾರೆ.

ತಮ್ಮ ಕಚೇರಿಗೆ ಇನ್ಸ್‌ಪೆಕ್ಟರ್‌ ಅವರನ್ನು ಕರೆಸಿಕೊಂಡ ಡಿಜಿಪಿ ನೀಲಮಣಿ ಎನ್‌.ರಾಜು ಅವರು, ಸಿದ್ದಲಿಂಗಯ್ಯ ಅವರಿಗೆ ಪ್ರಶಂಸನಾ ಪತ್ರ ಹಾಗೂ ಹಾಗೂ .20 ಸಾವಿರ ನಗದು ಬಹುಮಾನ ಗೌರವಿಸಿದ್ದಾರೆ. ನಿಮ್ಮ ಕರ್ತವ್ಯ ಪ್ರಜ್ಞೆ ಎಲ್ಲಾ ಪೊಲೀಸರಿಗೆ ಮಾದರಿಯಾಗಿದೆ ಎಂದು ಡಿಜಿಪಿ ಶ್ಲಾಘಿಸಿದ್ದಾರೆ.

ಹಲ್ಲೆಗೊಳಗಾದ ಶಿಕ್ಷಕಿಗೆ ರಕ್ತದಾನ ಮಾಡಿ ಜೀವ ಉಳಿಸಿದ ಬೆಂಗಳೂರು ಇನ್ಸ್ ಪೆಕ್ಟರ್

ಡಿಜಿಪಿ ಅವರ ಪ್ರಶಂಸನಾ ಪತ್ರ ಸ್ವೀಕರಿಸಿದ ಬಳಿಕ ಸಿದ್ದಲಿಂಗಯ್ಯ ಅವರು ಆಯುಕ್ತ ಟಿ.ಸುನೀಲ್‌ ಕುಮಾರ್‌ ಅವರನ್ನು ಭೇಟಿಯಾದರು. ಆಗ ಇನ್ಸ್‌ಪೆಕ್ಟರ್‌ ಮತ್ತು ಅವರ ತಂಡದ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಆಯುಕ್ತರು ಸಹ .50 ಸಾವಿರ ನಗದು ಬಹುಮಾನ ನೀಡಿ ಅಭಿನಂದಿಸಿದರು.

ಪ್ರೀತಿ ನಿರಾಕರಿಸಿದ್ದಕ್ಕೆ ಹಲ್ಲೆ?

ಗಿರಿನಗರದ ಸರ್ಕಾರಿ ಶಾಲೆಯ ಶಿಕ್ಷಕಿ ತನುಜಾ ಅವರ ಮೇಲೆ ಶೇಖರ್‌ ಎಂಬಾತ ಮಚ್ಚಿನಿಂದ ಹಲ್ಲೆ ನಡೆಸಿದ್ದ. ತಕ್ಷಣವೇ ಆತನನ್ನು ಬಂಧಿಸಿದ ಇನ್ಸ್‌ಪೆಕ್ಟರ್‌ ಸಿದ್ದಲಿಂಗಯ್ಯ ಅವರು, ಗಾಯಾಳು ಶಿಕ್ಷಕಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆಗ ರಕ್ತದ ಅಗತ್ಯವಿದೆ ಎಂದು ವೈದ್ಯರು ತಿಳಿಸಿದಾಗ ತಕ್ಷಣವೇ ತಾವೇ ರಕ್ತ ಕೊಟ್ಟಿದ್ದರು.

ಬಹಳ ದಿನಗಳಿಂದ ತನುಜಾ ಅವರ ಮೇಲೆ ನನಗೆ ಪ್ರೇಮವಾಗಿತ್ತು. ಆದರೆ ಅವರು ನನ್ನ ಪ್ರೀತಿಯನ್ನು ನಿರಾಕರಿಸಿದ್ದರು. ಇದರಿಂದ ಕೋಪಗೊಂಡು ನಾನು ಹಲ್ಲೆ ನಡೆಸಿದೆ ಎಂದು ಆರೋಪಿ ಹೇಳಿಕೆ ಕೊಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.