ನವದೆಹಲಿ (ಜು.21) : ಪಾಕಿಸ್ತಾನದ ಜೊತೆ ಮಾತುಕತೆ ನಡೆಸಲು ಭಾರತ ಮತ್ತೊಮ್ಮೆ ನಿರಾಕರಿಸಿದೆ. ಈ ಕುರಿತು ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಬರೆದಿರುವ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಭಯೋತ್ಪಾದನೆಯ ವಿರುದ್ಧ ಪಾಕಿಸ್ತಾನ ನಿರ್ಣಾಯಕ ಕ್ರಮಗಳನ್ನು ಕೈಗೊಂಡರೆ ಮಾತ್ರ ಉಭಯ ದೇಶಗಳ ನುಡುವಿನ ಸಂಬಂಧ ಸುಧಾರಣೆ ಸಾಧ್ಯ ಎಂದು ಹೇಳಿದ್ದಾರೆ.

‘ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಮಾತುಕತೆ ನಡೆಯಬೇಕಾದರೆ, ನಂಬಿಕೆ, ಭಯೋತ್ಪಾದನೆ, ಹಿಂಸಾಚಾರ ಮತ್ತು ಹಗೆತನ ಮುಕ್ತ ವಾತಾವರಣವನ್ನು ಸೃಷ್ಟಿಸಬೇಕಿದೆ. ಭಯೋತ್ಪಾದನೆಯ ನೆರಳಿನಿಂದ ಮುಕ್ತವಾದ ವಾತಾವರಣ ನೆಲೆಸಬೇಕು ಎಂಬುದು ವಿದೇಶಾಂಗ ಸಚಿವಾಲಯದ ಅಭಿಪ್ರಾಯವೂ ಆಗಿದೆ’ ಎಂದು ಇಮ್ರಾನ್‌ ಖಾನ್‌ ಅವರಿಗೆ ಬರೆದಿರುವ ಪತ್ರದಲ್ಲಿ ಮೋದಿ ತಿಳಿಸಿದ್ದಾರೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ರವೀಶ್‌ ಕುಮಾರ್‌ ಹೇಳಿದ್ದಾರೆ.

ಪಾಕ್ ಕ್ರೀಡಾಪಟುಗಳಿಗೆ ಭಾರತದ ವೀಸಾ

ಇದೇ ವೇಳೆ ಮೋದಿ ಹಾಗೂ ಭಾರತದ ವಿದೇಶಾಂತ ಸಚಿವ ಜೈ ಶಂಕರ್‌ ಅವರು ಪಾಕಿಸ್ತಾನದ ಜೊತೆ ಮಾತುಕತೆಗೆ ಉತ್ಸುಕತೆ ತೋರಿದ್ದಾರೆ ಎಂಬ ಪಾಕ್‌ ಮಾಧ್ಯಮಗಳ ವರಿದಿಯನ್ನು ವಿದೇಶಾಂಗ ಸಚಿವಾಲಯ ನಿರಾಕರಿಸಿದೆ. ರಾಜತಾಂತ್ರಿಕ ಪದ್ಧತಿಯಮಂತೆ ಇಮ್ರಾನ್‌ ಖಾನ್‌ ಅವರ ಆಹ್ವಾನ ಪತ್ರವನ್ನು ಸ್ವೀಕರಿಸಿದ್ದರಿಂದ ನಾವು ಅದಕ್ಕೆ ಪ್ರತಿಕ್ರಿಯಿಸಿದ್ದೇವೆ ಎಂದು ರವೀಶ್‌ ಕುಮಾರ್‌ ಹೇಳಿದ್ದಾರೆ.

ಪಾಕ್‌ನೊಂದಿಗೆ ಮಾತುಕತೆಗೆ ಭಾರತ ಸಿದ್ಧ

ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿನ ಗೆಲುವಿಗಾಗಿ ಮೋದಿ ಅವರನ್ನು ಅಭಿನಂದಿಸಿ ಪತ್ರ ಬರೆದಿದ್ದ ಇಮ್ರಾನ್‌ ಖಾನ್‌, ಕಾಶ್ಮೀರ ಸೇರಿದಂತೆ ಎಲ್ಲಾ ವಿಷಯಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಆ ಬಳಿಕ ನಡೆದ ಶಾಂಘೈ ಸಹಕಾರ ಶೃಂಘದ ವೇಳೆಯೂ ಉಭಯ ನಾಯಕರು ಮಾತುಕತೆ ನಡೆಸಿರಲಿಲ್ಲ.