ನವದೆಹಲಿ(ನ.02): ದೆಹಲಿಯ ತೀಸ್ ಹಜಾರಿ ಕೋರ್ಟ್ ಆವರಣದಲ್ಲಿ ಪೊಲೀಸರು ಹಾಗೂ ವಕೀಲರ ನಡುವೆ ಘರ್ಷಣೆ ಸಂಭವಿಸಿದೆ. 

ವಾಹನ ಪಾರ್ಕಿಂಗ್​​ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತು ವಕೀಲರ ಮಧ್ಯೆ ವಾಗ್ವಾದ ನಡೆದಿದೆ ಎನ್ನಲಾಗಿದ್ದು, ಘರ್ಷಣೆಯಲ್ಲಿ ಇಬ್ಬರು ವಕೀಲರು ತೀವ್ರವಾಗಿ ಗಾಯಗೊಂಡಿದ್ದಾರೆ. 

ಅಲ್ಲದೇ ರೊಚ್ಚಿಗೆದ್ದ ವಕೀಲರ ಗುಂಪು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ. ಇನ್ನು ಪೊಲೀಸರು ತಮ್ಮ ಮೇಲೆ ಗುಂಡು ಹಾರಿಸಿದ್ದಾರೆ ಎಂದು ವಕೀಲರು ಆರೋಪಿಸಿದ್ದು, ಈ ಆರೋಪವನ್ನು ಪೊಲಿಸರು ನಿರಾಕರಿಸಿದ್ದಾರೆ.

ಪೊಲೀಸರ ಗುಂಡಿನ ದಾಳಿಯಲ್ಲಿ ತಮ್ಮ ಇಬ್ಬರು ಸಹೋದ್ಯೋಗಿಗಳು ಗಾಯಗೊಂಡಿದ್ದಾರೆ ಎಂದು ವಕೀಲರು ಆರೋಪಿಸಿದ್ದಾರೆ. ಆದರೆ ವಕೀಲರ ಆರೋಪವನ್ನು ತಳ್ಳಿಹಾಕಿರುವ ಪೊಲೀಸರು, ತಾವು ಗುಂಡು ಹಾರಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

ನ್ಯಾಯಾಲಯದ ಸಂಕೀರ್ಣದಲ್ಲಿನ ವಾಹನ ಪಾರ್ಕಿಂಗ್ ವಿಷಯದಲ್ಲಿ ಪೊಲೀಸರ ಮತ್ತು ವಕೀಲರ ನಡುವೆ ಘರ್ಷಣೆ ನಡೆದಿದೆ ಎಂದು ತಿಳಿದುಬಂದಿದೆ. ಈ ವೇಳೆ ವಾಗ್ವಾದ ಹಿಂಸಾಚಾರಕ್ಕೆ ತಿರುಗಿದ್ದು, ಪೊಲೀಸರು ಮತ್ತು ವಕೀಲರು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಸ್ಥಳಕ್ಕೆ ಐದು ಅಗ್ನಿ ಶಾಮಕ ವಾಹನಗಳು ಆಗಮಿಸಿದ್ದು, ವಾಹನಕ್ಕೆ ಹಚ್ಚಿದ್ದ ಬೆಂಕಿ ನಂದಿಯುವ ಕಾರ್ಯದಲ್ಲಿ ತೊಡಗಿವೆ. ಅಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ನ್ಯಾಯಲಯದ ಆವರಣದಲ್ಲಿ ಜಮಾಯಿಸಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ತರುವ ಕಾರ್ಯದಲ್ಲಿ ನಿರತಾಗಿದ್ದಾರೆ.