ನವದೆಹಲಿ[ಜು.17]: ಸಂಸತ್ತಿನ ಕಲಾಪಗಳಿಂದ ದೂರ ಉಳಿಯುವ ಸಂಸದರಿಗೆ ಬಿಸಿ ಮುಟ್ಟಿಸಿಕೊಂಡು ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಇದೀಗ ಸದನಕ್ಕೆ ಚಕ್ಕರ್‌ ಹೊಡೆಯುವ ಕೇಂದ್ರ ಸಚಿವರತ್ತ ಚಾಟಿ ಬೀಸಿದ್ದಾರೆ. ಸಂಸತ್ತಿನ ಕಲಾಪ ವೇಳೆ ರೋಸ್ಟರ್‌ ಪಟ್ಟಿಯಲ್ಲಿ ಹೆಸರಿದ್ದರೂ ಗೈರು ಹಾಜರಾಗುವ ಮಂತ್ರಿಗಳ ವಿರುದ್ಧ ಕೆಂಡಕಾರಿರುವ ಅವರು, ಅಂತಹ ಸಚಿವರ ಪಟ್ಟಿಯನ್ನು ಸಂಜೆಯೊಳಗೆ ತಯಾರಿಸುವಂತೆ ಪಕ್ಷದ ನಾಯಕರಿಗೆ ಸೂಚನೆ ನೀಡಿದ್ದಾರೆ.

ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಮಂಗಳವಾರ ಮಾತನಾಡಿದ ಪ್ರಧಾನಿ, ಕಲಾಪಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎನ್ನುವ ಸಂಸದರು ಆ ಬಗ್ಗೆ ಮೊದಲೇ ಮಾಹಿತಿ ನೀಡಿ ಹೋಗಬೇಕು ಎಂದು ತಾಕೀತು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜನರ ದೃಷ್ಟಿಯಲ್ಲಿ ಮೊದಲ ಭಾವನೆಯೇ ಕೊನೆಯ ಭಾವನೆಯೂ ಆಗಿರುತ್ತದೆ ಎಂದು ಹೇಳಿದ ಅವರು, ಕ್ಷೇತ್ರದ ಅಭಿವೃದ್ಧಿಗೆ ನೂತನ ಸಂಸದರು ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ರಾಜ್ಯಸಭೆ ಹಾಗೂ ಲೋಕಸಭೆ ಕಲಾಪಗಳ ಸಂಸದರ್ಭದಲ್ಲಿ ಸಚಿವರಿಗೆ ನಿತ್ಯ 2 ತಾಸು ಸಂಸತ್ತಿನಲ್ಲಿ ಕರ್ತವ್ಯವಿರುತ್ತದೆ. ಸಂಬಂಧಿಸಿದ ಸಚಿವರು ಗೈರು ಹಾಜರಾದರೆ ಪ್ರತಿಪಕ್ಷಗಳು ನೇರವಾಗಿ ಪ್ರಧಾನಿಗೇ ಪತ್ರ ಬರೆಯುತ್ತವೆ. ಈ ಹಿನ್ನೆಲೆಯಲ್ಲಿ ಮೋದಿ ಈ ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಕುಷ್ಠ, ಕ್ಷಯ ವಿರುದ್ಧ ಹೋರಾಡಿ:

ಅಭಿವೃದ್ಧಿ ವಿಚಾರದಲ್ಲಿ ನಾಯಕತ್ವ ಪಾತ್ರ ನಿರ್ವಹಿಸುವ ಮೂಲಕ ಸ್ವಕ್ಷೇತ್ರಗಳ ಏಳ್ಗೆಗೆ ಸಂಸದರು ಶ್ರಮಿಸಬೇಕು. ಕುಷ್ಠರೋಗ ಹಾಗೂ ಕ್ಷಯ ರೋಗಗಳ ನಿರ್ಮೂಲನೆಯನ್ನು ಅಭಿಯಾನದ ರೀತಿ ನಡೆಸಬೇಕು ಎಂದು ಸಂಸದೀಯ ಪಕ್ಷದ ಸಭೆಯಲ್ಲಿ ಮೋದಿ ಸಲಹೆ ಮಾಡಿದರು ಎಂದು ಸಭೆಯ ನಂತರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಅವರು ಸುದ್ದಿಗಾರರಿಗೆ ತಿಳಿಸಿದರು.

ಒಮ್ಮೆ ಕುಷ್ಠರೋಗ ಆಸ್ಪತ್ರೆ ಉದ್ಘಾಟನೆಗೆ ಗಾಂಧಿ ಅವರಿಗೆ ಆಹ್ವಾನ ಬಂದಿತ್ತು. ಕುಷ್ಠರೋಗ ಆಸ್ಪತ್ರೆ ಉದ್ಘಾಟಿಸುವ ಬದಲು ಅದಕ್ಕೆ ಬೀಗ ಹಾಕಲು ಆಹ್ವಾನಿಸಿ ಎಂದು ಹೇಳುವ ಮೂಲಕ ಗಾಂಧೀಜಿ ರೋಗ ನಿರ್ಮೂಲನೆಯ ಅಗತ್ಯದ ಬಗ್ಗೆ ಪ್ರತಿಪಾದಿಸಿದ್ದಾರೆ. 2030ರೊಳಗೆ ಕ್ಷಯ ರೋಗವನ್ನು ನಿರ್ಮೂಲನೆ ಮಾಡಬೇಕು ಎಂದು ಜಾಗತಿಕವಾಗಿ ಗಡುವು ಹಾಕಿಕೊಳ್ಳಲಾಗಿದೆ. ಭಾರತ ಆ ಗಡುವನ್ನು 2025ಕ್ಕೇ ನಿಗದಿಪಡಿಸಿಕೊಂಡಿದೆ ಎಂದು ಮೋದಿ ಅವರು ವಿವರಿಸಿದರು ಎಂದು ಮಾಹಿತಿ ನೀಡಿದರು.