‘‘ನೀವು ಯಾವ ಪಕ್ಷಗಳನ್ನು ತಿರಸ್ಕರಿಸಿದಿರೋ, ಅವರು ಇವತ್ತು ಉಭಯ ಸದನಗಳ ಕಲಾಪಗಳನ್ನು ಕೊಚ್ಚಿ ಹೋಗುವಂತೆ ಮಾಡುತ್ತಿದ್ದಾರೆ. ಸರಿಯಾಗಿ 20 ದಿನಗಳಿಂದ ಕಲಾಪಗಳೇ ನಡೆದಿಲ್ಲ,’’- ನರೇಂದ್ರ ಮೋದಿ

ಬಹ್ರೈಚ್(ಡಿ.11): ಗುಜರಾತ್‌'ನ ಬನಸ್ಕಾಂತಾದಲ್ಲಿ ಶನಿವಾರ ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದಿದ್ದ ಪ್ರಧಾನಿ ಮೋದಿ ಇಂದು ತಮ್ಮ ವಾಕ್'ಪ್ರವಾಹವನ್ನು ಮುಂದುವರೆಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಹ್ರೈಚ್‌ನಲ್ಲಿ ಬಿಜೆಪಿ ಪರಿವರ್ತನ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ‘‘ನೀವು ಯಾವ ಪಕ್ಷಗಳನ್ನು ತಿರಸ್ಕರಿಸಿದಿರೋ, ಅವರು ಇವತ್ತು ಉಭಯ ಸದನಗಳ ಕಲಾಪಗಳನ್ನು ಕೊಚ್ಚಿ ಹೋಗುವಂತೆ ಮಾಡುತ್ತಿದ್ದಾರೆ. ಸರಿಯಾಗಿ 20 ದಿನಗಳಿಂದ ಕಲಾಪಗಳೇ ನಡೆದಿಲ್ಲ,’’ ಎನ್ನುವ ಮೂಲಕ ಮೋದಿ ಮತ್ತೊಮ್ಮೆ ಪ್ರತಿಪಕ್ಷಗಳ ವಿರುದ್ಧ ಕೆಂಡಕಾರಿದ್ದಾರೆ.

ಇದಕ್ಕೂ ಮೊದಲು, ಹವಾಮಾನ ವೈಪರೀತ್ಯದಿಂದಾಗಿ ಮೋದಿಯವರಿದ್ದ ವಾಯುಪಡೆ ಹೆಲಿಕಾಪ್ಟರ್ ಬಹ್ರೈಚ್‌ನಲ್ಲಿ ಲ್ಯಾಂಡ್ ಆಗಲು ಸಾಧ್ಯವಾಗದ ಕಾರಣ, ಅದು ಲಖನೌಗೆ ತೆರಳಿತು. ನಂತರ ಲಖನೌನಿಂದಲೇ ಪ್ರಧಾನಿ ಮೋದಿ ಮೊಬೈಲ್ ಮೂಲಕ ಬಹ್ರೈಚ್‌ನಲ್ಲಿ ಸೇರಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದರು.

ಗೆಲವು ನಮ್ಮದೇ:

‘‘ಸಂಸತ್‌ನಲ್ಲಿ ಚರ್ಚೆಗೆ ನಾವು ಸಿದ್ಧರಿದ್ದೇವೆ. ಆದರೆ, ಪ್ರತಿಪಕ್ಷಗಳು ಗದ್ದಲವೆಬ್ಬಿಸುತ್ತಾ, ನಮಗೆ ಮಾತನಾಡಲು ಬಿಡುತ್ತಿಲ್ಲ. ಆ ಪಕ್ಷಗಳು ಯಾವತ್ತೂ ಪ್ರಾಮಾಣಿಕತೆಯ ಹಾದಿಯಲ್ಲಿ ಸಾಗಿದ್ದೇ ಇಲ್ಲ. ಆದರೆ, ನಾವು ಭ್ರಷ್ಟಾಚಾರದ ವಿರುದ್ಧದ ಈ ಹೋರಾಟದಲ್ಲಿ ಗೆದ್ದೇ ಗೆಲ್ಲುತ್ತೇವೆ,’’ ಎಂದರು. ನೋಟು ಅಮಾನ್ಯದ ಕುರಿತೂ ಪ್ರಸ್ತಾಪಿಸಿದ ಅವರು, ‘‘ನಮ್ಮ ಸರ್ಕಾರವು ಕಪ್ಪುಕುಳಗಳ ಹಿಂದೆ ಬಿದ್ದಿರುವುದು ನಿಮಗೆ ಗೊತ್ತೇ ಇದೆ. ನಾವು ಬಡವರ ಪರ ಕೆಲಸ ಮಾಡಲು ಬದ್ಧ. ದೇಶ ಅಭಿವೃದ್ಧಿಯ ಪಥದಲ್ಲಿ ಸಾಗಲಿ ಎಂದು ಜನರು ಕೂಡ ಕೆಲವೊಂದು ನೋವುಗಳನ್ನು ಸಹಿಸಿಕೊಂಡಿದ್ದಾರೆ,’’ ಎಂದರು.