ಮತ್ತೆ ಟೋಪಿ ವಿಚಾರ ಮುನ್ನಲೆಗೆ ಬಂದಿದೆ. ಅಲ್ಲದೆ, ಇನ್ನೂ ಹೆಚ್ಚಿನ ಗುಣಮಟ್ಟವುಳ್ಳ ಸಮವಸ್ತ್ರಗಳನ್ನು ನೀಡಲು ಪೊಲೀಸ್ ಇಲಾಖೆ ನಿರ್ಧರಿಸಿದೆ. ಸದ್ಯದಲ್ಲೆ ಪೊಲೀಸ್ ಪೇದೆಗಳಿಗೆ ಹೊಸ ಮಾದರಿಯ ಪಿ-ಕ್ಯಾಪ್ಧರಿಸಲು ಅವಕಾಶ ಕಲ್ಪಿಸಬಹುದು ಎನ್ನಲಾಗಿದೆ.
ಬೆಂಗಳೂರು : ರಾಜ್ಯ ಪೊಲೀಸ್ ಇಲಾಖೆಯಲ್ಲಿ ತಮಿಳುನಾಡು ಪೊಲೀಸರ ಮಾದರಿಯಲ್ಲಿ ಕಾನ್‌ಸ್ಟೇಬಲ್‌ಗಳು ಧರಿಸುವ ಸಮವಸ್ತ್ರ ಮತ್ತು ಟೋಪಿ ಬದಲಾವಣೆ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ನೃಪತುಂಗ ರಸ್ತೆಯ ರಾಜ್ಯ ಪೊಲೀಸ್ ಕೇಂದ್ರ ಕಚೇರಿಯಲ್ಲಿ ಶನಿವಾರ ನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲಿ, ಪೊಲೀಸರ ಟೋಪಿ ಬದಲಾವಣೆ ಸಂಗತಿ ಕುರಿತು ಸಮಾಲೋಚನೆ ನಡೆದಿದೆ.
ಕಾನ್‌ಸ್ಟೇಬಲ್‌ಗಳು ಸ್ಲೊಚಾಟ್ ಕ್ಯಾಪ್ ಧರಿಸುತ್ತಿರುವುದರಿಂದ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ಕೆಲವು ಅಧ್ಯಯನ ವರದಿಗಳು ಸಲ್ಲಿಕೆಯಾಗಿದ್ದವು. ಈ ಹಿನ್ನೆಲೆಯಲ್ಲಿ ಇಲಾಖೆಯು, ತಮಿಳುನಾಡು ಮಾದರಿಯಲ್ಲಿ ಪಿ-ಕ್ಯಾಪ್ ಬಳಕೆಗೆ ಚಿಂತನೆ ನಡೆಸಿತ್ತು. ಅಲ್ಲದೆ ಡಾ.ಜಿ.ಪರಮೇಶ್ವರ್ ಅವರು ಮೊದಲ ಬಾರಿ ಗೃಹ ಸಚಿವರಾಗಿದ್ದಾಗ ಸಹ ಪೊಲೀಸರ ಟೋಪಿ ಬದಲಾವಣೆಗೆ ಒಲವು ವ್ಯಕ್ತಪಡಿಸಿದ್ದರು.
ಆದರೆ ಆನಂತರ ಕೆಲ ದಿನಗಳ ಚರ್ಚೆ ನಡೆದು ತಣ್ಣಗಾಯಿತು. ಈಗ ಮತ್ತೆ ಟೋಪಿ ವಿಚಾರ ಮುನ್ನಲೆಗೆ ಬಂದಿದೆ. ಅಲ್ಲದೆ, ಇನ್ನೂ ಹೆಚ್ಚಿನ ಗುಣಮಟ್ಟವುಳ್ಳ ಸಮವಸ್ತ್ರಗಳನ್ನು ನೀಡಲು ಪೊಲೀಸ್ ಇಲಾಖೆ ನಿರ್ಧರಿಸಿದೆ. ಸದ್ಯದಲ್ಲೆ ಪೊಲೀಸ್ ಪೇದೆಗಳಿಗೆ ಹೊಸ ಮಾದರಿಯ ಪಿ-ಕ್ಯಾಪ್ ಧರಿಸಲು ಅವಕಾಶ ಕಲ್ಪಿಸಬಹುದು ಎನ್ನಲಾಗಿದೆ. ಅಲ್ಲದೆ, ಡಿಜಿಪಿ ಕಚೇರಿಯಲ್ಲಿ ಪ್ರಾಯೋಗಿಕವಾಗಿ ಪಿ-ಕ್ಯಾಪ್ ಧರಿಸಿರುವ ಪೋಟೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.
ಕಾನೂನು ಪ್ರಕಾರ ಪೊಲೀಸ್ ಸಮವಸ್ತ್ರ ಅಥವಾ ಟೋಪಿ ಬದಲಾವಣೆ ಬಗ್ಗೆ ಇಲಾಖೆ ನಿರ್ಧಾರ ತೆಗೆದುಕೊಳ್ಳಲು ಬರುವುದಿಲ್ಲ. ಇದಕ್ಕಾಗಿ ಪೊಲೀಸ್ ಕಾಯ್ದೆ ತಿದ್ದುಪಡಿ ಮಾಡಬೇಕಿದ್ದು, ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಪ್ರಸ್ತಾಪನೆ ಸಲ್ಲಿಸಬಹುದು. ಅಂತಿಮವಾಗಿ ಈ ಸಂಬಂಧ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಕನ್ನಡಪ್ರಭಕ್ಕೆ ಹೇಳಿದ್ದಾರೆ.
