ಬೋಗಿಬೀಲ್‌ : ವ್ಯೂಹಾತ್ಮಕವಾಗಿ ಅತ್ಯಂತ ಮಹತ್ವದ್ದು, ಏಷ್ಯಾದ 2ನೇ ಅತಿ ಉದ್ದನೆಯ, ಭಾರತದ ಅತಿ ಉದ್ದನೆಯ ಎಂಬ ಹಿರಿಮೆಗೆ ಪಾತ್ರವಾಗಿರುವ ಅಸ್ಸಾಂನ ಬೋಗಿಬೀಲ್‌ ರೈಲು-ರಸ್ತೆ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಲೋಕಾರ್ಪಣೆ ಮಾಡಲಿದ್ದಾರೆ.

4.94 ಕಿ.ಮೀ ಉದ್ದದ ಈ ರೈಲ್ವೆ ಸೇತುವೆಯಿಂದಾಗಿ ಅಸ್ಸಾಂನ ತಿನ್‌ಸುಕಿಯಾ ಮತ್ತು ಅರುಣಾಚಲಪ್ರದೇಶದ ನಹರ್‌ಲಗೂನ್‌ ಪಟ್ಟಣದ ನಡುವಿನ ಸಂಚಾರದ ಅವಧಿ 10 ಗಂಟೆಗಳಷ್ಟುಕಡಿಮೆಯಾಗಲಿದೆ. ಪ್ರಸಕ್ತ ಈ ಎರಡು ನಗರಗಳ ನಡುವಿನ ಸಂಚಾರಕ್ಕೆ ಹಲವು ರೈಲುಗಳನ್ನು ಬದಲಿಸಿ ಹೋಗಲು 15-20 ಗಂಟೆ ಹಿಡಿಯುತ್ತದೆ. ಆದರೆ ಹೊಸ ಮಾರ್ಗದಿಂದಾಗಿ ಕೇವಲ 5 ಗಂಟೆಯಲ್ಲೇ ತಲುಪಬಹುದು.

ಇದೆಲ್ಲಕ್ಕಿಂತ ಹೆಚ್ಚಾಗಿ ಚೀನಾ ಗಡಿಗೆ ಹೊಂದಿಕೊಂಡಿರುವ ಅರುಣಾಚಲಪ್ರದೇಶದ ಗಡಿ ಭಾಗಕ್ಕೆ ಅಗತ್ಯವಾದಲ್ಲಿ ಅತ್ಯಂತ ತ್ವರಿತವಾಗಿ ಯೋಧರು ಮತ್ತು ಸೇನಾ ಉಪಕರಣಗಳನ್ನು ರವಾನಿಸಬಹುದಾಗಿದೆ. ಅಲ್ಲದೆ, ಸೇತುವೆಯ ಮೇಲೆ ಮೂರು ಕಡೆ ಏರ್‌ಸ್ಟ್ರಿಪ್‌ಗಳನ್ನು ಗುರುತಿಸಲಾಗಿದ್ದು, ಅಗತ್ಯ ಸಂದರ್ಭದಲ್ಲಿ ಇಲ್ಲಿ ಯುದ್ಧ ವಿಮಾನಗಳನ್ನು ಕೂಡಾ ಇಳಿಸಬಹುದಾಗಿದೆ.

ಗೌಡರಿಂದ ಶಂಕು: ಬೋಗಿಬೀಲ್‌ ರೈಲು-ರಸ್ತೆ ಯೋಜನೆಗೆ 1997ರ ಜ.22ರಂದು ಆಗಿನ ಪ್ರಧಾನಿ ಎಚ್‌.ಡಿ.ದೇವೇಗೌಡ ಶಂಕುಸ್ಥಾಪನೆ ನೆರವೇರಿಸಿದ್ದರು. ಬಳಿಕ 2002ರ ಏ.21ರಂದು ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಯೋಜನೆಯ ಕಾಮಗಾರಿಗೆ ಚಾಲನೆ ನೀಡಿದ್ದರು. ಇಷ್ಟಾದರೂ ಯೋಜನೆ ತ್ವರಿತಗತಿಯಲ್ಲಿ ನಡೆಯುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ 2007ರಲ್ಲಿ ಅಂದಿನ ಕೇಂದ್ರ ಸರ್ಕಾರ, ಇದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ, ಅಗತ್ಯ ಹಣಕಾಸಿನ ನೆರವು ಮೂಲಕ ತ್ವರಿತಗತಿಯಲ್ಲಿ ಯೋಜನೆ ಪೂರ್ಣಗೊಳ್ಳಲು ನಿರ್ಧರಿಸಿತ್ತು. ಡಿ.25 ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಜನ್ಮದಿನವೂ ಆಗಿದ್ದು, ಅದನ್ನು ಉತ್ತಮ ಆಡಳಿತ ದಿನ ಎಂದು ಕೇಂದ್ರ ಸರ್ಕಾರ ಆಚರಿಸುತ್ತದೆ. ಹೀಗಾಗಿ ಇದೇ ದಿನವನ್ನು ಹೊಸ ರೈಲು ಮಾರ್ಗ ಆರಂಭಕ್ಕೆ ನಿಗದಿಪಡಿಸಲಾಗಿದೆ.

1997ರಲ್ಲಿ ಯೋಜನೆ ಆರಂಭಿಸಿದಾಗ ಇದಕ್ಕೆ 3230 ಕೋಟಿ ರು. ವೆಚ್ಚದ ಅಂದಾಜು ಹಾಕಲಾಗಿತ್ತು. ಆದರೆ ಇದೀಗ ವೆಚ್ಚ ಬಹುತೇಕ ದ್ವಿಗುಣಗೊಂಡಿದ್ದು 6000 ಕೋಟಿ ರು. ವ್ಯಯಿಸಲಾಗಿದೆ.

ಅತ್ಯಾಧುನಿಕ ತಂತ್ರಜ್ಞಾನ:  ಬೋಗಿಬೀಲ್‌ ಸೇತುವೆ ದೇಶದ ಏಕೈಕ ಪೂರ್ಣಪ್ರಮಾಣದ ವೆಲ್ಡೆಡ್‌ ಬ್ರಿಡ್ಜ್‌ ಎಂಬ ಹಿರಿಮೆಗೂ ಪಾತ್ರವಾಗಿದೆ. ಇದಕ್ಕಾಗಿ ಯುರೋಪಿಯನ್‌ ಕೋಡ್ಸ್‌ ಮತ್ತು ವೆಲ್ಡಿಂಗ್‌ ತಂತ್ರಜ್ಞಾನವನ್ನು ಬಳಸಲಾಗಿದೆ. ಈ ತಂತ್ರಜ್ಞಾನ ಬಳಸಿ ನಿರ್ಮಿಸಿದರೆ ನಿರ್ವಹಣಾ ವೆಚ್ಚ ಅತಿ ಕಡಿಮೆ. ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಈ ಸೇತುವೆ ಜೀವಿತಾವಧಿ 120 ವರ್ಷ ಎಂದು ಎಂಜಿನಿಯರ್‌ಗಳು ಹೇಳಿದ್ದಾರೆ.

ಸೇತುವೆ ಹೇಗಿದೆ?:  ಸೇತುವೆ ಎರಡು ಮಹಡಿ ಕಟ್ಟಡದ ರೀತಿಯಲ್ಲಿದೆ. ಕೆಳ ಮಹಡಿಯಲ್ಲಿ 2 ಪಥದ ರೈಲು ಹಳಿ ಇದೆ. ಮೇಲಿನ ಮಹಡಿಯಲ್ಲಿ ವಾಹನ ಸಂಚಾರಕ್ಕಾಗಿ 3 ಪಥದ ರಸ್ತೆ ನಿರ್ಮಿಸಲಾಗಿದೆ.