ಹಿಂದು ಧರ್ಮದ ಬಗ್ಗೆ ಎಲ್ಲಿಂದ ಜ್ಞಾನ ಬಂತು ರಾಹುಲ್‌?: ಮೋದಿ |  ಕಾಂಗ್ರೆಸ್‌ ಪಕ್ಷ ಸುಳ್ಳುಗಳನ್ನು ಹರಡುವ ವಿವಿ | ಗುಲಾಬಿಯನ್ನು ಧರಿಸುತ್ತಿದ್ದವರಿಗೆ ರೈತರ ಬಗ್ಗೆ ಗೊತ್ತಿರಲಿಲ್ಲ | ರಾಜಸ್ಥಾನದಲ್ಲಿ ಪ್ರಧಾನಿ ಮೋದಿ ವಾಗ್ದಾಳಿ

ಜೋಧ್‌ಪುರ (ಡಿ. 04): ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಿಂದು ಧರ್ಮದ ಬಗ್ಗೆ ಏನು ಗೊತ್ತು? ಅವರೆಂತಹ ಹಿಂದು? ಎಂದು ಲೇವಡಿ ಮಾಡಿದ್ದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ಮೋದಿ ತಿರುಗೇಟು ನೀಡಿದ್ದಾರೆ. ‘ನಿಮಗೆ ಹಿಂದು ಧರ್ಮದ ಬಗ್ಗೆ ಜ್ಞಾನ ಎಲ್ಲಿಂದ ಬಂತು’ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಕಾಂಗ್ರೆಸ್‌ ಪಕ್ಷ ಎಂಬುದು ಸುಳ್ಳುಗಳನ್ನು ಹರಡುವ ವಿಶ್ವವಿದ್ಯಾಲಯವಿದ್ದಂತೆ ಎಂದು ಕಿಡಿಕಾರಿದ್ದಾರೆ.

ರಾಜಸ್ಥಾನದ ಜೋಧ್‌ಪುರದಲ್ಲಿ ಚುನಾವಣಾ ರಾರ‍ಯಲಿ ಉದ್ದೇಶಿಸಿ ಸೋಮವಾರ ಮಾತನಾಡಿದ ಪ್ರಧಾನಿ, ‘ನಾನೊಬ್ಬ ಸಣ್ಣ ಕಾಮ್‌ದಾರ್‌ (ಕೆಲಸಗಾರ). ನನಗೆ ಹಿಂದು ಧರ್ಮದ ಪರಿಪೂರ್ಣ ಜ್ಞಾನವಿದೆ ಎಂದು ಯಾವತ್ತಿಗೂ ಹೇಳಿಕೊಂಡಿಲ್ಲ. ಆದರೆ ನಾಮ್‌ದಾರ್‌ (ವಂಶಪಾರಂಪರ‍್ಯದಿಂದ ಹುದ್ದೆಗೇರಿದವರು)ಗಳಿಗೆ ಮಾತನಾಡುವ ಹಕ್ಕು ಇದೆ’ ಎಂದು ಟಾಂಗ್‌ ನೀಡಿದರು.

ಇದೇ ವೇಳೆ, ದೇಶದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರು ವಿರುದ್ಧವೂ ಮೋದಿ ಹರಿಹಾಯ್ದರು. ಗುಜರಾತಿನ ಸೋಮನಾಥ ದೇಗುಲವನ್ನು ವಿದೇಶಿ ಆಕ್ರಮಣಕಾರರು ನಾಶಪಡಿಸಿದ್ದರು. ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಅವರು ಅದನ್ನು ನವೀಕರಣಗೊಳಿಸಿದ್ದರು. ಅದರ ಉದ್ಘಾಟನಾ ಸಮಾರಂಭಕ್ಕೆ ದೇಶದ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್‌ ಅವರು ತೆರಳುವುದಕ್ಕೆ ನೆಹರು ಆಕ್ಷೇಪ ಎತ್ತಿದ್ದರು ಎಂದು ಟೀಕಿಸಿದರು.

ಗುಲಾಬಿಯನ್ನು ಧರಿಸುತ್ತಿದ್ದ ವ್ಯಕ್ತಿಗೆ ಅದರ ಉದ್ಯಾನದ ಬಗ್ಗೆ ಮಾತ್ರವೇ ಗೊತ್ತಿತ್ತು. ರೈತರು ಅಥವಾ ಕೃಷಿ ಬಗ್ಗೆ ಅಲ್ಲ. ಹೀಗಾಗಿಯೇ ದೇಶದ ರೈತ ಸಮುದಾಯ ತೊಂದರೆ ಅನುಭವಿಸುತ್ತಿದೆ ಎಂದು ನೆಹರು ಹೆಸರೆತ್ತದೇ ತರಾಟೆಗೆ ತೆಗೆದುಕೊಂಡರು.

ಸುಳ್ಳುಗಳ ವಿವಿ:

ಕಾಂಗ್ರೆಸ್‌ ಪಕ್ಷ ಎಂಬುದು ಸುಳ್ಳುಗಳನ್ನು ಪಸರಿಸುವ ವಿಶ್ವವಿದ್ಯಾಲಯವಾಗಿದೆ. ಹೆಚ್ಚು ಸುಳ್ಳುಗಳನ್ನು ಹೇಳಿದವರಿಗೆ ಆ ಪಕ್ಷದಲ್ಲಿ ಹುದ್ದೆ ಸಿಗುತ್ತದೆ. ರಾಹುಲ್‌ ಗಾಂಧಿ ಅವರಿಗೆ ಹೆಚ್ಚು ಸುಳ್ಳು ಹೇಳುವ ಸಾಮರ್ಥ್ಯವಿದೆ. ಕಾಂಗ್ರೆಸ್ಸಿನ ಕನಸು ಎಲ್ಲ ರಾಜ್ಯಗಳಲ್ಲೂ ನುಚ್ಚು ನೂರಾಗಿದೆ. ರಾಜಸ್ಥಾನದಲ್ಲೂ ಅದೇ ಆಗುತ್ತದೆ. 5 ವರ್ಷಕ್ಕೊಮ್ಮೆ ರಾಜಸ್ಥಾನದಲ್ಲಿ ಅಧಿಕಾರ ಬದಲಾಗುತ್ತದೆ ಎಂದು ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತೇವೆ ಎಂದು ಪ್ರತಿಪಕ್ಷ ನಂಬಿಕೊಂಡಿದೆ. ಆದರೆ ಈ ಬಾರಿ ಅದು ಸುಳ್ಳಾಗಲಿದೆ ಎಂದು ಭವಿಷ್ಯ ನುಡಿದರು.

ರಾಜಸ್ಥಾನದ ಉದಯ್‌ಪುರದಲ್ಲಿ ಮೋದಿ ವಿರುದ್ಧ ಹರಿಹಾಯ್ದಿದ್ದ ರಾಹುಲ್‌, ಹಿಂದು ಧರ್ಮದ ಬಗ್ಗೆ ಎಲ್ಲರಿಗೂ ಜ್ಞಾನವಿದೆ. ಆದರೆ ಪ್ರಧಾನಿ ಮೋದಿ ಅವರು ಹಿಂದು ಎನ್ನುತ್ತಾರೆ. ಅವರಿಗೆ ಹಿಂದು ಧರ್ಮದ ಬುನಾದಿಯೇ ಗೊತ್ತಿಲ್ಲ. ಅವರೆಂತಹ ಹಿಂದು ಎಂದು ಪ್ರಶ್ನಿಸಿದ್ದರು.