ಕೇಂದ್ರದ ಯೋಜನೆಗಳ ಗುರಿ ಮುಟ್ಟಲು ಬಿಜೆಪಿ ಸಿಎಂಗಳ ಸಭೆ ನಿರ್ಧಾರ | ಪ್ರಧಾನಿ ಮೋದಿ. ಅಮಿತ್ ಶಾ ನೇತೃತ್ವದಲ್ಲಿ ಸಭೆ |
ನವದೆಹಲಿ (ಆ. 29): 2019ರ ಲೋಕಸಭಾ ಹಾಗೂ ಕೆಲವು ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಮರಳಿ ಅಧಿಕಾರ ಪಡೆಯುವ ನಿಟ್ಟಿನಲ್ಲಿ, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸ್ವಚ್ಛ ಭಾರತ, ಗ್ರಾಮ ಸ್ವರಾಜ್ ಸೇರಿದಂತೆ ಇತರ ಕಲ್ಯಾಣ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಲು ಕೈಗೊಳ್ಳಬೇಕಾದ ಕ್ರಮದ ಕುರಿತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಮಂಗಳವಾರ ಬಿಜೆಪಿ ಮುಖ್ಯಮಂತ್ರಿಗಳ ಸಭೆ ನಡೆಸಿದರು.
ಈ ಸಭೆಯಲ್ಲಿ ನಿರ್ದಿಷ್ಟಕಾಲಾವಧಿಯಲ್ಲಿ ಸ್ವಚ್ಛ ಭಾರತ ಯೋಜನೆ ತನ್ನ ಗುರಿ ಮುಟ್ಟುವುದು. 48000 ಗ್ರಾಮಗಳಲ್ಲಿ ಕೈಗೊಳ್ಳಲಾಗಿರುವ ಗ್ರಾಮ ಸ್ವರಾಜ್ ಯೋಜನೆ, ಬಡವರಿಗೆ ಅಡುಗೆ ಅನಿಲ ಸಂಪರ್ಕ, ಎಲ್‌ಇಡಿ ಬಲ್ಬ್ ವಿತರಣೆ ಸೇರಿದಂತೆ ಕೇಂದ್ರ ಕೈಗೊಂಡಿರುವ 7 ಕಲ್ಯಾಣ ಯೋಜನೆಗಳು ಸಾರ್ವಜನಿಕರಿಗೆ ಸಮರ್ಪಕವಾಗಿ ತಲುಪುತ್ತಿವೆಯೇ ಎಂಬುದರ ಬಗ್ಗೆ ಚರ್ಚಿಸಲಾಯಿತು. ಇನ್ನು ಆಯುಷ್ಮಾನ್ ಭಾರತ ಜಾರಿ ಬಗ್ಗೆಯೂ ಚರ್ಚೆ ನಡೆಯಿತೆಂದು ಮೂಲಗಳು ಹೇಳಿವೆ.
