"ರಾಜ್ಯದಲ್ಲಿ ಉಂಟಾಗಿರುವ ಭೀಕರ ಬರಗಾಲ ಪರಿಸ್ಥಿತಿ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸಲು ಶುಕ್ರವಾರ ಸಮಯ ಕೋರಿದ್ದೆ. ಅದರಂತೆ ಗುರುವಾರವೇ ದೆಹಲಿಗೆ ತೆರಳಿದ್ದೆ. ಆದರೆ ಕೊನೆವರೆಗೂ ಪ್ರಧಾನಿ ಸಮಯಾವಕಾಶವನ್ನೇ ನೀಡಲಿಲ್ಲ"
ಬೆಂಗಳೂರು: ದೇಶದ ಪ್ರಧಾನಿಯೊಬ್ಬರು ಒಂದು ರಾಜ್ಯದ ಸಿಎಂ ಜತೆ ಚರ್ಚಿಸಲು ಸಮಯಾ ವಕಾಶವನ್ನೇ ನೀಡದಿರುವುದು ಒಕ್ಕೂಟ ವ್ಯವಸ್ಥೆಗೆ ಗೌರವ ತರುವುದಿಲ್ಲ ಎಂದು ಸಿದ್ದರಾಮಯ್ಯ ಮೋದಿ ವರ್ತನೆ ಕುರಿತಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ನಿಜಲಿಂಗಪ್ಪನವರ ಜನ್ಮದಿನದ ಅಂಗವಾಗಿ ಶನಿವಾರ ವಿಧಾನಸೌಧದ ಆವರಣದಲ್ಲಿರುವ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಉಂಟಾಗಿರುವ ಭೀಕರ ಬರಗಾಲ ಪರಿಸ್ಥಿತಿ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸಲು ಶುಕ್ರವಾರ ಸಮಯ ಕೋರಿದ್ದೆ. ಅದರಂತೆ ಗುರುವಾರವೇ ದೆಹಲಿಗೆ ತೆರಳಿದ್ದೆ. ಆದರೆ ಕೊನೆವರೆಗೂ ಪ್ರಧಾನಿ ಸಮಯಾವಕಾಶವನ್ನೇ ನೀಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಭೀಕರ ಬರಗಾಲವಿದ್ದು, ಪರಿಹಾರ ಕಾಮಗಾರಿಗಳಿಗೆ ಕೇಂದ್ರದ ನೆರವು ಅಗತ್ಯವಿದೆ. ಇದನ್ನು ಹೇಳಿಕೊಳ್ಳಲು ಒಂದು ರಾಜ್ಯದ ಮುಖ್ಯಮಂತ್ರಿ ಭೇಟಿಗೆ ಸಮಯ ಕೇಳಿದರೆ ಕೊಟ್ಟಿಲ್ಲ. ಇದರ ಜೊತೆಗೆ ಮಹದಾಯಿ ನದಿ ನೀರು ವಿವಾದ ಕುರಿತು ವಿಧಾನ ಮಂಡಲದ ಉಭಯ ಸದನಗಳಲ್ಲಿ ಚರ್ಚೆಯಾಗಿದೆ. ಸದನದ ಅಭಿಪ್ರಾಯವನ್ನು ಪ್ರಧಾನಿಯವರಿಗೆ ತಿಳಿಸಬೇಕಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಪ್ರಧಾನಿಯವರ ಭೇಟಿಗೆ ಸಮಯ ಕೋರಲಾಗಿತ್ತು ಎಂದು ವಿವರಿಸಿದರು.
ಬರ ಪರಿಹಾರ ಕಾಮಗಾರಿಗಳಿಗೆ ಕೇಂದ್ರ ಬಿಡುಗಡೆ ಮಾಡಿರುವ ಅನುದಾನವನ್ನು ರಾಜ್ಯ ಬಳಕೆ ಮಾಡಿರುವ ಕುರಿತು ವಿವರ ನೀಡುವಂತೆ ಬಿಜೆಪಿ ಸಂಸದರು ಕೇಳಿದ್ದಾರೆ. ಯಡಿಯೂರಪ್ಪ ಮತ್ತು ಕರಂದ್ಲಾಜೆ ಅವರಿಗೆ ವ್ಯವಸ್ಥೆ ಕುರಿತು ಮಾಹಿತಿ ಇದ್ದಂತೆ ಕಾಣುತ್ತಿಲ್ಲ. ಪ್ರತಿ ಐದು ವರ್ಷಕ್ಕೊಮ್ಮೆ ಹಣಕಾಸು ಆಯೋಗ ರಚನೆಯಾಗುತ್ತದೆ. ಪ್ರಕೃತಿ ವಿಕೋಪ ನಿರ್ವಹಣೆಗೆ ಎಷ್ಟುಹಣ ನಿಗದಿ ಮಾಡಬೇಕು ಎಂಬುದನ್ನು ಆಯೋಗ ಶಿಫಾರಸು ಮಾಡುತ್ತದೆ. ನೆರೆ ಮತ್ತು ಬರ ಬಂದಾಗ ನಿಯಮಗಳ ಅನ್ವಯ ಕೇಂದ್ರ ಅನುದಾನ ಬಿಡುಗಡೆ ಮಾಡುತ್ತದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ರಾಜ್ಯಕ್ಕೆ ಒಂದೂವರೆ ಸಾವಿರ ಕೋಟಿ ರು. ನೆರವು ಘೋಷಿಸಿದ್ದರು ಎಂದರು.
ನೆರೆ ಮತ್ತು ಬರ ಪರಿಹಾರ ಕಾಮಗಾರಿಗಳಿಗೆ ನೆರವಾಗು ವಂತೆ ಈಗಾಗಲೇ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ. ರಾಜ್ಯದ ಲ್ಲಿ ರೂ.17ರಿಂದ ರೂ.18 ಸಾವಿರ ಕೋಟಿ ಬೆಳೆ ನಷ್ಟಸಂಭವಿಸಿದೆ. ನಿಯಮಗಳನ್ವಯ ಬರ ಪರಿಹಾರ ಕಾಮಗಾರಿಗೆ ರೂ.4,702 ಕೋಟಿ ನೀಡಬೇಕು ಎಂದೂ ಕೋರಿದ್ದೇವೆ. ಪ್ರವಾಹದಿಂದ ಆಗಿರುವ ಬೆಳೆ ಹಾನಿಗೆ ಪರಿಹಾರವಾಗಿ ರೂ.376 ಕೋಟಿಗೆ ಬೇಡಿಕೆ ಇಟ್ಟಿದ್ದೇವೆ. ನಷ್ಟದ ಮೊತ್ತವನ್ನು ಪೂರ್ಣವಾಗಿ ಭರಿ ಸುವಂತೆ ಕೇಳಿಲ್ಲ. ಎನ್‌ಡಿಆರ್‌ಎಫ್ ಮತ್ತು ಎಸ್‌ಟಿಆರ್‌ಎಫ್ ನಿಯಮಗಳ ಅನ್ವಯ ಬರಬೇಕಿರುವ ಅನುದಾನ ಬಿಡುಗಡೆ ಮಾಡುವಂತೆ ಕೇಳಲಾಗಿದೆ ಎಂದು ವಿವರಿಸಿದರು.
ನಿಜಲಿಂಗಪ್ಪ ಸ್ಮರಣೆ: ಎಸ್.ನಿಜಲಿಂಗಪ್ಪ ಈ ದೇಶ ಕಂಡ ಮುತ್ಸದ್ದಿ ರಾಜಕಾರಣಿ. ಮುಖ್ಯ ಮಂತ್ರಿಯಾಗಿ ಆರ್ಥಿಕ, ಸಾಮಾಜಿಕ ಮತ್ತು ವಿಶೇಷವಾಗಿ ನೀರಾವರಿ, ವಿದ್ಯುತ್ ಉತ್ಪಾದನೆಗೆ ಆದ್ಯತೆ ಕೊಟ್ಟಿದ್ದರು. ನಿಜಲಿಂಗಪ್ಪ ಸೇವೆ ಸ್ಮರಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು.
(epaper.kannadaprabha.in)
