ಪೊಲೀಸ್ ಪೇದೆ ಕೋರ್ಟ್ ಹಾಲ್'ನಿಂದ ಜಿಗಿದು ಸಾವನ್ನಪ್ಪಿರುವ ಸಿಸಿಟಿವಿ ದೃಶ್ಯ; ಮಹಿಳೆ ಸ್ನಾನ ಮಾಡುತ್ತಿದ್ದುದನ್ನು ಮೊಬೈಲ್'ನಲ್ಲಿ ಸೆರೆ ಹಿಡಿದು ಸಿಕ್ಕಿಬಿದ್ದ ಪೊಲೀಸ್ ಪೇದೆ ಅವಮಾನ ತಾಳಲಾಗದೇ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ..!

ಮಂಗಳೂರು(ಮಾ. 26): ಮಹಿಳೆ ಸ್ನಾನ ಮಾಡುತ್ತಿದ್ದುದನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಪೋಕ್ಸೋ ಕಾಯಿದೆಯಡಿ ಬಂಧಿತನಾದ ಬಜಪೆ ಠಾಣೆಯ ಕಾನ್‌ಸ್ಟೇಬಲ್‌ ಮಂಗಳೂರಿನ ಎರಡನೇ ಹೆಚ್ಚುವರಿ ನ್ಯಾಯಾಲಯದ ನಾಲ್ಕನೇ ಮಹಡಿಯಿಂದ ಜಿಗಿದು ಮೃತಪಟ್ಟಿರುವ ಘಟನೆ ನಗರದಲ್ಲಿ ನಿನ್ನೆ ಶನಿವಾರ ನಡೆದಿದೆ. ಮೂಲತಃ ಮಂಜೇಶ್ವರ ನಿವಾಸಿ ಪ್ರವೀಣ್‌ ಪರವ(42) ಮೃತ ಕಾನ್‌'ಸ್ಟೇಬಲ್‌. ಈತನ ವಿರುದ್ಧ ಮಹಿಳೆಯೊಬ್ಬರು ಸ್ನಾನ ಮಾಡುವಾಗ ಮೊಬೈಲ್‌'ನಲ್ಲಿ ದೃಶ್ಯ ಸೆರೆಹಿಡಿದ ಆರೋಪದಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

ಆರೋಪಿಯನ್ನು ಬಂಧಿಸಿದ್ದ ಪೊಲೀಸರು ಮಂಗಳೂರು ನ್ಯಾಯಾಲಯ ಕಟ್ಟಡದ 3ನೇ ಮಹಡಿಯಲ್ಲಿರುವ 2ನೇ ಹೆಚ್ಚುವರಿ ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆತಂದಿದ್ದರು. ಆದರೆ, ಲಿಫ್ಟ್‌ನಲ್ಲಿ ಕರೆತರುವಾಗ ಆಕಸ್ಮಿಕವಾಗಿ ಲಿಫ್ಟ್‌ 4ನೇ ಮಹಡಿಗೆ ಬಂದು ನಿಂತಿತ್ತು. ಈ ವೇಳೆ ಲಿಫ್ಟ್‌'ನಿಂದ ಹೊರಬಂದ ಪ್ರವೀಣ ಏಕಾಏಕಿ ಮೆಟ್ಟಿಲಿನಿಂದ 2ನೇ ಮಹಡಿಯ ಮೆಟ್ಟಿಲಿಗೆ ಜಿಗಿದಿದ್ದಾನೆ. ಈ ವೇಳೆ ಆತನ ಕಾಲಿಗೆ ಗಂಭೀರವಾದ ಗಾಯವಾಗಿದೆ. ತಕ್ಷಣ ಆತನನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಹೃದಯಾಘಾತದಿಂದ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾನೆ.

ಬಜಪೆ ಠಾಣೆಯ ಹೆಡ್‌ಕಾನ್‌'ಸ್ಟೇಬಲ್‌ ಆಗಿದ್ದ ಪ್ರವೀಣ್‌ ಇಲ್ಲಿನ ಸುಂಕದಕಟ್ಟೆಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಪಕ್ಕದ ಮನೆಯ ಮಹಿಳೆ ಸ್ನಾನ ಮಾಡುವಾಗ ಆ ದೃಶ್ಯವನ್ನು ಮೊಬೈಲ್‌'ನಲ್ಲಿ ಸೆರೆ ಹಿಡಿದಿದ್ದ. ಈ ಸಂಬಂಧ ಆತನನ್ನು ಬಂಧಿಸಿದ್ದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾಗ ಈ ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ
epaper.kannadaprabha.in