Asianet Suvarna News Asianet Suvarna News

ಸಿಎಗಳು ದೇಶದ ಆರ್ಥಿಕ ಸ್ವಾಸ್ಥ್ಯ ಕಾಪಾಡುವ ವೈದ್ಯರು: ಪ್ರಧಾನಿ ಮೋದಿ

ಚಾರ್ಟರ್ಡ್ ಅಕೌಂಟೆಂಟ್'ಗಳನ್ನು ಸಮಾಜದ ಆರ್ಥಿಕ ಸ್ವಾಸ್ಥ್ಯವನ್ನು ಕಾಪಾಡುವ ವೈದ್ಯರೆಂದು ಈ ವೇಳೆ ಮೋದಿ ಬಣ್ಣಿಸಿದ್ದಾರೆ. ಜನರು ತೆರಿಗೆಗಳ್ಳತನಕ್ಕೆ ಇಳಿಯದಂತೆ ನಿಯಂತ್ರಿಸಲು ಸಿಎಗಳಿಂದ ಸಾಧ್ಯ. ಹೀಗಾಗಿ, ಕಪ್ಪುಹಣವನ್ನು ತಡೆಯಲು ಸಿಎಗಳ ಪಾತ್ರ ಬಹಳ ಮಹತ್ವದ್ದು ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.

pm modi speech addressing chartered accountants during icai foundation day function

ನವದೆಹಲಿ(ಜುಲೈ 01): ಏನೇ ರಾಜಕೀಯ ಪರಿಣಾಮವಾಗಲೀ ತಮ್ಮ ಸರಕಾರವು ಕಾಳಧನಿಕರನ್ನು ಕೆಡವಿಹಾಕುವುದನ್ನು ತಪ್ಪಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಪಣತೊಟ್ಟಿದ್ದಾರೆ. ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ(ಐಸಿಎಐ)ಯ ಸಂಸ್ಥಾಪನಾ ದಿನದಂದು ಚಾರ್ಟರ್ಡ್ ಅಕೌಂಟೆಂಟ್ಸ್'ಗಳನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಚಾರ್ಟರ್ಡ್ ಅಕೌಂಟೆಂಟ್'ಗಳನ್ನು ಸಮಾಜದ ಆರ್ಥಿಕ ಸ್ವಾಸ್ಥ್ಯವನ್ನು ಕಾಪಾಡುವ ವೈದ್ಯರೆಂದು ಈ ವೇಳೆ ಮೋದಿ ಬಣ್ಣಿಸಿದ್ದಾರೆ. ಜನರು ತೆರಿಗೆಗಳ್ಳತನಕ್ಕೆ ಇಳಿಯದಂತೆ ನಿಯಂತ್ರಿಸಲು ಸಿಎಗಳಿಂದ ಸಾಧ್ಯ. ಹೀಗಾಗಿ, ಕಪ್ಪುಹಣವನ್ನು ತಡೆಯಲು ಸಿಎಗಳ ಪಾತ್ರ ಬಹಳ ಮಹತ್ವದ್ದು ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಮೋದಿ ಭಾಷಣದ ಹೈಲೈಟ್ಸ್

* ಈ ಆರ್ಥಿಕ ಬದಲಾವಣೆಯ ನೇತೃತ್ವವನ್ನು ಲೆಕ್ಕ ಪರಿಶೋಧಕರ ಸೇನೆ ವಹಿಸಬೇಕು

* ನೀವು(ಚಾರ್ಟರ್ಡ್ ಅಕೌಂಟೆಂಟ್ಸ್) ಒಂದು ಸಲ ನಿರ್ಧರಿಸಿದರೆ ತೆರಿಗೆ ಕಳ್ಳತನ ಮಾಡುವ ಧೈರ್ಯ ಯಾರಿಗೂ ಇರುವುದಿಲ್ಲ

* ತಮ್ಮನ್ನು ಯಾರೋ ರಕ್ಷಿಸುತ್ತಾರೆ ಎಂಬ ನಂಬಿಕೆ ಇದ್ದಾಗ ಮಾತ್ರ ಜನ ತಪ್ಪು ಮಾಡುತ್ತಾರೆ

* ಈ ದೇಶ ಬದಲಿಸಲು ಅಸ್ತ್ರವಾಗಿ ಜಿಎಸ್​ಟಿ ಸಿಕ್ಕಿದೆ

* 2022ಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾಗುತ್ತದೆ. ನಮ್ಮ ಕನಸಿನ ಭಾರತವನ್ನು ನಿರ್ಮಿಸಲು ನಿಮ್ಮ ಕೊಡುಗೆ ತುಂಬಾ ಅವಶ್ಯಕತೆ ಇದೆ. 2022ರೊಳಗೆ ಭರವಸೆಯ ಭಾರತ ನಿರ್ಮಿಸೋಣ

* ನಿಮ್ಮ ಸಹಿಗೆ ಈ ದೇಶದ ಪ್ರಧಾನಿಯ ಸಹಿಗಿಂತಲೂ ಹೆಚ್ಚಿನ ಬೆಲೆ ಇದೆ. ನಿಮ್ಮ ಸಹಿ ಪ್ರಾಮಾಣಿಕತೆಯ ಸಾಕ್ಷಿ ಹೇಳುತ್ತದೆ

* ಯಾವ ಬ್ಯಾಲೆನ್ಸ್ ಶೀಟ್​ ಮೇಲೆ ನೀವು ಸಹಿ ಹಾಕುತ್ತೀರೋ ಅದು ಸರಿಯಾಗಿದೆ ಎಂದು ಈ ದೇಶ ನಂಬುತ್ತದೆ

* ಈ ದೇಶದ ಜನತೆಯೂ ನಿಮ್ಮ ಸಹಿಯನ್ನು ನಂಬುತ್ತಾರೆ. ದೇಶದ ಜನರ ಭರವಸೆಯನ್ನು ಹುಸಿಗೊಳಿಸಬೇಡಿ

* ಪ್ರಾಮಾಣಿಕತೆಯ ಉತ್ಸವದಲ್ಲಿ ಪಾಲ್ಗೊಳ್ಳುವಂತೆ ನಿಮ್ಮನ್ನು ಆಹ್ವಾನಿಸಲು ಬಂದಿದ್ದೇನೆ. ನಿಮ್ಮ ಕೆಲಸದ ಪ್ರಾವಿತ್ರ್ಯತೆಯನ್ನು ಅರಿತುಕೊಳ್ಳಿ. ಈ ಸಮಾಜ ಎಷ್ಟು ಗೌರವಿಸುತ್ತದೆ ಎಂಬುದು ನಿಮ್ಮ ಗಮನಕ್ಕೆ ಬರುತ್ತದೆ

* ನಮ್ಮ ದೇಶ ಹೊಸ ತಿರುವಿಗೆ ಬಂದು ನಿಂತಿದೆ

* 1947ರಲ್ಲಿ ಆಗಿದ್ದು ಈ ದೇಶದ ಏಕೀಕರಣ. ಇಂದು ಆಗಿರುವುದು ಭಾರತದ ಆರ್ಥಿಕ ಏಕೀಕರಣ

* ಒಂದು ದೇಶ, ಒಂದೇ ತೆರಿಗೆ, ಒಂದು ಮಾರುಕಟ್ಟೆ ಎಂಬ ಕ್ರಾಂತಿಯಾಗಿದೆ

* ಇಂದು ನಿಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡುವ ಅಗತ್ಯವಿಲ್ಲ. ಈ ದೇಶ ನಿಮ್ಮದು ಮತ್ತು ಮುಂದಿನ ಪೀಳಿಗೆಯದ್ದು

* ಕಳೆದ 11 ವರ್ಷಗಳಲ್ಲಿ ಕೇವಲ 25 ಮಂದಿ ಲೆಕ್ಕ ಪರಿಶೋಧಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಕೇವಲ ಇಷ್ಟು ಮಂದಿ ಮಾತ್ರ ತಪ್ಪು ಮಾಡಿದ್ದಾರಾ ? 1400 ಪ್ರಕರಣಗಳು ಹಲವು ವರ್ಷಗಳಿಂದ ತನಿಖೆ ಹಂತದಲ್ಲೇ ಇವೆ

* ನೋಟ್​ ಬ್ಯಾನ್​ ಬಳಿಕ ಈ ನಕಲಿ ಕಂಪನಿಗಳಿಗೆ ಯಾರಾದರೊಬ್ಬರು ಸಹಕಾರ ನೀಡಿರಬೇಕಲ್ಲವೇ ? ಈ ಕಂಪನಿಗಳು ಯಾವುದೋ ಆರ್ಥಿಕ ವೈದ್ಯರ ಹತ್ತಿರ ಹೋಗಿರಲೇಬೇಕು?

* ನನಗೆ ಗೊತ್ತಿದೆ, ಅವರು ನಿಮ್ಮ ಬಳಿ ಬಂದಿರಲಿಕ್ಕಿಲ್ಲ, ಬೇರಾರ ಬಳಿಯೋ ಹೋಗಿರಬೇಕು. ಇಂಥ ಕಳ್ಳರು, ಲೂಟಿಕೋರರಿಗೆ ಕಳ್ಳ ಮಾರ್ಗ ತೋರಿಸಿರುವ ಚಾರ್ಟೆಡ್​ ಅಕೌಂಟೆಂಟ್​ಗಳನ್ನು ನೀವು ಗುರುತಿಸಬೇಕಲ್ಲವೇ ?

* ದೇಶದಲ್ಲಿ 2.88 ಲಕ್ಷಕ್ಕಿಂತಲೂ ಹೆಚ್ಚು ಚಾರ್ಟೆಡ್​ ಅಕೌಂಟೆಂಟ್​'ಗಳು ಇದ್ದಾರೆ

* ಕಳೆದ ವರ್ಷ 2.18 ಕೋಟಿ ಭಾರತೀಯರು ವಿದೇಶ ಪ್ರವಾಸ ಮಾಡಿದ್ದಾರೆ

* ಪ್ರತಿ ಪಕ್ಷ ಕೋಟ್ಯಂತರ ವಾಹನಗಳು ಖರೀದಿಯಾಗುತ್ತವೆ

* ಕೇವಲ 32 ಲಕ್ಷ ಜನ ಮಾತ್ರ ತಮ್ಮ ವಾರ್ಷಿಕ ಆದಾಯ 10 ಲಕ್ಷ ಮೀರಿದೆ ಎನ್ನುತ್ತಾರೆ, ಇದು ಯಾರಾದರೂ ನಂಬುವಂಥ ಮಾತಾ ? ಇದನ್ನು ನೀವೂ ನಂಬುತ್ತೀರಾ ?

* ತೆರಿಗೆ ಕಳ್ಳತನ ಭಾರತದ ಅತ್ಯಂತ ದೊಡ್ಡ ಸಮಸ್ಯೆ. ತಮ್ಮ ಗ್ರಾಹಕರು ಪ್ರಾಮಾಣಿಕವಾಗಿ ತೆರಿಗೆ ಪಾವತಿಸುವಂತೆ ಲೆಕ್ಕ ಪರಿಶೋಧಕರು ಮನವೊಲಿಸಬೇಕು. ಗ್ರಾಹಕರಿಗೆ ತಪ್ಪು ಸಲಹೆ ನೀಡುವವರನ್ನು ಗುರುತಿಸಬೇಕು, ಅಂತಹವ ವಿರುದ್ಧ ಕ್ರಮ ಕೈಗೊಳ್ಳಬೇಕು

* 3 ಲಕ್ಷಕ್ಕೂ ಹೆಚ್ಚು ಕಂಪನಿಗಳು, ನೋಂದಣಿಯಾಗಿದ್ದ ಕಂಪನಿಗಳ ವ್ಯವಹಾರ ಸಂಶಯಾಸ್ಪದವಾಗಿದೆ. ದೇಶದ ಎದುರು ಮೊಟ್ಟ ಮೊದಲ ಬಾರಿಗೆ ಈ ವಿಷಯ ಹಂಚಿಕೊಳ್ಳುತ್ತಿದ್ದೇನೆ

* ಇಂಥ ಕಂಪನಿಗಳ ಸಂಖ್ಯೆ ಎಷ್ಟು ಹೆಚ್ಚಾಗುತ್ತದೆ ಎಂದು ಈಗಲೇ ಹೇಳಲು ಕಷ್ಟ. ಇನ್ನು ಕೆಲವೇ ದಿನಗಳಲ್ಲಿ ಈ ಸರ್ಕಾರದ ತಾಕತ್ತು, ಒಬ್ಬ ರಾಜಕಾರಣಿಯ ತಾಕತ್ತು ಈ ದೇಶಕ್ಕೆ ಗೊತ್ತಾಗುತ್ತದೆ

* ಒಂದೇ ಒಂದು ಸಹಿಯಿಂದ 1 ಲಕ್ಷ ಕಂಪನಿಗಳಿಗೆ ಬೀಗ ಜಡಿಯಲಾಗಿದೆ, ಇದು ಸಣ್ಣ ನಿರ್ಧಾರವಲ್ಲ. ದೇಶದ ಹಿತಕ್ಕಾಗಿ ಇಂತಹ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ

* ಯಾರು ಬಡವರನ್ನು ಕೊಳ್ಳೆ ಹೊಡೆದಿದ್ದಾರೋ ಅವರು ಅದೆಲ್ಲವನ್ನೂ ಬಡವರಿಗೆ ಮರಳಿಸಲೇಬೇಕು

* 37 ಸಾವಿರ ನಕಲಿ ಕಂಪನಿಗಳನ್ನು ಈಗಾಗಲೇ ಗುರುತಿಸಲಾಗಿದೆ

* ಕಾನೂನು ಉಲ್ಲಂಘಿಸುವ ಕಂಪನಿಗಳ ವಿರುದ್ಧ ಮುಂದಿನ ದಿನಗಳಲ್ಲಿ ಇನ್ನಷ್ಟು ಕಠಿಣ ನಿರ್ಧಾರ

* ಇದರಿಂದ ಯಾವ್ಯಾವ ರಾಜಕೀಯ ಪಕ್ಷಕ್ಕೆ ಎಷ್ಟೆಷ್ಟು ನಷ್ಟವಾಗುತ್ತದೆ ಎಂಬುದು ನನಗೆ ಗೊತ್ತು.

* ವಿದೇಶದಲ್ಲಿ ಕಪ್ಪುಹಣದ ಪರಿಸ್ಥಿತಿ ಏನಾಗುತ್ತದೆ ಎಂಬುದಕ್ಕೆ ಸ್ವಿಸ್ ಬ್ಯಾಂಕ್ ಅಂಕಿಅಂಶಗಳೇ ಸಾಕ್ಷಿ

* ಸ್ವಿಸ್ ಬ್ಯಾಂಕ್'ನಲ್ಲಿ ಭಾರತೀಯರ ಠೇವಣಿ ಅತ್ಯಂತ ಕಡಿಮೆ ಹಂತಕ್ಕೆ ಕುಸಿದಿದೆ. ಶೇ. 45ರಷ್ಟು ಹಣವನ್ನು ಕಾಳಧನಿಕರು ಸ್ವಿಸ್ ಬ್ಯಾಂಕ್​ನಿಂದ ಹೊರಗೆ ತೆಗೆದಿದ್ದಾರೆ

 

* 2014ರಲ್ಲಿ ನೀವು ನನಗೆ ಕೆಲಸ ಕೊಟ್ಟಿರಿ, ಅಂದಿನಿಂದ ಇಂದಿನವರೆಗೂ ಸ್ವಿಸ್ ಬ್ಯಾಂಕ್​ ಠೇವಣಿ ಕಡಿಮೆಯಾಗುತ್ತಿದೆ

* 2013ರಲ್ಲಿ ಸ್ವಿಸ್​ ಬ್ಯಾಂಕ್​​ನ ಭಾರತೀಯರ ಠೇವಣಿ ಶೇ. 43ರಷ್ಟು ಹೆಚ್ಚಾಗಿತ್ತು

* ಸ್ವಚ್ಚ ಭಾರತ ಅಭಿಯಾನ ಆರ್ಥಿಕ ಕ್ಷೇತ್ರದಲ್ಲೂ ಜಾರಿಯಲ್ಲಿದೆ

* ನೋಟ್ ಬ್ಯಾನ್ ಸಹ ಭ್ರಷ್ಟಾಚಾರ ಮತ್ತು ಕಪ್ಪು ಹಣದ ವಿರುದ್ಧದ ದೊಡ್ಡ ಹೆಜ್ಜೆಯಾಗಿತ್ತು

* ನವೆಂಬರ್ 8 ರ ನಂತರ ನೀವೆಲ್ಲರೂ ತುಂಬಾ ಕೆಲಸ ಮಾಡಬೇಕಾಯಿತು. ನಿಮ್ಮ ವೃತ್ತಿ ಜೀವನದಲ್ಲಿ ಅಷ್ಟೊಂದು ಕೆಲಸ ಮಾಡಿರಲಿಲ್ಲ

* ಅನೇಕರು ದೀಪಾವಳಿಯ ರಜೆಯಲ್ಲಿದ್ದಿರಿ, ರಜೆಯನ್ನೂ ರದ್ದುಪಡಿಸಿ ಕೆಲಸಕ್ಕೆ ಬಂದಿರಿ. ಕೆಲವು ಸಿಎ ಕಚೇರಿಗಳು ಹಗಲು- ರಾತ್ರಿ ಕೆಲಸ ಮಾಡಿವೆ

* ನೀವು ಒಳ್ಳೆಯ ಕೆಲಸ ಮಾಡಿದ್ದೀರೋ ಇಲ್ಲವೋ ಗೊತ್ತಿಲ್ಲ. ನಿಮ್ಮ ಗ್ರಾಹಕನಿಗಾಗಿ ಕೆಲಸ ಮಾಡಿದರೋ ನನಗೆ ಗೊತ್ತಿಲ್ಲ, ದೇಶಕ್ಕಾಗಿ ಮಾಡಿದ್ದೀರಿ.

* ಮನೆ ಸದಸ್ಯನೇ ಕಳ್ಳನಾಗಿ ಬಿಟ್ಟರೆ ಈ ಕುಟುಂಬ ಯಾವತ್ತಿಗೂ ಉದ್ಧಾರವಾಗುವುದಿಲ್ಲ

* ಇಡೀ ಕುಟುಂಬದಲ್ಲಿರುವವರೆಲ್ಲ ಕಳ್ಳತನ ಮಾಡುವುದಿಲ್ಲ. ಒಂದು ಕುಟುಂಬ ಹಾಳಾಗಲು ಒಬ್ಬ ಕಳ್ಳ ಸದಸ್ಯ ಸಾಕು

* ಇದೇ ರೀತಿ ಒಂದು ದೇಶದ ದೊಡ್ಡ ಸಂಕಟಗಳನ್ನು ಎದುರಿಸಿ ಮೇಲೆ ಬರಬಲ್ಲದು. ಜನರೆಲ್ಲ ಸೇರಿ ದೇಶವನ್ನು ಸಂಕಟದಿಂದ ಮೇಲೆತ್ತಬಲ್ಲರು

* ಆದರೆ, ದೇಶದೊಳಗೆ ಕಳ್ಳರಿದ್ದರೆ ಆ ದೇಶ ಉದ್ಧಾರವಾಗುವುದಿಲ್ಲ. ಕೆಲವೇ ಕೆಲವರಿಂದ ಅಭಿವೃದ್ಧಿ ನಿಂತು ಹೋಗುತ್ತದೆ, ಅಭಿವೃದ್ಧಿಯ ಕನಸು ನುಚ್ಚು ನೂರಾಗುತ್ತದೆ. ಅಂತಹವನ್ನು ಮಟ್ಟ ಹಾಕಲು ನಮ್ಮ ಸರ್ಕಾರ 3 ವರ್ಷಗಳಿಂದ ಕಠಿಣ ಕಾನೂನು ಜಾರಿಗೊಳಿಸುತ್ತಿದೆ

 

* ಭಾರತದ ಆರ್ಥಿಕತೆಯಲ್ಲಿ ಇದೊಂದು ಹೊಸ ಅಧ್ಯಾಯ

* ಜಗತ್ತಿನಾದ್ಯಂತ ಭಾರತದ ಚಾರ್ಟೆಡ್ ಅಕೌಂಟಂಟ್'​ಗಳಿಗೆ ಮಾನ್ಯತೆ ಇದೆ. ಭ್ರಷ್ಟರನ್ನು, ಕಳಂಕಿತರನ್ನು ಪ್ರಶ್ನಿಸುವ ಅಧಿಕಾರ ನಿಮಗೆಲ್ಲರಿಗೂ ಇದೆ. ನಿಮ್ಮ ಮೇಲೆ ಸಮಾಜದ ಆರ್ಥಿಕ ಆರೋಗ್ಯದ ಜವಾಬ್ದಾರಿ ಇದೆ. ನೀವು ದೇಶದ ಅರ್ಥವ್ಯವಸ್ಥೆಯ ಆಧಾರ ಸ್ತಂಭ

* ಈ ಹೊಸ ಪಠ್ಯಕ್ರಮ ಇನ್ನೂ ಅತ್ಯುತ್ತಮ ಚಾರ್ಟೆಡ್ ಅಕೌಂಟಂಟ್​ಗಳನ್ನು ನಿರ್ಮಿಸುತ್ತದೆ

* ಧರ್ಮ, ಅರ್ಥ, ಮೋಕ್ಷ, ಕಾಮಕ್ಕೆ ನಮ್ಮ ಶಾಸ್ತ್ರಗಳು ಮಾನ್ಯತೆ ಕೊಟ್ಟಿವೆ

* ನೀವು, ಆರ್ಥಿಕ ಜಗತ್ತಿನ  ಖುಷಿ ಮುನಿಗಳು. ಮೋಕ್ಷ ಮಾರ್ಗ ತೋರಿಸುವ ಖುಷಿ ಮುನಿಗಳಷ್ಟೇ ನೀವು ಕೂಡ ಪ್ರಮುಖರು

* ಆರ್ಥಿಕ ವಿಷಯಗಳಲ್ಲಿ ನಿಮ್ಮ ಮಾರ್ಗದರ್ಶನ ಮುಖ್ಯ. ಆರ್ಥಿಕ ಕ್ಷೇತ್ರದಲ್ಲಿ ಸರಿಯಾದ ಮಾರ್ಗ ತೋರಿಸುವ ಗುರುತರವಾದ ಜವಾಬ್ದಾರಿ ನೀವು ನಿರ್ವಹಿಸುತ್ತಿದ್ದೀರಿ

* ಇಂದು ನೀವು ನನ್ನ ಮೇಲೆ ಪ್ರೀತಿಯ ಸುರಿಮಳೆಗೈದಿದ್ದೀರಿ, ನನ್ನ ಉತ್ಸಾಹವನ್ನು ಇಮ್ಮಡಿಗೊಳಿಸಿದ್ದೀರಿ. ನಿಮ್ಮ ಪ್ರೀತಿಯಿಂದಾಗಿ ನಾನು ಇಂದು ಮನಸ್ಸು ಬಿಚ್ಚಿ ಮಾತನಾಡುತ್ತಿದ್ದೀನಿ

* ನನ್ನ, ನಿಮ್ಮ ದೇಶಭಕ್ತಿಯಲ್ಲಿ ಯಾವುದೇ ಕೊರತೆ ಇಲ್ಲ. ನಾನು ದೇಶವನ್ನು ಅಭಿವೃದ್ಧಿಗೊಳಿಸಲು ಬಯಸಿದಷ್ಟೇ ನೀವು ಬಯಸುತ್ತಿದ್ದೀರಿ

Follow Us:
Download App:
  • android
  • ios