ಇತ್ತೀಚಿಗೆ ಬಿಟಿಎಂ ಲೇಔಟ್‌ನಲ್ಲಿ ಬೈಕ್ ಕಳ್ಳತನಕ್ಕೆ ಯತ್ನಿಸುತ್ತಿದ್ದ ಅರುಣ್ ಸಾಯಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ. ಆತನನ್ನು ಠಾಣೆಗೆ ಕರೆ ತಂದು ತೀವ್ರವಾಗಿ ಪ್ರಶ್ನಿಸಿದಾಗ ಯ್ಯೂಟ್ಯೂಬ್ ಕಳ್ಳತನ ತಂತ್ರದ ರಹಸ್ಯ ಬಯಲಾಯಿತು
ಬೆಂಗಳೂರು(ಜೂ.02): ಆ ವಿದ್ಯಾರ್ಥಿಗಳಿಗೆ ಮೋಜಿನ ಜೀವನದ ವ್ಯಾಮೋಹ. ಆದರೆ, ಮನೆಯಲ್ಲಿ ಅವರಿಗೆ ಬಿಡಿಗಾಸು ಸಿಗುತ್ತಿರಲಿಲ್ಲ. ಇದಕ್ಕಾಗಿ‘ಯ್ಯೂಟ್ಯೂಬ್’ನಲ್ಲಿ ಬೈಕ್ ಕಳ್ಳತನದ ತಂತ್ರಗಾರಿಕೆ ಕಲಿತು ಬೈಕ್ ಕಳವು ಮಾಡಿ ತಮಿಳುನಾಡಿನಲ್ಲಿ ಮಾರುತ್ತಿದ್ದ ನಾಲ್ವರನ್ನು ಚಿಂದಿ ಆಯುವವರ ಮಾರು ವೇಷದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ದೊಡ್ಡ ನಾಗಮಂಗಲದ ಪ್ರಭು, ಅರುಣ್ಸಾಯಿ, ಕಾರ್ತಿಕ್ ಹಾಗೂ ಮತ್ತೊಬ್ಬ 17 ವರ್ಷದ ಬಾಲಕ ಬಂಧಿತರಾಗಿದ್ದು, ಆರೋಪಿಗಳಿಂದ 30 ಲಕ್ಷ ರುಪಾಯಿ ಮೌಲ್ಯದ 28 ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಡಾ. ಬೋರಲಿಂಗಯ್ಯ ತಿಳಿಸಿದರು.
ಇತ್ತೀಚಿಗೆ ಬಿಟಿಎಂ ಲೇಔಟ್ನಲ್ಲಿ ಬೈಕ್ ಕಳ್ಳತನಕ್ಕೆ ಯತ್ನಿಸುತ್ತಿದ್ದ ಅರುಣ್ ಸಾಯಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ. ಆತನನ್ನು ಠಾಣೆಗೆ ಕರೆ ತಂದು ತೀವ್ರವಾಗಿ ಪ್ರಶ್ನಿಸಿದಾಗ ಯ್ಯೂಟ್ಯೂಬ್ ಕಳ್ಳತನ ತಂತ್ರದ ರಹಸ್ಯ ಬಯಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಭು ಮೂಲತಃ ತಮಿಳುನಾಡಿನವನಾಗಿದ್ದು, ಉದ್ಯೋಗ ಅರಸಿಕೊಂಡು ಎರಡು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ. ದೊಡ್ಡನಾಗಮಂಗಲದಲ್ಲಿ ನೆಲೆಸಿದ್ದ ಆತ ಆಡುಗೋಡಿ ಹತ್ತಿರದ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ. ಇನ್ನು ಅರುಣ್ ಹಾಗೂ ಕಾರ್ತಿಕ ಖಾಸಗಿ ಕಾಲೇಜಿನಲ್ಲಿ ಬಿ.ಕಾಂ. ವ್ಯಾಸಂಗ ಮಾಡುತ್ತಿದ್ದರು. ಮತ್ತೊಬ್ಬ ಪಿಯು ವಿದ್ಯಾರ್ಥಿ. ಒಂದೇ ಏರಿಯಾದಲ್ಲಿ ನೆಲೆಸಿದ್ದರಿಂದ ಈ ನಾಲ್ವರಿಗೆ ಸ್ನೇಹವಾಗಿತ್ತು. ಈ ಗೆಳೆಯರು ವ್ಹೀಲಿಂಗ್ ಹಾಗೂ ಡ್ರ್ಯಾಗ್ ರೇಸ್ ಕಲಿತು, ರಾತ್ರಿ ವೇಳೆ ಬೈಕ್ನಲ್ಲಿ ಜಾಲಿ ರೈಡ್ಗೆ ಹೋಗುತ್ತಿದ್ದರು.
ಹೀಗೆ ದಿನ ಕಳೆದಂತೆ ವಿಲಾಸಿ ಜೀವನದ ವ್ಯಾಮೋಹಕ್ಕೊಳಗಾದ ಅವರಿಗೆ ದುಬಾರಿ ಮೌಲ್ಯದ ಬೈಕ್ಗಳ ಮೇಲೆ ಆಸೆ ಮೂಡಿತು. ಆದರೆ, ಜೇಬಿನಲ್ಲಿ ಬಿಡಿಗಾಸು ಇಲ್ಲ. ಇತ್ತ ಹೆತ್ತವರು ಕೂಲಿ ಕಾರ್ಮಿಕರಾಗಿದ್ದರಿಂದ ತಮ್ಮ ಬಯಕೆಗಳು ಈಡೇರಿಸಿಕೊಳ್ಳುವುದು ಕಷ್ಟ ಎಂದು ತಿಳಿದ ಅವರು, ಕೊನೆಗೆ ಕಳ್ಳ ಹಾದಿ ತುಳಿದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬೈಕ್ ಕಳ್ಳತನ ನಿರ್ಧರಿಸಿದ ಗೆಳೆಯರು, ಇದಕ್ಕಾಗಿ ಯ್ಯೂಟ್ಯೂಬ್ನಲ್ಲಿ ದೇಶ-ವಿದೇಶದಲ್ಲಿ ಯಾವ ರೀತಿ ವಾಹನಗಳನ್ನು ಕಳವು ಮಾಡುತ್ತಾರೆ ಹಾಗೂ ಅವುಗಳನ್ನು ಹೇಗೆಲ್ಲ ಕಳ್ಳರು ಮಾರಾಟ ಮಾಡುತ್ತಾರೆ ಎಂಬುದನ್ನು ವೀಕ್ಷಿಸಿದರು. ಹೀಗೆ ಕಳ್ಳತನ ತಂತ್ರಗಾರಿಕೆ ಕಲಿತ ಅವರು, ಆನಂತರ ಆಗ್ನೇಯ ವಿಭಾಗದಲ್ಲಿ ಮುಂಜಾನೆ ಹೊತ್ತಿನಲ್ಲಿ ಕಾರ್ಯಾಚರಣೆ ನಡೆಸಿದ್ದರು.
ಕೋರಮಂಗಲ, ಮಡಿವಾಳ, ಎಲೆಕ್ಟ್ರಾನಿಕ್ ಸಿಟಿ, ಎಚ್ಎಸ್ಆರ್ ಲೇಔಟ್ ಹಾಗೂ ಪರಪ್ಪನ ಸುತ್ತಮುತ್ತ ಪಿಜಿ ಕಟ್ಟಡಗಳ ಸಂಖ್ಯೆ ಹೆಚ್ಚಿದೆ. ಇಲ್ಲೆಲ್ಲ ಬೈಕ್ಗಳನ್ನು ಹೊರಗಡೆಯೇ ನಿಲ್ಲಿಸುತ್ತಾರೆ. ಅದರಲ್ಲೂ ಈ ಪ್ರದೇಶದಲ್ಲಿ ಸಾಫ್ಟ್ವೇರ್ ಕಂಪನಿ ಉದ್ಯೋಗಿಗಳು ಹೆಚ್ಚಿದ್ದಾರೆ. ಸಾಮಾನ್ಯವಾಗಿ ಕಂಪನಿಯಿಂದ ತಡರಾತ್ರಿ ಬಂದು ನಿದ್ರೆಗೆ ಜಾರುತ್ತಿದ್ದ ಅವರಿಗೆ ಮಧ್ಯಾಹ್ನ ಬಳಿಕವೇ ಬೆಳಗಾಗುತ್ತದೆ. ಹೀಗಾಗಿ ಬೆಳಗಿನ ಜಾವ 3 ರಿಂದ 6 ಗಂಟೆ ನಡುವೆ ಕಳ್ಳತನ ಮಾಡುತ್ತಿದ್ದೆವು ಎಂದು ಆರೋಪಿಗಳು ಹೇಳಿಕೆ ಕೊಟ್ಟಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ನಾವು ನಾಲ್ವರು ಪ್ರತ್ಯೇಕವಾಗಿ ರಸ್ತೆಗಳಿಗೆ ತೆರಳುತ್ತಿದ್ದೆವು. ಬೈಕ್ನ ಹ್ಯಾಂಡಲ್ ಲಾಕ್ ಮುರಿದು, ನಂತರ ಅದರ ಇಗ್ನೇಷನ್ ವೈರ್ ಕತ್ತರಿಸಿ, ಬಳಿಕ ವೈರ್ ಡೈರೆಕ್ಟ್ ಮಾಡಿಕೊಂಡು ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದೆವು. ವಾರದಲ್ಲಿ ಒಂದು ಬಾರಿ ಕಳ್ಳತನ ಮಾಡುತ್ತಿದ್ದು, ಆರು ತಿಂಗಳಲ್ಲಿ ೫೦ಕ್ಕೂ ಹೆಚ್ಚು ಬೈಕ್ಗಳನ್ನು ಕದ್ದಿದ್ದೇವೆ ಎಂದು ಆರೋಪಿಗಳು ಹೇಳಿದ್ದಾರೆ ಎನ್ನಲಾಗಿದೆ.
10 ಸಾವಿರಕ್ಕೆ ಬುಲೆಟ್ ಮಾರಾಟ!
ರಾಜಧಾನಿಯಲ್ಲಿ ಕಳವು ಮಾಡಿದ ಬೈಕ್ಗಳನ್ನು ಆರೋಪಿಗಳು, ತಮಿಳುನಾಡಿನ ವೇಲೂರು ಹಾಗೂ ಅಂಬೂರಿನಲ್ಲಿರುವ ತಮ್ಮ ಪರಿಚಿತರಿಗೆ ಕಡಿಮೆ ಬೆಲೆಗೆ ಮಾರುತ್ತಿದ್ದರು.ಈ ಬೈಕ್ಗಳು ಬೆಂಗಳೂರಿನಲ್ಲಿ ಫೈನಾನ್ಸ್ ನವರು ಜಪ್ತಿ ಮಾಡಿದ್ದರು. ಈಗ ಮುಂಗಡವಾಗಿ ೧೦ ಸಾವಿರ ಕೊಡಿ. ದಾಖಲಾತಿ ತಂದು ಕೊಟ್ಟು, ಉಳಿದ ಹಣ ಪಡೆದುಕೊಳ್ಳುತ್ತೇವೆ ಎಂದು ನಂಬಿಸಿ ಅವರು ವಾಹನಗಳನ್ನು ಮಾರುತ್ತಿದ್ದರು. 1.5 ಲಕ್ಷ ರು. ಮೌಲ್ಯದ ಬುಲೆಟ್ ಬೈಕ್ಅನ್ನು ಕೇವಲ 10 ಸಾವಿರ ರು.ಗೆ ಕೊಟ್ಟಿದ್ದರು. ವಾರಕ್ಕೊಮ್ಮೆ ಬೈಕ್ ಮಾರಾಟ ಮಾಡಿ ಬಂದ ಹಣದಲ್ಲಿ ಕೇರಳ, ಪುದುಚೇರಿ, ಮೈಸೂರು ಸೇರಿದಂತೆ ವಿವಿಧ ಪ್ರವಾಸಿ ತಾಣಗಳಲ್ಲಿ ಸುತ್ತಾಡಿ ಮೋಜು ಮಸ್ತಿ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಬೈಕ್ ಕಳ್ಳರಿಗೆ ಚಿಂದಿ ಆಯ್ದುಗಾಳ ಹಾಕಿದ ಪೊಲೀಸರು
ಕೆಲ ದಿನಗಳಿಂದ ‘ಸರಣಿ ಬೈಕ್’ ಕಳ್ಳತನ ಕೃತ್ಯಗಳ ಹಿನ್ನೆಲೆಯಲ್ಲಿ ಎಚ್ಚೆತ್ತ ಆಗ್ನೇಯ ವಿಭಾಗದ ಡಿಸಿಪಿ, ಖದೀಮರ ಪತ್ತೆಗೆ 24 ಸಿಬ್ಬಂದಿ ಒಳಗೊಂಡ ಮೂರು ವಿಶೇಷ ತಂಡಗಳನ್ನು ರಚಿಸಿದ್ದರು. ಮೊದಲು ಕಳ್ಳತನ ನಡೆದ ಸ್ಥಳಗಳ ಸಿಸಿಟೀವಿ ಕ್ಯಾಮೆರಾ ಪರಿಶೀಲಿಸಿದರೂ ಸ್ಪಷ್ಟ ಸುಳಿವು ಸಿಗಲಿಲ್ಲ. ಆಗ ಯಾವ್ಯಾವ ರಸ್ತೆಗಳಲಿ ಹಾಗೂ ಯಾವ ವೇಳೆಯಲ್ಲಿ ಬೈಕ್ ಕಳ್ಳತನ ನಡೆದಿದೆ ಎಂಬ ಮಾಹಿತಿ ಅಧ್ಯಯನ ನಡೆಸಿದ್ದೆವು. ಆಗ ಮುಂಜಾನೆ 3 ರಿಂದ 6 ಗಂಟೆ ನಡುವೆಯೇ ಎಲ್ಲಾ ವಾಹನಗಳು ಕಳ್ಳತನವಾಗಿರುವುದು ಗೊತ್ತಾಯಿತು. ಈ ಮಾಹಿತಿ ಸಿಕ್ಕಿದ ಕೂಡಲೇ ಆ ಬೈಕ್ ಕಳ್ಳತನ ಪ್ರದೇಶದ ರಸ್ತೆಗಳ ನಕ್ಷೆ ರಚಿಸಿದ ತನಿಖಾ ತಂಡಗಳು, ಆ ರಸ್ತೆಗಳಲ್ಲಿ ಚಿಂದಿ ಆಯುವವರ ಸೋಗಿನಲ್ಲಿ ಸಂಚಾರ ನಡೆಸಿದ್ದರು. ಆಗ ಜೂ 25 ರ ಬೆಳಗ್ಗೆ 5 ಗಂಟೆಗೆ ಬಿಟಿಎಂ ಲೇಔಟ್ನಲ್ಲಿ ಬೈಕ್ ಕಳವಿಗೆ ಯತ್ನಿಸುತ್ತಿದ್ದ ಅರುಣ್ ಸಾಯಿ ಸಿಕ್ಕಿಬಿದ್ದ. ಇನ್ನು ಕಳವು ಮಾಡಿದ ಬೈಕ್ಗಳನ್ನು ತಮಿಳುನಾಡಿಗೆ ಸಾಗಿಸುತ್ತಿದ್ದ ದೃಶ್ಯಗಳು ಅತ್ತಿಬೆಲೆ ಸಮೀಪದ ಟೋಲ್ಗೇಟ್ನ ಸಿಸಿಟೀವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಆದರೆ ಹೆಲ್ಮಟ್ ಧರಿಸಿದ್ದ ಕಾರಣ ಆರೋಪಿಗಳ ಖಚಿತ ಚಹರೆ ಲಭ್ಯವಾಗಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
