23 ದಿನದ 80 ಸಾವಿರ ರು. ವೇತನ ತ್ಯಜಿಸಿದ ಮೋದಿ!

First Published 8, Apr 2018, 8:40 AM IST
PM Modi to forgo Rs 79750 as Parliaments Budget session washed out
Highlights

ಇದೇ ವೇಳೆ, ವೈಎಸ್ಸಾರ್‌ ಕಾಂಗ್ರೆಸ್‌, ತೆಲುಗುದೇಶಂ, ಕಾಂಗ್ರೆಸ್‌ ಹಾಗೂ ಎಡರಂಗಗಳು ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಮುಂದಾದರೂ ಕೆಲವು ಪ್ರಾದೇಶಿಕ ಪಕ್ಷಗಳ ಗಲಾಟೆಯಿಂದ ಇದನ್ನು ಕೈಗೆತ್ತಿಕೊಳ್ಳಲೂ ಆಗಲಿಲ್ಲ.

ನವದೆಹಲಿ: ಪ್ರತಿಪಕ್ಷಗಳ ಗದ್ದಲದಿಂದಾಗಿ ಸಂಸತ್ತಿನ ಬಜೆಟ್‌ ಅಧಿವೇಶನದ ಎರಡನೇ ಅವಧಿ ವ್ಯರ್ಥವಾದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 23 ದಿನಗಳ ವೇತನ ಮತ್ತು ಭತ್ಯೆಯ ಮೊತ್ತವಾದ 79,750 ರು.ಗಳನ್ನು ಮರಳಿಸಿದ್ದಾರೆ. ಅದೇ ರೀತಿ ಇತರ ಎನ್‌ಡಿಎ ಸಂಸದರು ಕೂಡ ವೇತನವನ್ನು ತ್ಯಜಿಸುವ ನಿರ್ಧಾರ ಕೈಗೊಂಡಿದ್ದಾರೆ.

ಜ.29ರಂದು ಆರಂಭವಾದ ಸಂಸತ್‌ ಅಧಿವೇಶನ ಶೂನ್ಯ ಸಾಧನೆಯ ಮೂಲಕ ಶುಕ್ರವಾರ ಅಂತ್ಯಗೊಂಡಿತ್ತು. ಅದರಲ್ಲೂ ಬಜೆಟ್‌ ಅಧಿವೇಶನದ ವಿಸ್ತರಿತ ಭಾಗ ಆರಂಭವಾದಾಗಿನಿಂತಲೂ ಕಾವೇರಿ ನಿರ್ವಹಣಾ ಮಂಡಳಿ ರಚನೆ, ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಹಗರಣ, ಎಸ್‌ಸಿ-ಎಸ್‌ಟಿ ದೌರ್ಜನ್ಯ ಕಾಯ್ದೆಯಲ್ಲಿನ ಕೆಲವೊಂದು ಅಂಶಗಳ ಸಡಿಲಿಕೆ- ಇತ್ಯಾದಿ ವಿಷಯಗಳನ್ನು ಇಟ್ಟುಕೊಂಡು ನಡೆದ ಕೋಲಾಹಲದ ಕಾರಣ, ಸಂಸತ್ತಿನ ಉಭಯ ಸದನಗಳಲ್ಲೂ ಯಾವುದೇ ಕಲಾಪ ಸಾಧ್ಯವಾಗಿರಲಿಲ್ಲ. ಇದರಿಂದಾಗಿ 18 ವರ್ಷದಲ್ಲೇ ಅತಿ ಕಡಿಮೆ ಅವಧಿಯ ಕಲಾಪ ನಡೆದ ಅಧಿವೇಶನ ಎಂಬ ಅಪಖ್ಯಾತಿಗೂ ಇದು ತುತ್ತಾಗಿತ್ತು.

ಇದೇ ವೇಳೆ, ವೈಎಸ್ಸಾರ್‌ ಕಾಂಗ್ರೆಸ್‌, ತೆಲುಗುದೇಶಂ, ಕಾಂಗ್ರೆಸ್‌ ಹಾಗೂ ಎಡರಂಗಗಳು ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಮುಂದಾದರೂ ಕೆಲವು ಪ್ರಾದೇಶಿಕ ಪಕ್ಷಗಳ ಗಲಾಟೆಯಿಂದ ಇದನ್ನು ಕೈಗೆತ್ತಿಕೊಳ್ಳಲೂ ಆಗಲಿಲ್ಲ. ಈ ಬಿಕ್ಕಟ್ಟಿಗೆ ವಿಪಕ್ಷಗಳು ಕಾರಣ ಎಂದು ಸರ್ಕಾರ ಟೀಕಿಸಿದ್ದರೆ, ಕೇಂದ್ರದ ನಿಲುವುಗಳೇ ಇದಕ್ಕೆ ಕಾರಣ ಎಂದು ವಿಪಕ್ಷಗಳು ಟೀಕಿಸಿದ್ದವು. ಈ ಹಿನ್ನೆಲೆಯಲ್ಲಿ ವಿಪಕ್ಷಗಳಿಗೆ ಟಾಂಗ್‌ ನೀಡಲು, ಕಲಾಪ ವಿಫಲವಾದ 23 ದಿನಗಳ ವೇತನ ಮತ್ತು ಭತ್ಯೆಯನ್ನು ಎನ್‌ಡಿಎ ಸದಸ್ಯರು ನಿರಾಕರಿಸಲಿದ್ದಾರೆ ಎಂದು ಬಿಜೆಪಿ ಹೇಳಿತ್ತು. ಈ ನಿರ್ಧಾರದಿಂದ 3.66 ಕೋಟಿ ರು. ಸರ್ಕಾರಕ್ಕೆ ಮರಳಿಲಿದೆ ಎಂದು ಸಂಸದೀಯ ಖಾತೆ ಸಚಿವ ಅನಂತ್‌ಕುಮಾರ್‌ ಮಾಹಿತಿ ನೀಡಿದ್ದರು.

loader