Asianet Suvarna News Asianet Suvarna News

ಲೋಕಸಭಾ ಮಹಾ ಘಟ್ ಬಂಧನ: ಮೋದಿ ಚಾಟಿ

ಶ್ರೀಮಂತರ ಅಸಂಬದ್ಧ ಮೈತ್ರಿಯೇ ಮಹಾಗಠಬಂಧನ: ಮೋದಿ ಚಾಟಿ | ವೈಯಕ್ತಿಕ ಅಸ್ತಿತ್ವಕ್ಕಾಗಿ ಅಪವಿತ್ರ ದೋಸ್ತಿ ಮಾಡಿಕೊಂಡಿದ್ದಾರೆ | ಬಿಜೆಪಿ ವಿರೋಧಿ ಕೂಟದ ವಿರುದ್ಧ ಪ್ರಧಾನಿ ತೀವ್ರ ವಾಗ್ದಾಳಿ

PM Narendra Modi slams Mahagathbandhan in Loksabha Election 2018
Author
Bengaluru, First Published Dec 24, 2018, 8:06 AM IST

ಚೆನ್ನೈ (ಡಿ. 24): ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಮಹಾಘಟ್ ಬಂಧನ ಹೆಸರಿನಲ್ಲಿ ಒಗ್ಗೂಡುತ್ತಿರುವ ರಾಜಕೀಯ ಪಕ್ಷಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ವೈಯಕ್ತಿಕ ಅಸ್ತಿತ್ವಕ್ಕಾಗಿ ವಿವಿಧ ಪಕ್ಷಗಳು ಮಾಡಿಕೊಂಡಿರುವ ಅಪವಿತ್ರ ಮೈತ್ರಿ ಇದಾಗಿದೆ. ಶ್ರೀಮಂತ ಮನೆತನಗಳ ನಡುವಣ ತಾಳಮೇಳವಿಲ್ಲದ ಒಕ್ಕೂಟವೇ ಮಹಾಗಟ್ ಬಂಧನ ಎಂದು ಹರಿಹಾಯ್ದಿದ್ದಾರೆ.

ತಮಿಳುನಾಡಿನ ಚೆನ್ನೈ ಸೆಂಟ್ರಲ್‌, ಚೆನ್ನೈ ಉತ್ತರ, ಮದುರೈ, ತಿರುಚಿರಾಪಳ್ಳಿ, ತಿರುವಳ್ಳೂರು ಲೋಕಸಭಾ ಕ್ಷೇತ್ರಗಳ ಬೂತ್‌ ಮಟ್ಟದ ಕಾರ್ಯಕರ್ತರ ಜತೆ ವಿಡಿಯೋ ಸಂವಾದ ನಡೆಸಿದ ಅವರು, ಮಹಾಘಟ್ ಬಂಧನ ಸಿದ್ಧಾಂತ ಆಧರಿಸಿದ್ದಲ್ಲ. ಅಧಿಕಾರಕ್ಕಾಗಿ ಮಾತ್ರವೇ ರಚನೆಯಾಗುತ್ತಿದೆಯೇ ಹೊರತು ಜನರಿಗಾಗಿ ಅಲ್ಲ. ವೈಯಕ್ತಿಕ ಆಶೋತ್ತರಗಳ ಒಕ್ಕೂಟ ಇದಾಗಿದೆಯೇ ಹೊರತು ಜನರ ಆಶೋತ್ತರಗಳಿಗೆ ಸ್ಪಂದಿಸುವಂತಹದ್ದಲ್ಲ ಎಂದರು. ಗಠಬಂಧನದಲ್ಲಿ ಗುರುತಿಸಿಕೊಂಡಿರುವ ಪ್ರಮುಖ ಪಕ್ಷಗಳನ್ನು ಗುರಿಯಾಗಿಸಿಕೊಂಡು ತರಾಟೆಗೆ ತೆಗೆದುಕೊಂಡರು.

ಮಹಾಮೈತ್ರಿಕೂಟದಲ್ಲಿ ಮುಂಚೂಣಿಯಲ್ಲಿರುವ ತೆಲುಗುದೇಶಂ ಪಕ್ಷವನ್ನು ಕಾಂಗ್ರೆಸ್ಸಿನ ದುರಹಂಕಾರದ ವಿರುದ್ಧ ಎನ್‌.ಟಿ. ರಾಮರಾವ್‌ ಅವರು ಸಂಘಟಿಸಿದ್ದರು. ಆಂಧ್ರ ಮುಖ್ಯಮಂತ್ರಿಯನ್ನು ಕಾಂಗ್ರೆಸ್‌ ಪಕ್ಷ ಅವಮಾನ ಮಾಡಿದ್ದ ಹಿನ್ನೆಲೆಯಲ್ಲಿ ತೆಲುಗರ ಆತ್ಮಗೌರವಕ್ಕಾಗಿ ಆ ಪಕ್ಷವನ್ನು ಹುಟ್ಟುಹಾಕಿದ್ದರು. ಆದರೆ ಇಂದು ಎನ್‌ಟಿಆರ್‌ ಅವರು ಕಟ್ಟಿದ್ದ ಪಕ್ಷ ಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಂಡಿದೆ. ಆಂಧ್ರ ಜನರು ಇದನ್ನು ಹೇಗೆ ಒಪ್ಪಿಕೊಳ್ಳುತ್ತಾರೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ ಪಕ್ಷದ ವಿರುದ್ಧ ಎಡಪಕ್ಷಗಳು ನಿರ್ಣಯಗಳನ್ನು ಅಂಗೀಕರಿಸುತ್ತಿದ್ದವು. ಕಾಂಗ್ರೆಸ್‌ ಪಕ್ಷ ಸಾಮ್ರಾಜ್ಯಶಾಹಿಗಳ ಪರವಾಗಿದ್ದು ಬೆಲೆ ಏರಿಕೆ, ಕೃಷಿ ಬಿಕ್ಕಟ್ಟು, ಮತ್ತಿತರ ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ಇತ್ತೀಚಿನವರೆಗೂ ದೂರುತ್ತಿದ್ದವು. ಈಗ ಎರಡೂ ಪಕ್ಷಗಳು ಪರಸ್ಪರ ಹೊಗಳಿಕೊಳ್ಳುತ್ತಿವೆ ಎಂದು ಲೇವಡಿ ಮಾಡಿದರು.

ಮಹಾಗಠಬಂಧನದಲ್ಲಿರುವ ಕೆಲವೊಂದು ಪಕ್ಷಗಳು ತಾವು ಸಮಾಜವಾದಿ ನಾಯಕ ರಾಮ ಮನೋಹರ್‌ ಲೋಹಿಯಾ ಅವರಿಂದ ಪ್ರೇರಿತವಾಗಿರುವುದಾಗಿ ಹೇಳಿಕೊಳ್ಳುತ್ತಿವೆ. ಆದರೆ ಸ್ವತಃ ಲೋಹಿಯಾ ಅವರೇ ಕಾಂಗ್ರೆಸ್‌ ಹಾಗೂ ಅದರ ಸಿದ್ಧಾಂತಗಳನ್ನು ವಿರೋಧಿಸುತ್ತಿದ್ದರು. ಕಾಂಗ್ರೆಸ್‌ ರಾಜಿ ಮಾಡಿಕೊಳ್ಳುವ ಪಕ್ಷ. ಸೈದ್ಧಾಂತಿಕ ಹಾಗೂ ರಾಷ್ಟ್ರೀಯ ಹಿತಾಸಕ್ತಿಯ ವಿಷಯಗಳಲ್ಲಿ ರಾಜಿ ಮಾಡಿಕೊಂಡಿದೆ ಎಂದು ದೂರುತ್ತಿದ್ದರು ಎಂದು ಮೋದಿ ಹೇಳಿದರು.

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಹಲವಾರು ರಾಜಕೀಯ ನಾಯಕರನ್ನು ಬಂಧಿಸಿ ಕಿರುಕುಳ ನೀಡಲಾಗಿತ್ತು ಎಂದು ಯಾರ ಹೆಸರನ್ನೂ ಹೇಳದೇ ಮೋದಿ ಚುಚ್ಚಿದರು. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರಧಾನಿಯಾಗಲಿ ಎಂದು ಕಳೆದ ವಾರ ಸೂಚಿಸಿದ್ದ ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್‌ ಕೂಡ ತುರ್ತು ಪರಿಸ್ಥಿತಿ ವೇಳೆ ಹಿಂಸೆ ಅನುಭವಿಸಿದ್ದರು ಎಂಬುದು ಗಮನಾರ್ಹ.

Follow Us:
Download App:
  • android
  • ios