ಆಫ್ಘಾನಿಸ್ತಾನದಲ್ಲಿ ಶಾಂತಿ ಸುವ್ಯವಸ್ಥೆ ಸ್ಥಾಪಿಸುವ ಉದ್ದೇಶದಿಂದ ಕ್ರಿಯಾ ಯೋಜನೆ ಚರ್ಚಿಸಿ ರೂಪಿಸುವುದು ಈ ಬಾರಿಯ "ಹಾರ್ಟ್ ಆಫ್ ಏಷ್ಯಾ" ಸಮ್ಮೇಳನದ ಪ್ರಮುಖ ಗುರಿಗಳಲ್ಲೊಂದು.
ಅಮೃತಸರ(ಡಿ. 04): ಆಫ್ಘಾನಿಸ್ತಾನ ದೇಶದಲ್ಲಿ ಶಾಂತಿ ಸ್ಥಾಪನೆಯಾಗಬೇಕಾದರೆ ಭಯೋತ್ಪಾದನೆಯ ಹುಟ್ಟಡಗಲೇಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಹಾರ್ಟ್ ಆಫ್ ಏಷ್ಯಾ ಶೃಂಗಸಭೆಯನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಕಹಳೆ ಊದಿದ್ದಾರೆ. ಆಫ್ಘಾನಿಸ್ಥಾನದಲ್ಲಿ ನಡೆಯುತ್ತಿರುವ ಭಯೋತ್ಪಾದನೆ ಚಟುವಟಿಕೆಗಳನ್ನು ನೋಡಿಕೊಂಡು ಕಣ್ಮುಚ್ಚಿ ಕೂತಿದ್ದರೆ ಉಗ್ರರು ಮತ್ತವರ ಪೋಷಕರಿಗೆ ಬಲ ಹೆಚ್ಚಿಸಿದಂತಾಗುತ್ತದೆ. ಆಘ್ಘನ್'ನಲ್ಲಿ ಶಾಂತಿ ಸ್ಥಾಪನೆಯ ಧ್ವನಿ ಎತ್ತರಿಸಿದರಷ್ಟೇ ಸಾಲದು, ಅದನ್ನು ಸಾಕಾರಗೊಳಿಸುವ ಕ್ರಿಯಾ ಯೋಜನೆ ಇರಬೇಕು ಎಂದು ಮೋದಿ ಹೇಳಿದ್ದಾರೆ.
ರಕ್ತಪಾತ ಮತ್ತು ಭಯೋತ್ಪಾದನೆ ಹರಡುವ ಉಗ್ರರ ಜಾಲಗಳನ್ನು ಹತ್ತಿಕ್ಕಲು ನಾವೆಲ್ಲರೂ ಒಗ್ಗಟ್ಟು ತೋರಬೇಕು. ಆಫ್ಘಾನಿಸ್ತಾನ ಹಾಗೂ ಅದರ ಸುತ್ತಲಿನ ಇತರ ರಾಷ್ಟ್ರಗಳ ನಡುವೆ ಒಳ್ಳೆಯ ಸಂಬಂಧ ಏರ್ಪಡಲು ತಾವೆಲ್ಲರೂ ಕಾರ್ಯೋನ್ಮುಖರಾಗಬೇಕು ಎಂದು ಶೃಂಗಸಭೆಯಲ್ಲಿ ಪಾಲ್ಗೊಂಡಿರುವ ರಾಷ್ಟ್ರಗಳಿಗೆ ಪ್ರಧಾನಿ ಮೋದಿ ಕರೆನೀಡಿದ್ದಾರೆ.
ಭಾರತ ಹಾಗೂ ಆಫ್ಘಾನಿಸ್ತಾನದ ನಡುವಿನ, ಮತ್ತು ಅಮೃತಸರ ಹಾಗೂ ಆಫ್ಘಾನಿಸ್ತಾನ ನಡುವಿರುವ ಐತಿಹಾಸಿಕ ಸಾಂಸ್ಕೃತಿಕ ಮತ್ತು ವ್ಯವಹಾರ ಸಂಬಂಧವನ್ನು ಸ್ಮರಿಸಿದ ಮೋದಿ, ಛಾಬಾಹಾರ್ ಪೋರ್ಟ್ ಮೂಲಕ ಆಫ್ಘಾನಿಸ್ತಾನ ಮತ್ತು ಭಾರತದ ಸಂಬಂಧಕ್ಕೆ ಹೊಸ ಪುಷ್ಟಿ ಸಿಕ್ಕುತ್ತಿದೆ. ಆಫ್ಘಾನಿಸ್ತಾನದ ಸೋದರ ಸೋದರಿಯರಿಗೆ ಭಾರತ ಸಕಲ ರೀತಿಯಲ್ಲೂ ಬದ್ಧವಾಗಿರುತ್ತದೆ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ.
ಅಮೃತಸರದಲ್ಲಿ ನಡೆಯುತ್ತಿರುವ 6ನೇ ಹಾರ್ಟ್ ಆಫ್ ಏಷ್ಯಾ ಶೃಂಗಸಭೆಯನ್ನು ಭಾರತದ ಪ್ರಧಾನಿ ಮತ್ತು ಆಫ್ಘಾನಿಸ್ತಾನದ ಅಧ್ಯಕ್ಷ ಡಾ| ಅಶ್ರಫ್ ಘಾನಿ ಇಂದು ಉದ್ಘಾಟನೆ ಮಾಡಿದರು. ಭಾರತ, ಪಾಕಿಸ್ತಾನ, ಆಫ್ಘಾನಿಸ್ತಾನ, ಅಜೆರ್'ಬೈಜಾನ್, ಚೀನಾ, ಇರಾನ್, ಕಜಕಸ್ತಾನ, ಕಿರ್ಗಿಸ್ತಾನ, ರಷ್ಯಾ, ಸೌದಿ ಅರೇಬಿಯಾ, ತಜಿಕಿಸ್ತಾನ್, ಟರ್ಟಿ, ತುರ್ಕ್'ಮೆನಿಸ್ತಾನ, ಯುಎಇ ಸೇರಿದಂತೆ 40 ರಾಷ್ಟ್ರಗಳು ಹಾಗೂ ಸಂಸ್ಥೆಗಳು ಈ ಶೃಂಗಸಭೆಯಲ್ಲಿ ಪಾಲ್ಗೊಂಡಿವೆ. ಆಯಾ ದೇಶದ ವಿದೇಶಾಂಗ ಸಚಿವರುಗಳು ಈ ಸಭೆಯಲ್ಲಿ ಭಾಗವಹಿಸಿದ್ದಾರೆ. ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅನಾರೋಗ್ಯ ಹಿನ್ನೆಲೆಯಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.
ಆಫ್ಘಾನಿಸ್ತಾನದಲ್ಲಿ ಶಾಂತಿ ಸುವ್ಯವಸ್ಥೆ ಸ್ಥಾಪಿಸುವ ಉದ್ದೇಶದಿಂದ ಕ್ರಿಯಾ ಯೋಜನೆ ಚರ್ಚಿಸಿ ರೂಪಿಸುವುದು ಈ ಬಾರಿಯ "ಹಾರ್ಟ್ ಆಫ್ ಏಷ್ಯಾ" ಸಮ್ಮೇಳನದ ಪ್ರಮುಖ ಗುರಿಗಳಲ್ಲೊಂದು.
