ಲಖನೌ(ಸೆ.16): ಪ್ರಧಾನಿ ನರೇಂದ್ರ ಮೋದಿ ಅವರು ಬರೀ ಸೆಲ್ಫೀ ಮತ್ತು ಭರವಸೆ ನೀಡುವ ಯಂತ್ರ. ಅಚ್ಛೇ ದಿನದ ಭರವಸೆ ಬಡವರಿಗಲ್ಲ, ಬದಲಾಗಿ ಮೋದಿ ಅವರ ಕೈಗಾರಿಕೋದ್ಯಮಿ ಸ್ನೇಹಿತರಿಗೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ.
ಉತ್ತರಪ್ರದೇಶದಲ್ಲಿ ಚುನಾವಣಾ ಪ್ರಚಾರ ಹಿನ್ನೆಲೆಯಲ್ಲಿ 'ಡಿಯೋರಿಯದಿಂದ ದಿಲ್ಲಿ ಕಿಸಾನ್ ಯಾತ್ರೆ' ಎಂಬ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಮಾತನಾಡಿದರು. ಪ್ರಧಾನಿ ಮೋದಿ ಅವರು ಹಲವಾರು ಭರವಸೆಗಳನ್ನು ನೀಡಿದ್ದರು. ಈ ಪೈಕಿ ಸ್ವಿಸ್ ಬ್ಯಾಂಕಿನಲ್ಲಿರುವ ಹಣವನ್ನು ಭಾರತಕ್ಕೆ ವಾಪಸ್ ತಂದು ಪ್ರತಿಯೊಬ್ಬ ಭಾರತೀಯನ ಖಾತೆಗೆ 15 ಲಕ್ಷ ಜಮಾ ಮಾಡುವುದು. ರೈತರಿಗೆ ನ್ಯಾಯಬೆಲೆ, 2 ಕೋಟಿ ಉದ್ಯೋಗ ಸೃಷ್ಠಿ ಹೀಗೆ ಹಲವಾರು ಭರವಸೆಗಳನ್ನು ಚುನಾವಣೆ ಪೂರ್ವ ಹಾಗೂ ಪ್ರಧಾನಿಯಾದ ಬಳಿಕ ನೀಡಿದ್ದು ಅವುಗಳನ್ನು ಪೂರೈಸಲು ಆಗಿಲ್ಲ ಎಂದು ಆರೋಪಿಸಿದ್ದಾರೆ.
ನಾನು ಯಾತ್ರೆಯಲ್ಲಿ ಹಲವಾರು ಮಂದಿರ ಮಸೀದಿಗಳು ಒಟ್ಟಿಗೆ ಇರುವುದನ್ನು ಗಮನಿಸಿದ್ದೇನೆ ಹಾಗೂ ಜನರು ಶಾಂತಿಯಿಂದ ಸಹಬಾಳ್ವೆ ನಡೆಸುತ್ತಿರುವುದನ್ನು ನೋಡಿದ್ದೇನೆ. ಮೋದಿ ಬಂದ ನಂತರ ಹಿಂದೂಗಳು ಹಾಗೂ ಮುಸ್ಲೀಮರ ನಡುವೆ ಜಗಳವಾಡುವಂತೆ ಮಾಡಿದ್ದಾರೆ ಎಂದು ರಾಹುಲ್ ಹರಿಹಾಯ್ದಿದ್ದಾರೆ. ನಾವು ಹರಿಯಾಣದಲ್ಲಿ 10 ವರ್ಷ ಆಡಳಿತ ನಡೆಸಿದರೂ ಒಂದೂ ಗಲಭೆಯೂ ನಡೆದಿಲ್ಲ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
