"ಸೀತೆಯ ಮೇಲೆ ದೌರ್ಜನ್ಯವೆಸಗಿದ ರಾವಣನನ್ನು ಶಿಕ್ಷಿಸಬೇಕು ನಿಜ. ಆದರೆ, ಗಂಡು ಮಗು ಮತ್ತು ಹೆಣ್ಣು ಮಗು ಮಧ್ಯೆ ತಾರತಮ್ಯ ಮಾಡುತ್ತೇವಲ್ಲ ಇದಕ್ಕೇನನ್ನಬೇಕು? ಗರ್ಭದೊಳಗೆಯೇ ಅದೆಷ್ಟೋ ಸೀತೆಯಂದಿರನ್ನು ನಾವು ಕೊಲ್ಲುತ್ತೇವೆ."
ಲಕ್ನೋ(ಅ. 11): ದುಷ್ಟರ ಸಂಹಾರ ದಿನವೆಂದು ಪರಿಗಣಿಸುವ ದಸರಾದಂದು ಪ್ರಧಾನಿ ಮೋದಿ ಭಯೋತ್ಪಾದನೆ ವಿರುದ್ಧ ಮತ್ತೊಮ್ಮೆ ಹರಿಹಾಯ್ದಿದ್ದಾರೆ. ಇಲ್ಲಿಯ ರಾಮಲೀಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ದಸರಾ ಉತ್ಸವದಲ್ಲಿ ಭಾಗವಹಿಸಿ ಭಾಷಣ ಮಾಡಿದ ನರೇಂದ್ರ ಮೋದಿ, ರಾವಣನ ಸಂಹಾರ ಘಟನೆಯನ್ನು ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಹೋಲಿಸಿದ್ದಾರೆ.
"ಭಯೋತ್ಪಾದನೆಯು ಮಾನವತೆಯ ಶತ್ರುವಾಗಿದೆ. ಶ್ರೀರಾಮಚಂದ್ರನು ಮಾನವತೆ ಹಾಗೂ ತ್ಯಾಗದ ಪ್ರತೀಕವಾಗಿದ್ದಾನೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಜಟಾಯು ಮೊದಲಿಗವೆನಿಸಿದೆ... ನಾವು ರಾಮನಾಗಲು ಸಾಧ್ಯವಾಗದಿದ್ದರೂ ಜಟಾಯುವಾದರೂ ಆಗಬಹುದು. ಸಾಮಾನ್ಯ ಜನರು ಎಚ್ಚೆತ್ತುಕೊಂಡರೆ ಭಯೋತ್ಪಾದನೆ ನಿರ್ನಾಮವಾಗುವುದರಲ್ಲಿ ಅನುಮಾನವಿಲ್ಲ..." ಎಂದು ಪ್ರಧಾನಿಗಳು ಅಭಿಪ್ರಾಯಪಟ್ಟಿದ್ದಾರೆ.
"ಭಯೋತ್ಪಾದನೆಗೆ ಯಾವುದೇ ಗಡಿ ಇಲ್ಲ. ಎಲ್ಲ ಜನರೂ ಅದರ ವಿರುದ್ಧ ಒಗ್ಗೂಡಬೇಕು. ಭಯೋತ್ಪಾದಕರನ್ನು ನಿರ್ನಾಮ ಮಾಡಿರಿ. ಉಗ್ರರ ಬೆಂಬಲಿಗರನ್ನೂ ಕ್ಷಮಿಸದಿರಿ..." ಎಂದು ಮೋದಿ ಕರೆ ನೀಡಿದ್ದಾರೆ.
"ನಮ್ಮೊಳಗಿನ 'ರಾವಣ'ಗಳನ್ನು ಸಂಹರಿಸಿ"
ಪ್ರತೀ ದಸರಾದಂದು ರಾವಣನ ಪ್ರತಿಕೃತಿಯನ್ನು ಸುಡುತ್ತೇವೆ. ಆದರೆ, ಸಮಾಜದಲ್ಲಿ ಉಳಿದಿರುವ ರಾವಣನ ಇತರ ಮುಖಗಳನ್ನು ಏನು ಮಾಡೋಣ ಎಂದು ಪ್ರಧಾನಿ ಮೋದಿ ಈ ವೇಳೆ ಪ್ರಶ್ನಿಸಿದ್ದಾರೆ.
"ಸೀತೆಯ ಮೇಲೆ ದೌರ್ಜನ್ಯವೆಸಗಿದ ರಾವಣನನ್ನು ಶಿಕ್ಷಿಸಬೇಕು ನಿಜ. ಆದರೆ, ಗಂಡು ಮಗು ಮತ್ತು ಹೆಣ್ಣು ಮಗು ಮಧ್ಯೆ ತಾರತಮ್ಯ ಮಾಡುತ್ತೇವಲ್ಲ ಇದಕ್ಕೇನನ್ನಬೇಕು? ಗರ್ಭದೊಳಗೆಯೇ ಅದೆಷ್ಟೋ ಸೀತೆಯಂದಿರನ್ನು ನಾವು ಕೊಲ್ಲುತ್ತೇವೆ. ಹೆಣ್ಣು ಮಕ್ಕಳನ್ನು ಗಂಡು ಮಕ್ಕಳ ಸರಿಸಮವಾಗಿ ಕಾಣಬೇಕು. ಗಂಡು ಹುಟ್ಟಿದರೆ ಸಂತೋಷ ಪಡಬೇಕು. ಆದರೆ, ಹೆಣ್ಣು ಮಗು ಜನಿಸಿದರೆ ಪರಮ ಸಂತೋಷಿಗಳಾಗಬೇಕು. ನಮ್ಮ ಮನೆಯಲ್ಲಿರುವ ಸೀತೆಯಂದಿರ ರಕ್ಷಣೆಯಾಗಬೇಕು," ಎಂದು ನಮ್ಮ ಪ್ರಧಾನಿಗಳು ಭಾವುಕರಾಗಿ ನುಡಿದಿದ್ದಾರೆ.
ಅದೇ ಭಾವುಕತೆಯಲ್ಲಿ ಭಾಷಣ ಮುಂದುವರಿಸಿದ ಮೋದಿ, ತಮ್ಮೊಳಗಿರುವ 'ರಾವಣ'ಗಳನ್ನು ಸಂಹರಿಸಬೇಕೆಂದು ಜನರಿಗೆ ಕರೆ ನೀಡಿದ್ದಾರೆ. ನಮ್ಮ ಸಮಾಜದಲ್ಲಿರುವ ಇತರ 'ರಾವಣ'ಗಳಾದ ಭ್ರಷ್ಟಾಚಾರ, ಕೊಳಕು, ಕೆಟ್ಟತನ, ಅನಾರೋಗ್ಯ, ಅನಕ್ಷರತೆ ಮತ್ತು ಮೌಢ್ಯತೆಗಳನ್ನು ಸುಟ್ಟುಹಾಕಬೇಕು ಎಂದು ಮೋದಿ ಕೇಳಿಕೊಂಡಿದ್ದಾರೆ.
