ನಮ್ಮ ದೇಶದ ನಿಷೇಧಿತ ನೋಟು ಬದಲಾವಣೆಗೆ ಮಾತ್ರವಲ್ಲ ವಿದೇಶದಲ್ಲಿ ನಿಷೇಧಗೊಂಡಿರುವ ಕರೆನ್ಸಿ ‘ಬ್ಲ್ಯಾಕ್‌ ಆ್ಯಂಡ್‌ ವೈಟ್‌' ದಂಧೆ ಸಹ ಬೆಂಗಳೂರಿನಲ್ಲಿ ಪತ್ತೆಯಾಗಿದ್ದು, ಟರ್ಕಿ ದೇಶದ ನಿಷೇಧಿತ ಕರೆನ್ಸಿ ಬದಲಾವಣೆಗೆ ಯತ್ನಿಸಿದ ಪೊಲೀಸ್‌ ಹೆಡ್‌ ಕಾನ್‌ಸ್ಟೇಬಲ್‌ ಹಾಗೂ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು: ನಮ್ಮ ದೇಶದ ನಿಷೇಧಿತ ನೋಟು ಬದಲಾವಣೆಗೆ ಮಾತ್ರವಲ್ಲ ವಿದೇಶದಲ್ಲಿ ನಿಷೇಧಗೊಂಡಿರುವ ಕರೆನ್ಸಿ ‘ಬ್ಲ್ಯಾಕ್ ಆ್ಯಂಡ್ ವೈಟ್' ದಂಧೆ ಸಹ ಬೆಂಗಳೂರಿನಲ್ಲಿ ಪತ್ತೆಯಾಗಿದ್ದು, ಟರ್ಕಿ ದೇಶದ ನಿಷೇಧಿತ ಕರೆನ್ಸಿ ಬದಲಾವಣೆಗೆ ಯತ್ನಿಸಿದ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಹಾಗೂ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಚಿತ್ರದುರ್ಗದ ಕೋಟೆ ಪೊಲೀಸ್ ಠಾಣೆಯ ಹೆಡ್ಕಾನ್ಸ್ಟೇಬಲ್ ನಾಗರಾಜ್, ಚಿತ್ರದುರ್ಗದ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕ ಶಿವರಾಜ್, ಚಲನಚಿತ್ರ ನಿರ್ಮಾಪಕ ಮುರಳಿ ಹಾಗೂ ದಾವಣಗೆರೆಯ ರಿಯಲ್ ಎಸ್ಟೇಟ್ ಉದ್ಯಮಿ ಅರವಿಂದ್ ಪ್ರಸಾದ್ ಬಂಧಿತರು. ಈ ದಾಳಿ ವೇಳೆ ತಪ್ಪಿಸಿಕೊಂಡಿರುವ ಪ್ರಮುಖ ಆರೋಪಿ ತೆಲಂಗಾಣದ ಚನ್ನಕೇಶವರೆಡ್ಡಿ ಪತ್ತೆಗೆ ತನಿಖೆ ಮುಂದುವರಿದಿದೆ.
ಭಾರತದಲ್ಲಿ ಗರಿಷ್ಠ ನೋಟುಗಳನ್ನು ರದ್ದುಗೊಂಡಿರುವ ರೀತಿಯಲ್ಲೇ 2015ರಲ್ಲಿ ಟರ್ಕಿ ದೇಶವು ಸಹ, 5 ಲಕ್ಷ ಮುಖಬೆಲೆಯ ಲಿರಾ ನೋಟುಗಳನ್ನು ಅಮಾನ್ಯಗೊಳಿಸಿದೆ. ಆದರೆ, ಆ ನೋಟುಗಳ ಬದಲಾವಣೆಗೆ ಅಲ್ಲಿನ ಸರ್ಕಾರವು, 2019ರ ಡಿಸೆಂಬರ್ 31ವರೆಗೆ ಗಡುವು ನೀಡಿದೆ. ಇದನ್ನೇ ಕೆಲವರು ದುರುಪಯೋಗಪಡಿಸಿಕೊಂಡಿರಬಹುದು.
ಪ್ರವೀಣ್ ಸೂದ್ ನಗರ ಪೊಲೀಸ್ ಆಯುಕ್ತ
ಈ ಆರೋಪಿಗಳಿಂದ 5 ಲಕ್ಷ ಲಿರಾ (ಟರ್ಕಿ ಕರೆನ್ಸಿ) ಮುಖಬೆಲೆಯ 78 ನೋಟುಗಳನ್ನು (ಇದರ ಭಾರತೀಯ ಮೌಲ್ಯ ಅಂದಾಜು ರೂ.71 ಕೋಟಿ) ಜಪ್ತಿ ಮಾಡಿದ್ದೇವೆ ಎಂದು ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಮಾಹಿತಿ ನೀಡಿದ್ದಾರೆ. ತಮ್ಮ ಪರಿಚಿತ ಉದ್ಯಮಿ ಶಕೀರ್ ಮೂಲಕ ವಿದೇಶಿ ಕರೆನ್ಸಿ ಬದಲಾವಣೆಗೆ ಆರೋಪಿಗಳು ಯತ್ನಿಸಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಮಾರತ್ತಹಳ್ಳಿ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಸೂದ್ ಸುದ್ದಿಗೋಷ್ಠಿಯಲ್ಲಿ ಶ್ಲಾಘಿಸಿದರು.
2007ರಿಂದ 2015ವರೆಗೆ ರಾಜ್ಯ ಆಂತರಿಕ ಭದ್ರತಾ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದ ನಾಗರಾಜ್, ನಂತರ ಚಿತ್ರದುರ್ಗಕ್ಕೆ ವರ್ಗಾವಣೆಗೊಂಡಿದ್ದರು. ಹಣ ಬದಲಾವಣೆಗೆ ಯತ್ನಿಸಿದ್ದ ವೇಳೆ ಮಂಗಳವಾರ ರಾತ್ರಿ ತಮ್ಮನ್ನು ಬಂಧಿಸಲು ಮುಂದಾಗಿದ್ದ ಮಾರತ್ತಹಳ್ಳಿಯ ಕಾನ್ಸ್ಟೇಬಲ್ ತಿಮ್ಮಪ್ಪರಾಜು ಹಣೆಗೆ ಸರ್ವಿಸ್ ಪಿಸ್ತೂಲ್ ಇಟ್ಟು ಗುಂಡು ಹಾರಿಸಲು ಯತ್ನಿಸಿದ್ದರು. ಹೀಗಾಗಿ ಕೊಲೆ ಯತ್ನ ಹಾಗೂ ಶಸ್ತ್ರಾಸ್ತ್ರ ಕಾಯ್ದೆ ಸೆಕ್ಷನ್ 25ರ ಅಡಿಯಲ್ಲೂ ನಾಗರಾಜ್ ವಿರುದ್ಧ ಪ್ರಕರಣ ದಾಖಲಾಗಿದೆ ಎಂದರು.
