ಮಂಗಳೂರು[ಏ.26]: ಮಂಗಳೂರು ಸೇರಿ ಕರಾವಳಿಯ ಅನೇಕ ಕಡೆ ವಿಷಕಾರಿ ತೈಲ ಮಿಶ್ರಿತ ಡಾಂಬರು ಕಡಲ ದಂಡೆಯುದ್ದಕ್ಕೂ ಶೇಖರಣೆಯಾಗುತ್ತಿರುವ ಆತಂಕಕಾರಿ ವಿದ್ಯಮಾನ ಸಂಭವಿಸುತ್ತಿದೆ. ಇದರಿಂದ ಮೀನೇ ಸಿಗದೆ ಮೀನುಗಾರ ಸಮುದಾಯದಲ್ಲಿ ಆತಂಕ ಆವರಿಸಿದರೆ, ಪರಿಸರ ಪ್ರೇಮಿಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಮಂಗಳೂರಿನ ಪಣಂಬೂರು, ಬೈಕಂಪಾಡಿ, ಸಸಿಹಿತ್ಲು ಸಮುದ್ರ ತೀರದಲ್ಲಿ ಡಾಂಬರು ಉಂಡೆಗಳು ಕಳೆದ ನಾಲ್ಕೈದು ದಿನಗಳಿಂದ ನಿರಂತರವಾಗಿ ಕಂಡುಬರುತ್ತಿದೆ. ಸಮುದ್ರ ನೀರಿನಲ್ಲಿ ತೇಲಿಕೊಂಡು ಬರುವ ಈ ವಿಷಕಾರಿ ಪದಾರ್ಥ ಕಡಲತಡಿಯ ಮರಳಿನ ಮೇಲೆ ಶೇಖರಣೆಯಾಗುತ್ತಿದೆ. ಕಳೆದೆರಡು ದಿನಗಳಂದಂತೂ ಈ ಪ್ರಮಾಣ ಏರುಗತಿಯಲ್ಲಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಹಡಗುಗಳ ಎಂಜಿನ್‌ ಆಯಿಲ್‌?:

ಹಡಗುಗಳಿಂದ ವಿಸರ್ಜಿಸಲಾಗುತ್ತಿರುವ ಎಂಜಿನ್‌ ಆಯಿಲ್‌ ಕಾರಣವಾಗಿರುವ ಸಾಧ್ಯತೆ ದಟ್ಟವಾಗಿದೆ ಎಂದು ಪಣಂಬೂರು ಬೀಚ್‌ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಯ ಯತೀಶ್‌ ಬೈಕಂಪಾಡಿ ಆರೋಪಿಸುತ್ತಾರೆ. ನೂರಾರು ದೊಡ್ಡ ಹಡಗುಗಳು ಸಮುದ್ರದಲ್ಲಿ ಸಂಚರಿಸುತ್ತವೆ. ಇತರ ವಾಹನಗಳಂತೆ ಇಂತಿಷ್ಟುಕಿ.ಮೀ ಓಡಿದ ಮೇಲೆ ಹಡಗುಗಳ ಎಂಜಿನ್‌ ಆಯಿಲ್‌ ಬದಲಾಯಿಸಬೇಕಾಗುತ್ತದೆ. ಎಂಜಿನ್‌ ಆಯಿಲ್‌ ಬದಲಿಸಲು ಬಂದರಿನಲ್ಲಿ ನಿಲ್ಲಿಸಿದರೆ ಶುಲ್ಕ ಕಟ್ಟಬೇಕು. ಹಾಗಾಗಿ ಅವರು ಸಮುದ್ರಕ್ಕೆ ಬಿಡುತ್ತಾರೆ ಎನ್ನುತ್ತಾರೆ.

ಪ್ರವಾಸೋದ್ಯಮಕ್ಕೆ ಧಕ್ಕೆ:

ಮಂಗಳೂರಿನಲ್ಲಿ ಮಾತ್ರವಲ್ಲ, ಉಡುಪಿ, ಕಾರವಾರದಲ್ಲೂ ಇಂಥ ಡಾಂಬರು ಉಂಡೆಗಳನ್ನು ಸಮುದ್ರ ಹೊರಹಾಕುತ್ತಿದೆ ಎನ್ನುವ ಮಾಹಿತಿ ಸಿಕ್ಕಿದೆ. ಬೇಸಗೆ ರಜೆ ಹಿನ್ನೆಲೆಯಲ್ಲಿ ಬೀಚ್‌ಗಳಿಗೆ ಆಗಮಿಸುವ ಜನರ ಸಂಖ್ಯೆಯೂ ಹೆಚ್ಚಿದೆ. ಆದರೆ ಈ ಬೆಳವಣಿಗೆ ಪ್ರವಾಸೋದ್ಯಮಕ್ಕೆ ಧಕ್ಕೆ ಉಂಟುಮಾಡುವಂತಾಗಿದೆ.

ಆದರೆ ಪ್ರವಾಸಿಗರು ಬೀಚ್‌ ಶುದ್ಧ ಇದ್ದರೆ ಮಾತ್ರ ಬರುತ್ತಾರೆ. ಪಣಂಬೂರು ಬೀಚ್‌ನಲ್ಲಿ ನಿತ್ಯವೂ ಈ ವಿಷಕಾರಿ ವಸ್ತುಗಳನ್ನು ತೆಗೆದು ಸ್ವಚ್ಛಗೊಳಿಸುತ್ತೇವೆ. ಇತರ ಬೀಚ್‌ಗಳಲ್ಲಿ ಈ ರೀತಿ ಸಾಧ್ಯವೇ? ಡಾಂಬರು ಕಲ್ಮಶ ಬರೋದು ಇನ್ನೂ ಮುಂದುವರಿದರೆ ಬೀಚ್‌ ಪ್ರವಾಸೋದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಯತೀಶ್‌ ಹೇಳುತ್ತಾರೆ. ಈ ಕುರಿತು ಸೂಕ್ತ ಕ್ರಮಕ್ಕೆ ಜಿಲ್ಲಾಡಳಿತಕ್ಕೂ ಅವರು ಮನವಿ ಸಲ್ಲಿಸಿದ್ದಾರೆ.

ಕೈಗಾರಿಕೆಗಳ ತ್ಯಾಜ್ಯ?:

ಮಂಗಳೂರಿನಲ್ಲಿರುವ ಬೃಹತ್‌ ತೈಲ ಸಂಸ್ಕರಣೆ ಕೈಗಾರಿಕೆಯಿಂದ ಹೊರಸೂಸಲ್ಪಟ್ಟರಾಸಾಯನಿಕಯುಕ್ತ ನೀರು ಸಮುದ್ರ ಸೇರಿ ಬೇಸಗೆ ಸಮಯದಲ್ಲಿ ಡಾಂಬರು ರೂಪದಲ್ಲಿ ಹೊರಬರುತ್ತಿದೆ ಎನ್ನುವ ಆರೋಪವೂ ಮೀನುಗಾರ ಮುಖಂಡರಿಂದ ಕೇಳಿಬಂದಿದೆ. ಈ ಕುರಿತು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗೆ ಕರೆ ಮಾಡಿದರೂ ಅವರು ದೂರವಾಣಿ ಸ್ವೀಕರಿಸಿಲ್ಲ.

ತೀರದಲ್ಲೀಗ ಮೀನೇ ಸಿಗುತ್ತಿಲ್ಲ!

ಸಮುದ್ರ ಕಲುಷಿತಗೊಂಡಿರುವುದರಿಂದ ಈ ಬಾರಿ ಕಡಲ ತೀರದಲ್ಲಿ ಸಾಕಷ್ಟುಮೀನು ಸಿಗದೆ ಮೀನುಗಾರ ಕುಟುಂಬಗಳು ಸಂಕಷ್ಟದಲ್ಲಿವೆ. ನಾಡದೋಣಿ, ಪರ್ಸೀನ್‌ ಬೋಟುಗಳಿಗೆ ಕಳೆದ 2-3 ತಿಂಗಳುಗಳಿಂದ ಮೀನು ಸಿಗುತ್ತಿಲ್ಲ. ಪ್ರತಿ ವರ್ಷ ಏಪ್ರಿಲ್‌-ಮೇ ತಿಂಗಳಲ್ಲಿ ಉತ್ತಮ ಮೀನು ಸಿಗುತ್ತಿತ್ತು. ಬಂಗುಡೆ, ಬೂತಾಯಿಗಳು ದಂಡಿಯಾಗಿ ಸಿಗುತ್ತಿದ್ದವು. ಗುಂಪಾಗಿ ತೆಪ್ಪದಲ್ಲಿ ಬರುವ ಮೀನುಗಳು ಸಿಗುವುದರಿಂದ ಪರ್ಸಿನ್‌ ಬೋಟುಗಳ ಮಾಲೀಕರಿಗೆ ಸಾಕಷ್ಟುಆದಾಯ ಸಿಗುತ್ತಿತ್ತು. ಆದರೆ ಈ ಬಾರಿ ಮೀನು ಸಿಗದೆ ತೀವ್ರ ಸಂಕಷ್ಟಅನುಭವಿಸಬೇಕಾಗಿದೆ ಎಂದು ಮೀನುಗಾರ ಮುಖಂಡ ಮೋಹನ್‌ ಬೆಂಗ್ರೆ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಸಮುದ್ರ ಕಲುಷಿತವಾದರೆ ಮೀನುಗಳಿಗೆ ಕಿರಿಕಿರಿಯಾಗುತ್ತದೆ. ಇದರಿಂದಾಗಿ ಗುಂಪಿನಲ್ಲಿ ವಾಸಿಸುವ ಬಂಗುಡೆ, ಬೂತಾಯಿ ಮೀನುಗಳು ಬೇರೆ ಕಡೆಗಳಿಗೆ ವಲಸೆ ಹೋಗುತ್ತವೆ. ಈಗಲೂ ಹೀಗೆಯೇ ಆಗಿದೆ ಎಂದು ಅವರು ವಿಷಾದಿಸಿದರು. ಮೀನು ಪ್ರಮಾಣ ಇಳಿಮುಖವಾಗಿರುವುದರಿಂದ ದರ ಗಗನಕ್ಕೇರಿದೆ.